ಮಡಿಕೇರಿ, ಡಿ. 8: ಸರಕಾರದ ಹಲವು ಕಾರ್ಯಕ್ರಮಗಳ ಸಂದರ್ಭ ಮೆರವಣಿಗೆ, ಜಾಗೃತಿ ಜಾಥಾ, ಮತ್ತಿತರ ಕಾರ್ಯಕ್ರಮಗಳಿಗೆ ಸರಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವದು ಸಮಂಜಸವಲ್ಲ. ಇದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಯಾಗಲಿದ್ದು, ಮುಂದಿನ ದಿನಗಳಲ್ಲಿ ಪ್ರೌಢಶಾಲೆಯ ತನಕ ಶಾಲಾ ವಿದ್ಯಾರ್ಥಿಗಳನ್ನು ಇಂತಹ ವಿಚಾರಗಳಿಗಾಘಿ ಬಳಸಿಕೊಳ್ಳಬಾರ ದೆಂದು ಮಡಿಕೇರಿ ತಾಲೂಕು ಪಂಚಾಯಿತಿ ಸಭೆಯಲ್ಲಿ ಆಕ್ಷೇಪ ವ್ಯಕ್ತಗೊಂಡಿತು.ಮುಗ್ಧ ಮನಸ್ಸಿನ ಅಮಾಯಕ ವಿದ್ಯಾರ್ಥಿಗಳನ್ನು ಈ ರೀತಿಯಾಗಿ ಬಳಸಿಕೊಳ್ಳಬಾರದು ಎಂಬ ನಿರ್ಣಯ ದೊಂದಿಗೆ ಈ ಕುರಿತು ರಾಜ್ಯದ ಶಿಕ್ಷಣ ಸಚಿವರಿಗೂ ಪತ್ರ ಬರೆಯಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳ ಲಾಯಿತು. ಮಡಿಕೇರಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಯಿತು.
ಸರಕಾರಿ ಶಾಲೆಗಳಲ್ಲಿ ಫಲಿತಾಂಶ ಕಡಿಮೆ ಬರುತ್ತಿರುವ ಕುರಿತಾಗಿ ನಡೆದ ಚರ್ಚೆಯ ಸಂದರ್ಭ ಈ ವಿಚಾರ ಮುಂದಿಟ್ಟ ತಾ.ಪಂ. ಮಾಜಿ ಅಧ್ಯಕ್ಷ ಹಾಲಿ ಸದಸ್ಯ ನಾಗೇಶ್ ಕುಂದಲ್ಪಾಡಿ ಅವರು ಅಮಾಯಕ ವಿದ್ಯಾರ್ಥಿಗಳನ್ನು ಇಂತಹ ಕಾರ್ಯಕ್ರಮಗಳಿಗೆ ಬಳಸಬಾರದು ಇದು ವಿದ್ಯಾರ್ಥಿಗಳ ಸಾಧನೆಗೆ ತೊಡಕಾಗುತ್ತದೆ. ಈ ಬಗ್ಗೆ ನಿರ್ಬಂಧವಿದ್ದರೂ ಸರಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಅದರಲ್ಲೂ ಯಾವದೇ ಮಾಹಿತಿಯನ್ನು ಅರ್ಥೈಸಿಕೊಳ್ಳಲು ಸೂಕ್ತ ವಯಸ್ಸಲ್ಲದ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಇದಕ್ಕೆ ಇತರ ಕೆಲವು ಸದಸ್ಯರು ಸಹಮತ ವ್ಯಕ್ತಪಡಿಸಿದರು. ನಿನ್ನೆ ನಡೆದ ಜನ-ಮನ ಕಾರ್ಯಕ್ರಮದಲ್ಲ್ಲೂ ವಿದ್ಯಾರ್ಥಿಗಳನ್ನು ಬಳಸಲಾಗಿದೆ ಎಂದು ತಾ.ಪಂ. ಅಧ್ಯಕ್ಷೆ ಶೋಭಾ ಮೋಹನ್ ಅವರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಬಿ.ಇ.