ಮಡಿಕೇರಿ, ಡಿ. 25: ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ)ದ ಅಧ್ಯಕ್ಷರ ಅಧಿಕಾರಾವಧಿ ಮುಗಿದು ಹಲವು ತಿಂಗಳುಗಳೇ ಕಳೆದಿವೆ. ಮಡಿಕೇರಿ ನಗರಸಭೆಯ ಹೊಸ ಅವಧಿಗೂ ಅಧ್ಯಕ್ಷ - ಉಪಾಧ್ಯಕ್ಷ ನೇಮಕವಾಗಿದ್ದು, ಇಲ್ಲೂ ಮೂರು ತಿಂಗಳಾಗುತ್ತಾ ಬರುತ್ತಿದೆ. ಆದರೆ ಮೂಡಾಕ್ಕೆ ನೂತನ ಅಧ್ಯಕ್ಷರ ನೇಮಕಾತಿಯಾಗಲಿ. ನಗರಸಭೆಯ ಸ್ಥಾಯಿ ಸಮಿತಿಗೆ ಅಧ್ಯಕ್ಷರ ಆಯ್ಕೆಯಾಗಲಿ ಇನ್ನೂ ನಡೆದಿಲ್ಲ.

ಆಡಳಿತದಲ್ಲಿರುವ ಕಾಂಗ್ರೆಸ್‍ನಲ್ಲಿ ಹೀಗೇಕೆ ಎಂಬ ವಿಶ್ಲೇಷಣೆಗಳು ಕುತೂಹಲ ಮೂಡಿಸುತ್ತಿದ್ದು, ಜನವಲಯದಲ್ಲಿ ಚರ್ಚೆ ನಡೆಯುತ್ತಿದೆ. ಇದು ಮಾತ್ರವಲ್ಲದೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕವೂ ನೆನೆಗುದಿಗೆ ಬಿದ್ದಿದೆ. ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರಗಳು ಇದೀಗ ನಗರದ ಜನತೆಯ ಚರ್ಚೆಗೆ ಕಾರಣವಾಗಿದೆ.

ಆಡಳಿತದಲ್ಲಿರುವ ಕಾಂಗ್ರೆಸ್ ಮೂಡಾಕ್ಕೆ ಅದೇ ಪಕ್ಷದ ಪ್ರಮುಖರನ್ನೇ ಆಯ್ಕೆ ಮಾಡಲಿದೆ. ಸ್ಥಾನಾಕಾಂಕ್ಷಿಗಳ ಒತ್ತಡವೋ ಅಥವಾ ಅವರಿಗೆ ಕೊಡಬಾರದು. ಇವರಿಗೆ ಕೊಡಬೇಕು. ಎಂಬ ಪಕ್ಷದೊಳಗಿನ ಅಸಮಾಧಾನ ಅಥವಾ ಇನ್ಯಾವದೇ ವಾದವೋ ಗೊತ್ತಿಲ್ಲ. ಈ ಹಿಂದಿನ ಅಧ್ಯಕ್ಷೆ ಸುರಯ್ಯ ಅಬ್ರಾರ್ ಅವರ ಅಧಿಕಾರಾವಧಿ ಆಗಸ್ಟ್ ಅಂತ್ಯಕ್ಕೆ ಮುಗಿದಿದ್ದು, ಇದೀಗ ನಾಲ್ಕು ತಿಂಗಳು ಕಳೆಯುತ್ತಾ ಬಂದರೂ ಹೊಸ ಅಧ್ಯಕ್ಷ ಸ್ಥಾನಕ್ಕೆ ಮುಹೂರ್ತ ‘ಫಿಕ್ಸ್’ ಆಗಿಲ್ಲ. ಇದು ಕಾಂಗ್ರೆಸ್‍ನ ಆಂತರಿಕ ಸಮಸ್ಯೆಯಾಗಿರಬಹುದೇನೋ. ಆದರೆ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸುಮ್ಮನಿರುವಂತಿಲ್ಲ. ಕೈ ಜಾರಿ ಹೋಗಲಿದ್ದ ಅಧಿಕಾರ ಅದೃಷ್ಟದ ನೆರವಿನಿಂದ ಉಳಿದಿದ್ದು, ಅಧ್ಯಕ್ಷರು ಮಾತ್ರ ಕಾಂಗ್ರೆಸ್‍ನವರು. ಉಪಾಧ್ಯಕ್ಷರು ಬಿಜೆಪಿಯವರಾಗಿದ್ದಾರೆ. ಸ್ಥಾಯಿ ಸಮಿತಿಗೆ ಅಧ್ಯಕ್ಷರ ನೇಮಕದ ವಿಳಂಬವನ್ನು ಆಗಾಗ್ಗೆ ಪ್ರಶ್ನಿಸುತ್ತಿರುವ ಬಿಜೆಪಿ ಸದಸ್ಯರು ಇದೀಗ ವಿಳಂಬವನ್ನು ಆಕ್ಷೇಪಿಸಿ ನ್ಯಾಯಾಲಯದ ಮೊರೆ ಹೋಗಲು ತೀರ್ಮಾನಿಸಿರುವ ಕುರಿತು ‘ಶಕ್ತಿ’ಗೆ ತಿಳಿದು ಬಂದಿದೆ. ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪಿ.ಡಿ. ಪೊನ್ನಪ್ಪ ಅವರು ಇದನ್ನು ಖಚಿತ ಪಡಿಸಿದ್ದು, ಅಧ್ಯಕ್ಷರು ಹಾಗೂ ಪೌರಾಯುಕ್ತರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗುವದು ಎಂದು ತಿಳಿಸಿದ್ದಾರೆ.

