ಕುಶಾಲನಗರ, ಡಿ. 14: ಕುಶಾಲನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ 3 ದಿನಗಳ ಕಾಲ ನಡೆಯಲಿರುವ ಮಂಡಲ ಪೂಜೋತ್ಸವ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು.

ದೇವಸ್ಥಾನ ಟ್ರಸ್ಟ್ ಆಶ್ರಯದಲ್ಲಿ ನಡೆಯಲಿರುವ ಪೂಜೋತ್ಸವದ ಅಂಗವಾಗಿ ಬೆಳಗ್ಗೆ ಗಣಪತಿ ಹೋಮ, ಧ್ವಜಾರೋಹಣ ಸಂಜೆ ಉಯ್ಯಾಲೋತ್ಸವ ನಡೆಯಿತು. ತಾ. 15 ರಂದು (ಇಂದು) ಬೆಳಗ್ಗೆ ನವಗ್ರಹ ಹೋಮ, ಸಂಜೆ ಉಯ್ಯಾಲೋತ್ಸವ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಲಿದೆ. ತಾ. 16 ರಂದು ಬೆಳಗ್ಗೆಯಿಂದ ದೇವರಿಗೆ ಶಾಸ್ತಾಪೂಜೆ, ಅಭಿಷೇಕ ಪೂಜೆ, ನವಕ ಹೋಮ, ಕಲಶ ಪೂಜೆ, ಮಧ್ಯಾಹ್ನ ಮಹಾ ಮಂಗಳಾರತಿ, ಅನ್ನ ಸಂತರ್ಪಣೆ, ಪಾಲ್ ಕೊಂಬು ಬಳಿಕ ಸಂಜೆ 6 ಗಂಟೆಗೆ ಚಂಡೆ ವಾದ್ಯ ವೃಂದ, ಸಾಲಂಕೃತ ಆನೆ, ಅಲಂಕೃತ ಮಂಟಪದಲ್ಲಿ ಊರಿನ ಪ್ರಮುಖ ಬೀದಿಗಳಲ್ಲಿ ಸ್ವಾಮಿಯ ಮೆರವಣಿಗೆ ನಡೆಯಲಿದೆ ಎಂದು ದೇವಾಲಯದ ಟ್ರಸ್ಟ್ ಅಧ್ಯಕ್ಷ ಕೆ.ಆರ್. ಶಿವಾನಂದನ್ ತಿಳಿಸಿದ್ದಾರೆ. ಅಯ್ಯಪ್ಪಸ್ವಾಮಿ ದೇವಾಲಯದ ಮಂಡಲ ಪೂಜೋತ್ಸವ ಅಂಗವಾಗಿ ಸರ್ವ ದೇವಾಲಯಗಳಿಂದ ಪೂಜೆ ಸಲ್ಲಿಸಲಾಯಿತು. ಕುಶಾಲನಗರ ದೇವಾಲಯಗಳ ಒಕ್ಕೂಟದ ಆಶ್ರಯದಲ್ಲಿ ಸ್ಥಳೀಯ ವಿವಿಧ ದೇವಾಲಯಗಳ ಆಡಳಿತ ಮಂಡಳಿ ಪ್ರಮುಖರು ಮತ್ತು ಭಕ್ತಾದಿಗಳು ವಿಶೇಷ ಪೂಜೆ ಸಲ್ಲಿಸಿದರು. ಪ್ರತಿ ದೇವಾಲಯಗಳ ಪರವಾಗಿ ಆಡಳಿತ ಮಂಡಳಿ ಮೂಲಕ ದೇವರಿಗೆ ಹೂವು ಹಣ್ಣು ಸಮರ್ಪಿಸಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು.

ಸ್ಥಳೀಯ ಶ್ರೀ ಗಣಪತಿ ದೇವಾಲಯ, ಶ್ರೀ ಉದ್ಭವ ಸುಬ್ರಮಣ್ಯ ದೇವಾಲಯ, ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯ, ಶ್ರೀ ಚೌಡೇಶ್ವರಿ ದೇವಾಲಯ, ಶ್ರೀ ಮುತ್ತಪ್ಪ ದೇವಾಲಯ, ಶ್ರೀ ಅಂತರಘಟ್ಟೆ ಅಮ್ಮ ದೇವಾಲಯ, ಶ್ರೀ ಕೋಣಮಾರಿಯಮ್ಮ ದೇವಾಲಯ, ಶ್ರೀ ಬಸವೇಶ್ವರ ದೇವಾಲಯ, ಮಾತೆ ಕಾವೇರಿ ಆರಾಧನಾ ಸಮಿತಿ, ಶ್ರೀ ಸೋಮೇಶ್ವರ ದೇವಾಲಯ ಆಡಳಿತ ಮಂಡಳಿ ಸದಸ್ಯರು ಮತ್ತು ಅಯ್ಯಪ್ಪಸ್ವಾಮಿ ದೇವಾಲಯ ಸಮಿತಿ ಸದಸ್ಯರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಯ್ಯಪ್ಪಸ್ವಾಮಿ ದೇವಾಲಯ ಅರ್ಚಕರಾದ ಕೃಷ್ಣಮೂರ್ತಿ ಭಟ್, ವಿಷ್ಣುಮೂರ್ತಿ ಭಟ್, ಸೋಮಶೇಖರ್ ಭಟ್ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.