ಓ. ಬೊಮ್ಮೇಗೌಡ ಅವರು ಜನತೆಗೆ ಹಲವು ವಿಚಾರಗಳ ಬಗ್ಗೆ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳನ್ನು ಕರೆಸಿಕೊಳ್ಳಲಾಗುತ್ತಿದೆ. ಜಿಲ್ಲಾಧಿಕಾರಿಗಳ ಮೂಲಕ ಆದೇಶದಂತೆಯೂ ಇಂತಹ ಕಾರ್ಯಕ್ರಮಗಳಿಗೆ ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ನಾಗೇಶ್ ಕುಂದಲ್ಪಾಡಿ ಅವರು, ಈ ವಯೋಮಿತಿಯ ಮಕ್ಕಳು ಮುಗ್ಧರಾಗಿದ್ದು, ಅವರನ್ನು ಬೀದಿಗೆ ತರಬಾರದು. ಅವರಿಂದ ಜಾಗೃತಿ ಮೂಡಿಸಬಹುದು ಎಂಬದು ಸರಿಯಲ್ಲ. ಇದು ಅವರ ವೈಯಕ್ತಿಕ, ಶೈಕ್ಷಣಿಕ ಸಾಧನೆಗೂ ಪ್ರಯೋಜನವಾಗದು. ಇವರನ್ನು ಬೀದಿಯಲ್ಲಿ ಘೋಷಣೆ ಕೂಗಲು ಬಳಸಬಾರದು. ಬದಲಿಗೆ, ಎನ್.ಸಿ.ಸಿ., ಎನ್.ಎಸ್.ಎಸ್., ಸ್ಕೌಟ್- ಗೈಡ್ಸ್, ರೆಡ್‍ಕ್ರಾಸ್‍ನ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಿ ಎಂದು ಸಲಹೆಯಿತ್ತರು. ಈ ಬಗ್ಗೆ ನಿರ್ಣಯ ಕೈಗೊಂಡು ಶಿಕ್ಷಣ ಸಚಿವರ ಗಮನಕ್ಕೆ ತರಲು ನಿರ್ಧರಿಸಲಾಯಿತು. ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳನ್ನು ತಕ್ಷಣ ದುರಸ್ತಿಗೊಳಿಸುವದು, ಅಂಗನವಾಡಿಗಳ ಸಮಸ್ಯೆ, ಕೆಲವು ಶಾಲೆಗಳಲ್ಲಿ ಶಾಶ್ವತ ಶಿಕ್ಷಕರಿಲ್ಲದೆ ಕೇವಲ ಅತಿಥಿ ಶಿಕ್ಷಕರೇ ಇರುವದು, ಕಂಪ್ಯೂಟರ್ ದುರಸ್ತಿಗೀಡಾಗಿರುವದು, ಇತ್ಯಾದಿ ವಿಚಾರಗಳ ಬಗ್ಗೆ ಚರ್ಚೆ ನಡೆದು ಸೂಕ್ತ ಕ್ರಮಕ್ಕೆ ಸಂಬಂಧಿಸಿದಂತೆ ನಿರ್ದೇಶನ ನೀಡಲಾಯಿತು.
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆಯ ಬಗ್ಗೆ ಸಂಬಂಧಿಸಿದ ಜಿ.ಪಂ., ತಾ.ಪಂ. ಸದಸ್ಯರು, ಗ್ರಾ.ಪಂ. ಅಧ್ಯಕ್ಷ, ಸದಸ್ಯರಿಗೆ ಮಾಹಿತಿ ಸಿಗುತ್ತಿಲ್ಲ ಎಂದು ಕೆಲವು ಸದಸ್ಯರು ಆಕ್ಷೇಪಿಸಿದರು. ಮುಂದಿನ ದಿನಗಳಲ್ಲಿ ಈ ಬಗ್ಗೆ ಮುತುವರ್ಜಿ ವಹಿಸಲು ತಾ.ಪಂ. ಅಧ್ಯಕ್ಷರು, ಕಾರ್ಯನಿರ್ವಹಣಾಧಿಕಾರಿ ಇಜಾಜ್ ಪಾಷ ಸೂಚಿಸಿದರು.
ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹಲವು ವಿಚಾರಗಳು ಗಂಭೀರವಾಗಿದ್ದು, ತಾ.ಪಂ. ಸಭೆಗೆ ತಹಶೀಲ್ದಾರರು ಪಾಲ್ಗೊಳ್ಳಬೇಕೆಂದು ಒತ್ತಾಯ ಕೇಳಿಬಂತು. ಈ ಬಗ್ಗೆ ಚರ್ಚೆ ನಡೆದು ಮುಂದಿನ ಸಭೆಗೆ ಎಲ್ಲರಿಗೂ ಮಾಹಿತಿ ನೀಡಿ ಸಭೆಯಲ್ಲಿ ಪಾಲ್ಗೊಳ್ಳುವಂತೆ ನಿರ್ಣಯಿಸಲಾಯಿತು.
ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶವನ್ನು ಉನ್ನತೀಕರಿಸಲು ಶಿಕ್ಷಣ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದ್ದಾಗಿ ಹೇಳಿದ ಕ್ಷೇತ್ರ ಶಿಕ್ಷಣಾಕಾರಿ ಪ್ರತಿ ವಿಷಯದ ಬಗ್ಗೆ ಸಂಬಂಧಪಟ್ಟ ಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ ಎಂದರು.
ಅತೀ ಕಡಿಮೆ ಫಲಿತಾಂಶ ಬಂದ ಶಾಲೆಗಳ ಶಿಕ್ಷಕರ ವೇತನವನ್ನು ಕಡಿತಗೊಳಿಸಲು ಜಿಲ್ಲಾಕಾರಿಯವರಿಂದ ಆದೇಶ ಬಂದಿರುವದಾಗಿ ತಿಳಿಸಿದ ಅವರು ಉತ್ತಮ ಫಲಿತಾಂಶ ಬರಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದರು. ಶಿಶು ಅಭಿವೃದ್ಧಿ ಯೋಜನಾಕಾರಿ ಮಾತನಾಡುತ್ತಾ, ಸಿಬ್ಬಂದಿ ಕೊರತೆ ಹಾಗೂ ಇತರೆ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುವ ಒತ್ತಡವಿದ್ದು, ಅಂಗನವಾಡಿಗಳಿಗೂ ಖುದ್ದು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು. ಕನಿಷ್ಠ ವಾರದಲ್ಲಿ ಮೂರರಿಂದ ನಾಲ್ಕು ಅಂಗನವಾಡಿಗಳಿಗೆ ಭೇಟಿ ನೀಡಿದಲ್ಲಿ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುದಿಲ್ಲ ಎಂದು ಕಾರ್ಯ ನಿರ್ವಾಹಕ ಅಕಾರಿ ಎಜಾಜ್ ಪಾಷ ಸಲಹೆ ನೀಡಿದರು.
ಹಾಸ್ಟೆಲ್‍ಗಳಲ್ಲಿ ಪದೇ ಪದೇ ಶೌಚಾಯಲಗಳು ರಿಪೇರಿ ಆಗುತ್ತಿದ್ದು, ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು. ನಿರ್ಮಿತಿ ಕೇಂದ್ರದವರನ್ನು ಸಭೆಗೆ ಕರೆಸಿ ಅವರಿಂದ ಮಾಹಿತಿ ಪಡೆಯಿರಿ. ನಿರ್ಮಿತಿ ಕೇಂದ್ರದ ಅಕಾರಿಗಳು ಸಭೆಗೆ ಬಾರದಿದ್ದಲ್ಲಿ ಜಿಲ್ಲಾಕಾರಿಗೆ ದೂರು ದಾಖಲಿಸಲಾಗುವುದು ಎಂದು ನಾಗೇಶ್ ಕುಂದಲ್ಪಾಡಿ ಎಚ್ಚರಿಸಿದರು.
ರಕ್ಷಾ ಸಮಿತಿ ಸಭೆಗೆ ತಾಲೂಕು ಪಂಚಾಯಿತಿ ಸದಸ್ಯರನ್ನು ಆಹ್ವಾನಿಸುವುದಿಲ್ಲ ಎಂದು ಸದಸ್ಯೆ ಇಂದಿರಾ ಹರೀಶ್ ಆರೋಪಿಸಿದರು. ಮುಂದಿನ ಸಭೆಗಳಿಗೆ ತಾಲೂಕು, ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರನ್ನು ಕರೆದು ರಕ್ಷಾ ಸಮಿತಿ ಸಭೆ ನಡೆಸುವಂತೆ ಕಾರ್ಯನಿರ್ವಾಹಣಾಕಾರಿ ಆರೋಗ್ಯ ಇಲಾಖೆಯ ವೈದ್ಯ ಡಾ. ರವಿ ಕುಮಾರ್‍ಗೆ ಸೂಚಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಸ್ಥಾ¬ಸಮಿತಿ ಅಧ್ಯಕ್ಷ ರಾಯ್ ತಮ್ಮಯ್ಯ, ಪಂಚಾಯಿತಿ ಸದಸ್ಯರು, ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.