ವಾಸ್ತವತೆ ಏನಿರಬಹುದು?

ಮೂಡಾಕ್ಕೆ ಸಂಬಂಧಿಸಿದಂತೆ ಕಳೆದ ಅವಧಿಯಲ್ಲಿ ಕಾಂಗ್ರೆಸ್‍ನ ಹಿರಿಯ ಸದಸ್ಯ ನಗರಸಭೆಗೆ ನಾಲ್ಕು ಬಾರಿ ಆಯ್ಕೆಯಾಗಿರುವ ಚುಮ್ಮಿದೇವಯ್ಯ ಪ್ರಬಲ ಆಕಾಂಕ್ಷಿಯಾಗಿದ್ದರು. ಸತತ ನಾಲ್ಕು ಬಾರಿ ಜಯಗಳಿಸಿದರೂ ಯಾವದೇ ಸ್ಥಾನ ಸಿಗದ ಕಾರಣ ಮೂಡಾ ಅಧ್ಯಕ್ಷ ಸ್ಥಾನಬೇಕೆಂದು ಅವರು ಪಟ್ಟು ಹಿಡಿದಿದ್ದರು.

ಆದರೆ ಕೊನೆಯ ಕ್ಷಣದಲ್ಲಿ ಪ್ರಮುಖರ ತೀರ್ಮಾನದಂತೆ ಸುರಯ್ಯ ಅಬ್ರಾರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು. ಆದರೆ ಆ ಸಂದರ್ಭ ಮುಂದಿನ ಅವಧಿಯ ಅಧ್ಯಕ್ಷಗಿರಿ ಯನ್ನು ನೀಡುವದಾಗಿ ಮುಖಂಡರು ಚುಮ್ಮಿದೇವಯ್ಯ ಅವರಿಗೆ ಲಿಖಿತವಾಗಿ ಸಹಿ ಹಾಕಿ

