ಸೋಮವಾರಪೇಟೆ,ಅ.16: ಹಗಲೂ ರಾತ್ರಿಯೆನ್ನದೇ ಪ್ರತಿದಿನ ಬಾಡಿಗೆಯಲ್ಲೇ ಮುಳುಗುವ ಆಟೋ ಚಾಲಕರು ಇಂದು ಬಾಡಿಗೆಯ ಜಂಜಾಟ ಮರೆತು ಇಲ್ಲಿನ ಮೈದಾನದಲ್ಲಿ ಕ್ರೀಡೋತ್ಸಾಹದಲ್ಲಿ ಮುಳುಗಿ, ನಮ್ಮಲ್ಲೂ ಕ್ರೀಡಾ ಪ್ರತಿಭೆಯಿದೆ ಎಂಬದನ್ನು ನಿರೂಪಿಸಿದರು.ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಆಯೋಜಿಸಲಾಗಿರುವ ಕನ್ನಡ ರಾಜ್ಯೋತ್ಸವದ ಅಂಗವಾಗಿ ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಏರ್ಪಡಿಸಲಾಗಿದ್ದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಚಾಲಕರುಗಳು ಅತ್ಯುತ್ಸಾಹದಿಂದ ಭಾಗವಹಿಸಿದ್ದರು.

ಬೆಳಗ್ಗಿನಿಂದ ಸಂಜೆಯವರೆಗೂ ವಿವಿಧ ಕ್ರೀಡಾಕೂಟಗಳು ನಡೆದವು. ಚಾಲಕರುಗಳಿಗೆ ಆಯೋಜಿಸಿದ್ದ ಕ್ರಿಕೆಟ್, ಕಬಡ್ಡಿ, ಹಗ್ಗಜಗ್ಗಾಟ ಪಂದ್ಯಾಟಗಳು ಅತ್ಯಂತ ರೋಚಕತೆಯಿಂದ ಕೂಡಿತ್ತು. ದಿನನಿತ್ಯ ಬಾಡಿಗೆಗಾಗಿ ಗಂಟೆಗಟ್ಟಲೆ ಕಾದು ಕೂರುವ ಬಹುತೇಕ ಚಾಲಕರು ಇಂದು ನಿಲ್ದಾಣದ ಕಡೆ ಮುಖ ಮಾಡದೇ ಮೈದಾನದಲ್ಲಿ ಸಂಭ್ರಮಿಸಿದರು.