ಶ್ರೀಮಂಗಲ, ಅ. 30: ಕೊಡಗಿನ ಮೂಲ ನಿವಾಸಿಗಳ ನಡುವೆ ಸಾಮರಸ್ಯ ಬೆಸೆಯುವ ನಿಟ್ಟಿನಲ್ಲಿ ಮೂಲ ನಿವಾಸಿಗಳ ನಡುವೆ ವಾಲಿಬಾಲ್ ಪಂದ್ಯಾಟವನ್ನು ಏರ್ಪಡಿಸಿರುವ ಬೆಕ್ಕೆಸೊಡ್ಲೂರು ಶ್ರೀರಾಮ ಯುವಕ ಸಂಘದ ಪ್ರಯತ್ನಕ್ಕೆ ಉತ್ತಮ ಸ್ಪಂದನೆ ದೊರೆತಿದೆ. ಮುಂದೆಯೂ ಮೂಲ ನಿವಾಸಿಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಇಂತಹ ಪಂದ್ಯಾವಳಿ ನಡೆಯುವಂತಾಗಲಿ ಎಂದು ಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷ ಹಾಗೂ ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು ಅವರು ಹೇಳಿದರು.
ಬೆಕ್ಕೆಸೊಡ್ಲೂರು ಶ್ರೀ ಶಾರದ ಪ್ರೌಢ ಶಾಲ ಮೈದಾನದಲ್ಲಿ ಶ್ರೀರಾಮ ಯುವಕ ಸಂಘದ ಆಶ್ರಯದಲ್ಲಿ ಕೊಡಗಿನ ಮೂಲ ನಿವಾಸಿಗಳಿಗಾಗಿ ಆಯೋಜಿಸಿರುವ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮ ಜಿ.ಪಂ. ಅವಧಿಯಲ್ಲಿ ಶ್ರೀರಾಮ ಯುವಕ ಸಂಘದ ಕ್ರೀಯಾಶೀಲ ಕ್ರೀಡಾ ಚಟುವಟಿಕೆ ಯನ್ನು ಪ್ರೋತ್ಸಾಯಿಸುವ ನಿಟ್ಟಿನಲ್ಲಿ ಯುವಜನ ಹಾಗೂ ಕ್ರೀಡಾ ಇಲಾಖೆಯಿಂದ ಕ್ರೀಡಾ ಸಾಮಗ್ರಿ ಖರೀದಿಗಾಗಿ ಪ್ರತಿ ವರ್ಷ ರೂ 10 ಸಾವಿರ ಅನುದಾನ ಒದಗಿಸಿಕೊಡುವ ಭರವಸೆ ನೀಡಿದರು.