(ಮೊದಲ ಪುಟದಿಂದ) ವಾಗ್ದಾನ ನೀಡಿದ್ದು ಗುಟ್ಟಾಗಿ ಉಳಿದಿಲ್ಲ. ಆಗಿನ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಟಿ. ಪ್ರದೀಪ್ ಮಾಜಿ ಸಂಸದ ಹೆಚ್. ವಿಶ್ವನಾಥ್, ಎಂಎಲ್‍ಸಿ ಟಿ.ಜಾನ್, ಕರಕುಶಲ ನಿಗಮದ ಅಧ್ಯಕ್ಷರಾಗಿದ್ದ ಈಗಿನ ಎಂಎಲ್‍ಸಿ ವೀಣಾ ಅಚ್ಚಯ್ಯ, ಕೆಪಿಸಿಸಿ ಸದಸ್ಯ ಈಗಿನ ಪ್ರಬಾರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್, ಬ್ಲಾಕ್ ಅಧ್ಯಕ್ಷರಾದ ಕೆ.ಎಂ. ಲೋಕೇಶ್ ಹಾಗೂ ಕೆ.ಎಂ. ಗಣೇಶ್ ಈ ಪತ್ರಕ್ಕೆ ಸಹಿ ಹಾಕಿದ್ದರು. ಆದರೆ ಸುರಯ್ಯ ಅಧಿಕಾರ ಮುಗಿಯುತ್ತಾ ಬರುತ್ತಿದ್ದಂತೆ ಚುಮ್ಮಿ ದೇವಯ್ಯ ಮಾತ್ರವಲ್ಲದೆ, ವಿ.ಪಿ. ಸುರೇಶ್ ಸೇರಿದಂತೆ ಇನ್ನು ಹಲವರು ಈ ಬೇಡಿಕೆ ಮುಂದಿಟ್ಟಿದ್ದಾರೆ. ಈ ನಡುವೆ ನಗರಸಭೆಯ ಅಧ್ಯಕ್ಷ - ಉಪಾಧ್ಯಕ್ಷ ಚುನಾವಣೆಯೂ ಎದುರಾದ್ದರಿಂದ ತಟಸ್ಥ ಧೋರಣೆಯನ್ನು ಪಕ್ಷ ಅನುಸರಿಸಿತ್ತು.

ಇದೀಗ ಈ ಸ್ಥಾನಾಕಾಂಕ್ಷಿ ಚುಮ್ಮಿ ದೇವಯ್ಯ ಅವರು ಒಪ್ಪಂದದಂತೆ ಸ್ಥಾನ ನೀಡಬೇಕೆಂದು ಮುಖಂಡರಲ್ಲಿ ದಿನಂಪ್ರತಿ ಒತ್ತಡ ಹಾಕುತ್ತಿರುವದು ಕಾಂಗ್ರೆಸ್ ಪಾಳಯದ ಮೂಲಗಳಿಂದ ತಿಳಿದು ಬಂದಿದೆ. ಒಂದು ವೇಳೆ ಮುಖಂಡರು ಕೈಕೊಟ್ಟರೆ ಚುಮ್ಮಿ ಅವರ ಮುಂದಿನ ನಡೆ ಏನು ಎಂಬ ಗುಸುಗುಸು ಕೇಳಿಬರುತ್ತಿದೆ. ಕೊಡವರು - ಕೊಡವೇತರರು ಎಂಬ ವಾದವೂ ಕಾಂಗ್ರೆಸ್‍ನಲ್ಲಿ ಈ ನಡುವೆ ಹುಟ್ಟಿಕೊಂಡಿರುವದೂ ವರಿಷ್ಠರಿಗೆ ತಲೆ ನೋವಾಗಿದೆ.

