ಸೋಮವಾರಪೇಟೆ,ಅ.21: ಸೋಮವಾರಪೇಟೆ ನಗರದಿಂದ ಶಾಂತಳ್ಳಿಗೆ ತೆರಳುವ ಮುಖ್ಯರಸ್ತೆಯ ಜೇಡಿಗುಂಡಿ ಬಳಿಯಲ್ಲಿ ರಸ್ತೆಯಲ್ಲಿ ಹೊಂಡ ನಿರ್ಮಾಣವಾಗಿದ್ದು, ವಾಹನ ಸವಾರರಿಗೆ ಮೃತ್ಯುಕೂಪವಾಗಿ ಮಾರ್ಪಟ್ಟಿದೆ.
ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಒಳಪಡುವ ಈ ರಸ್ತೆಯಲ್ಲಿ ಕಳೆದ ಹಲವು ದಿನಗಳ ಹಿಂದೆಯೇ ಗುಂಡಿ ನಿರ್ಮಾಣವಾಗಿದ್ದರೂ ಸಂಬಂಧಿಸಿದವರು ಈ ಬಗ್ಗೆ ಗಮನಹರಿಸಿದಂತೆ ಕಂಡುಬಂದಿಲ್ಲ. ತಿರುವು ರಸ್ತೆಯಲ್ಲಿ ಅಳವಡಿಸಿರುವ ಮೋರಿಯ ಕಲ್ಲು ಕುಸಿದಿದ್ದು, ಹೊಂಡ ನಿರ್ಮಾಣವಾಗಿರುವ ಹಿನ್ನೆಲೆ ವಾಹನ ಚಾಲಕರು ಅತೀ ಎಚ್ಚರಿಕೆಯಿಂದ ವಾಹನ ಚಾಲಿಸಬೇಕಿದೆ.
ತಿರುವು ರಸ್ತೆಯಲ್ಲಿ ಅರೆಕ್ಷಣ ಎಚ್ಚರ ತಪ್ಪಿದರೂ ವಾಹನದ ಚಕ್ರ ಗುಂಡಿಯೊಳಗೆ ಸಿಲುಕಿ ಅಪಾಯ ತಪ್ಪಿದ್ದಲ್ಲ. ದ್ವಿಚಕ್ರ ವಾಹನವೇನಾದರೂ ಈ ಗುಂಡಿಯೊಳಗೆ ಸಿಲುಕಿದರೆ ಸವಾರನನ್ನು ಆ ದೇವರೇ ಕಾಪಾಡಬೇಕು ಎಂಬಂತಹ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ. ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಯ ಮಧ್ಯೆಯೇ ಇಂತಹ ಮೃತ್ಯುಕೂಪ ನಿರ್ಮಾಣವಾಗಿದ್ದರೂ ಅಧಿಕಾರಿಗಳು ಮೌನ ವಹಿಸಿದ್ದಾರೆ.
ಈ ಬಗ್ಗೆ ಇಲಾಖೆಯ ಅಭಿಯಂತರರು ತಕ್ಷಣ ಗಮನಹರಿಸಿ ಮೃತ್ಯುಕೂಪಕ್ಕೆ ಮುಕ್ತಿ ನೀಡುವದರೊಂದಿಗೆ ಸವಾರರ ಜೀವಕ್ಕೆ ಬೆಲೆ ನೀಡಬೇಕಿದೆ. ನಿರ್ಲಕ್ಷ್ಯ ವಹಿಸಿ ಮುಂದೊಂದು ದಿನ ಯಾವದೇ ಅಪಾಯ ಸಂಭವಿಸಿದೆ ಅದಕ್ಕೆ ಇಲಾಖೆಯೇ ಹೊಣೆಯಾಗುತ್ತದೆ ಎಂದು ಶಾಂತಳ್ಳಿಯ ರವಿಕುಮಾರ್, ಆನಂದ್, ಬೋಪಯ್ಯ ಅವರುಗಳು ಎಚ್ಚರಿಸಿದ್ದಾರೆ.