ಮಡಿಕೇರಿ, ನ. 17: ಕೊಡಗು ಜಿಲ್ಲೆಯಲ್ಲಿ ಮುಸ್ಲಿಂ ಮೂಲಭೂತವಾದಿಗಳ ಉಪಟಳ ಹೆಚ್ಚಾಗಿದೆಯೆಂದು ಆರೋಪಿಸಿರುವ ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಸಂಚಾಲಕ ಕೆ.ಟಿ.ಉಲ್ಲಾಸ್, ಸರ್ಕಾರ ದಿಟ್ಟ ಕ್ರಮ ಕೈಗೊಳ್ಳುವ ಮೂಲಕ ದೌರ್ಜನ್ಯವನ್ನು ಹತ್ತಿಕ್ಕಬೇಕೆಂದು ಒತ್ತಾಯಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರ ಪೇಟೆಯಲ್ಲಿ ವಕೀಲ ಪದ್ಮನಾಭ, ಅವರ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣವನನ್ನು ಖಂಡಿಸಿದರು. ಮುಸ್ಲಿಂ ಮೂಲಭೂತ ವಾದಿಗಳು ನಿರಂತರವಾಗಿ ಹಿಂದೂ ಸಂಘÀಟನೆಗಳ ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ಧಾಳಿ ನಡೆಸುತ್ತಿದ್ದಾರೆ. ಸಾಮಾಜಿಕ ಭಯೋತ್ಪಾದನೆ ನೆಲೆಯೂರುತ್ತಿದ್ದು, ಸರಣಿ ಹತ್ಯೆಗಳು ನಡೆಯುತ್ತಿವೆ. ಹಿಂದೂ ಪರ ಸಂಘಟನೆಗಳ ಪ್ರಮುಖರ ಹತ್ಯೆ ಪ್ರಕರಣದಲ್ಲಿ ಪಿಎಫ್‍ಐ ಕಾರ್ಯಕರ್ತರೆ ಬಂಧನಕ್ಕೆ ಒಳಗಾಗಿದ್ದಾರೆ. ಆದರೆ ಈ ಸಂಘಟನೆಯನ್ನು ನಿಷೇಧಿಸದೆ ಮತೀಯ ಶಕ್ತಿಗಳಿಗೆ ಸರ್ಕಾರ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ನಡೆಯುತ್ತಿರುವ ದೇಶದ್ರೋಹಿ ಕೃತ್ಯಗಳನ್ನು ಮಟ್ಟ ಹಾಕಲು ರಾಷ್ಟ್ರೀಯ ತನಿಖಾ ದಳವನ್ನು ನಿಯೋಜಿಸಬೇಕೆಂದು ಒತ್ತಾಯಿಸಿದ ಉಲ್ಲಾಸ್, ದೇಶದ ಆಂತರಿಕ ಸುರಕ್ಷತೆಗೆ ಧಕ್ಕೆಯಾಗುತ್ತಿದೆಯೆಂದು ಆತÀಂಕ ವ್ಯಕ್ತಪಡಿಸಿದರು. ಕೊಡಗಿನಲ್ಲಿ ನಡೆದ ವಿಹೆಚ್‍ಪಿ ಪ್ರಮುಖ ಕುಟ್ಟಪ್ಪ ಹಾಗೂ ಕುಶಾಲನಗರದಲ್ಲಿ ನಡೆದ ಆಟೋ ಚಾಲಕ ಪ್ರವೀಣ್ ಪೂಜಾರಿ ಅವರ ಸಾವಿನ ಪ್ರಕರಣಗಳು ಅತ್ಯಂತ ಕ್ರೂರತ್ವದಿಂದ ಕೂಡಿದ್ದು, ಇದನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಪಿಎಫ್‍ಐ, ಕೆಎಫ್‍ಡಿ ಹಾಗೂ ಎಸ್‍ಡಿಪಿಐ ಸಂಘಟನೆಗಳು ಅನೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿವೆ ಎಂದು ಆರೋಪಿಸಿದ ಉಲ್ಲಾಸ್, ಪಿಎಫ್‍ಐ ಸಂಘಟನೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ತಾಲೂಕು ಸಂಚಾಲಕ ಅಜಿತ್, ಸಹ ಸಂಚಾಲಕ ಸುಜಾ ಸುಬ್ಬಯ್ಯ, ನಗರ ಸಂಚಾಲಕ ನಂದೀಶ್ ಹಾಗೂ ಮಹೇಶ್ ಉಪಸ್ಥಿತರಿದ್ದರು.