ಸ್ಥಾಯಿ ಸಮಿತಿಗೂ ತಲೆ ಬಿಸಿ

ನಗರಸಭೆಯಲ್ಲಿ ಪ್ರಸ್ತುತ ಕಾಂಗ್ರೆಸ್ ಹಾಗೂ ಬಿಜೆಪಿ ಬಹುತೇಕ ಸಮಬಲ ಹೊಂದಿದೆ. ಇತ್ತೀಚೆಗೆ ನಡೆದ ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಲಾಟರಿ ಮೂಲಕ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಬೇಕಾಯಿತು. ಬಿಜೆಪಿ ಉಪಾಧ್ಯಕ್ಷ ಸ್ಥಾನದ ಅದೃಷ್ಟಗಳಿಸಿತು. 10 ಮಂದಿ ಸದಸ್ಯರನ್ನು ಕಾಂಗ್ರೆಸ್ ಹೊಂದಿತ್ತು. ನಾಲ್ಕು ಮಂದಿ ಎಸ್‍ಡಿಪಿಐ ಸದಸ್ಯರ ಬೆಂಬಲ ಇದ್ದರೂ ಇಬ್ಬರು ಸದಸ್ಯರು ಪಕ್ಷಕ್ಕೆ ಕೈಕೊಟ್ಟು ಇದೀಗ ಬಿಜೆಪಿಯವರ ಜತೆಯಲ್ಲಿದ್ದಾರೆ. ಈ ಮೂಲಕ ಕಾಂಗ್ರೆಸ್‍ಗೆ ಎಂಎಲ್‍ಸಿ ವೀಣಾ ಸೇರಿ 13 ಮಂದಿ ಮಾತ್ರ ಇದ್ದರೆ. ಬಿಜೆಪಿಗೆ ಕಾಂಗ್ರೆಸ್‍ನ ಇಬ್ಬರು, ಜೆಡಿಎಸ್‍ನ ಓರ್ವ ಸದಸ್ಯೆಯ ಬಲವೂ ಇದ್ದು, ಸಂಸದರು, ಶಾಸಕ, ಎಂಎಲ್‍ಸಿ ಕೂಡ ಇದ್ದಾರೆ.

ನಿಯಮದಂತೆ ಸ್ಥಾಯಿ ಸಮಿತಿ ಅಧ್ಯಕ್ಷರ ಅವಧಿ ಮುಕ್ತಾಯಕ್ಕೆ ಒಂದು ತಿಂಗಳ ಮುಂಚೆಯೇ ಹೊಸ ಅಧ್ಯಕ್ಷರ ನೇಮಕವಾಗಬೇಕು. ಆದರೆ ಸ್ಥಾಯಿ ಸಮಿತಿ ಅಧ್ಯಕ್ಷರ ಅಧಿಕಾರ ಮುಗಿದು ಎರಡು ತಿಂಗಳು ಕಳೆಯುತ್ತಿದೆ. ನಗರಸಭೆಯ ಅಧ್ಯಕ್ಷರು ಸೆಪ್ಟಂಬರ್ 15ರಂದು ಅಧಿಕಾರಕ್ಕೆ ಬಂದಿದ್ದಾರೆ. ಇವರು ಅಧ್ಯಕ್ಷರಾಗಿ ಮೂರು ತಿಂಗಳು ಕಳೆದಿದ್ದು, ಸ್ಥಾಯಿ ಸಮಿತಿ ಅಧ್ಯಕ್ಷರ ನೇಮಕಕ್ಕೆ ಬಿಜೆಪಿ ಸದಸ್ಯರು ಒತ್ತಾಯಿಸುತ್ತಲೇ ಬಂದಿದ್ದರೂ ಇದು ಇನ್ನೂ ಇತ್ಯರ್ಥವಾಗಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋಗಲು ತೀರ್ಮಾನಿಸಿರುವದಾಗಿ ಪಿ.ಡಿ. ಪೊನ್ನಪ್ಪ ತಿಳಿಸಿದ್ದಾರೆ.

ನಗರಸಭಾ ಆಡಳಿತಕ್ಕೂ ಧಕ್ಕೆ ಇದೆಯೇ?

ಮೂಡಾ ಅಧ್ಯಕ್ಷ ಸ್ಥಾನದ ತೀರ್ಮಾನ ನಗರಸಭೆ ಆಡಳಿತದ ಮೇಲೆ ಪರಿಣಾಮ ಬೀರಲಿದೆಯೇ ಎಂಬ ಹೊಸ ಸರ್ಚೆಯೊಂದೂ ಇದೀಗ ಹುಟ್ಟುಕೊಂಡಿದೆ. ಒಟ್ಟಿನಲ್ಲಿ ‘ಅತ್ತದರಿ ಇತ್ತ ಪುಲಿ’ ಎಂಬ ಸ್ಥಿತಿಯಲ್ಲಿ ಈ ತನಕವೂ ಮೌನಕ್ಕೆ ಶರಣಾಗಿರುವ ಕಾಂಗ್ರೆಸ್ ವರಿಷ್ಠರು ಯಾವ ನಡೆ ಅನುಸರಿಸಲಿದ್ದಾರೆ ಎಂಬದು ಕುತೂಹಲಕಾರಿಯಾಗಿದೆ.