ಮಡಿಕೇರಿ, ಡಿ. 1: ಮುಟ್ಲು ಗ್ರಾಮದಲ್ಲಿ 13.1.2010 ರಂದು ಮೂವರ ಮೇಲೆ ಗುಂಡಿಕ್ಕಿದ ಕೆ.ಎಸ್. ಭೀಮಣಿಗೆ 10 ವರ್ಷ ಕಠಿಣ ಸಜೆ ಮತ್ತು ದಂಡ ವಿಧಿಸಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಡಿ. ಪವನೇಶ್ ತೀರ್ಪು ನೀಡಿದ್ದಾರೆ.ಹತ್ಯೆ ಯತ್ನಕ್ಕಾಗಿ 10 ವರ್ಷ ಕಠಿಣ ಸಜೆ ಮತ್ತು 10 ಸಾವಿರ ದಂಡ ವಿಧಿಸಲಾಗಿದೆ. ಪರವಾನಗಿ ಇಲ್ಲದೇ ಕೋವಿ ಬಳಸಿದ್ದ ಕಾರಣಕ್ಕೆ 1 ವರ್ಷ ಕಠಿಣ ಸಜೆ ಮತ್ತು ರೂ. 3 ಸಾವಿರ ದಂಡ, ಕೋವಿಯನ್ನು ಬಳಸಿದ ಅಪರಾಧಕ್ಕಾಗಿ 3 ವರ್ಷ ಕಠಿಣ ಸಜೆ ಮತ್ತು ರೂ. 5 ಸಾವಿರ ದಂಡ ವಿಧಿಸಲಾಗಿದೆ. ತನ್ನ ಕೋವಿಯನ್ನು ಅಪರಾಧಕ್ಕಾಗಿ ನೀಡಿದ್ದಕ್ಕೆ ಕೆ.ಟಿ. ಸುಬ್ಬಯ್ಯ ಜೈಲಿನಲ್ಲಿ ಕಳೆದ 5 ತಿಂಗಳು, 12 ದಿನವನ್ನು ಶಿಕ್ಷೆ ಎಂದು ಪರಿಗಣಿಸಲಾಗಿದೆ. ಇದರೊಂದಿಗೆ ರೂ. 2 ಸಾವಿರ ದಂಡ ವಿಧಿಸಲಾಗಿದೆ. ವಸೂಲಾಗುವ ದಂಡದ ಹಣದಲ್ಲಿ ಗಾಯಾಳುಗಳಾದ ಪಳಂಗಪ್ಪಗೆ ರೂ. 10 ಸಾವಿರ, ಸುರೇಶ್, ಚಂಗಮ್ಮಯ್ಯ ಅವರಿಗೆ ತಲಾ ರೂ. 3 ಸಾವಿರ ಪರಿಹಾರವಾಗಿ ನೀಡುವಂತೆ ಆದೇಶಿಸಲಾಗಿದೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಎ. ಕೃಷ್ಣವೇಣಿ ವಾದಿಸಿದರು.
ಘಟನೆ ವಿವರ: ಕುಂಬಾರಗಡಿಗೆ ನಿವಾಸಿ ಕೆ.ಟಿ. ಸುಬ್ಬಯ್ಯ ಅವರ ತಂದೆ ತಿಥಿ ಕಾರ್ಯಕ್ರಮದಲ್ಲಿ ಹತ್ಯೆ ಯತ್ನ ಘಟನೆ ನಡೆದಿತ್ತು. ಕೆ.ಟಿ. ಸುಬ್ಬಯ್ಯ ಅವರ ಮೈಮೇಲೆ ದೇವರು ಬಂದಂತೆ ವರ್ತಿಸಿದ್ದಕ್ಕೆ, ಮದ್ಯಪಾನ ಮಾಡದಿದ್ದಲ್ಲಿ ದೇವರು ಬರುತ್ತಿರಲಿಲ್ಲ ಎಂದು ಸುರೇಶ್ ಎಂಬವರು ಹಾಸ್ಯ ಮಾಡಿದರು. ಇದಕ್ಕೆ ಆರೋಪಿಗಳಾದ ಕೆ.ಟಿ. ಸುಬ್ಬಯ್ಯ, ಕೆ.ಎಸ್. ದೊರೆಮಣಿ, ಕೆ.ಎಸ್. ರಾಜಮಣಿ, ಕೆ.ಎಸ್. ಭೀಮಣಿ ಜಗಳ ತೆಗೆದರು.
ತಿಥಿ ಕಾರ್ಯಕ್ರಮ ಮುಗಿಸಿ ಸುರೇಶ್, ಪಳಂಗಪ್ಪ, ಚಂಗಮ್ಮಯ್ಯ, ಅಶೋಕ, ತಿಮ್ಮಯ್ಯ ಬೆಟ್ಟದ ಇಳಿಜಾರು ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕೆ.ಟಿ. ಸುಬ್ಬಯ್ಯ ಅವರ ಕೋವಿಯಿಂದ ಕೆ.ಎಸ್. ಭೀಮಣಿ ಗುಂಡಿಕ್ಕಿದ್ದರಿಂದ ಸುರೇಶ್, ಚಂಗಮ್ಮಯ್ಯ, ಪಳಂಗಪ್ಪ ಅವರು ತೀವ್ರವಾಗಿ ಗಾಯಗೊಂಡಿದ್ದರು. ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.