ಬೆಂಗಳೂರು, ಜು. 30: ಬೆಲ್ಜಿಯಂ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜ್ಯೇಷ್ಠ ಪುತ್ರ ರಾಕೇಶ್ (39) ಅವರು ಬಹು ಅಂಗಾಂಗ ವೈಫಲ್ಯದಿಂದ ಇಂದು ನಿಧನರಾಗಿದ್ದಾರೆ. ಕಳೆದ ವಾರದಿಂದ ಬೆಲ್ಜಿಯಂನ ಬ್ರಷಲ್ಸ್ನ ಆಂಟ್ ವರ್ಪ್ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಕೇಶ್ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಎಂದೇ ಬಿಂಬಿತರಾಗಿದ್ದ ರಾಕೇಶ್ ಅವರು ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ. ಎರಡು ದಿನಗಳ ಹಿಂದಷ್ಷೇ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಪುತ್ರನ ಆರೋಗ್ಯ ವಿಚಾರಿಸಲು ಬೆಲ್ಜಿಯಂಗೆ ತೆರಳಿದ್ದರು. ವಿಶೇಷ ವಿಮಾನದ ಮೂಲಕ ನಾಳೆ ಸಂಜೆ ರಾಕೇಶ್ ಅವರ ಪಾರ್ಥೀವ ಶರೀರ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ.
ಸಂತಾಪ
ಇನ್ನು ಸಿಎಂ ಪುತ್ರನ ಅಕಾಲಿಕ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಸಂತಾಪ ಸೂಚಿಸಿದ್ದು, ರಾಕೇಶ್ ಸಾವು ತೀವ್ರ ಆಘಾತದ ವಿಚಾರ ಎಂದು ಹೇಳಿದ್ದಾರೆ. ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹಾಗೂ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ಗಣ್ಯರು ಸಿಎಂ ಪುತ್ರನ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಕೊಡಗು ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಟಿ. ಪ್ರದೀಪ್, ಮಾಜಿ ಎಂಎಲ್ಸಿ ಟಿ. ಜಾನ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮ್ಯಾಥ್ಯು ಸಂತಾಪ ಸೂಚಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಟಿ.ಪಿ.ರಮೇಶ್, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಮಾಜಿ ಸಂಸದ ಹೆಚ್. ವಿಶ್ವನಾಥ್, ಮಾಜಿ ಅಧ್ಯಕ್ಷ ಬಿ.ಟಿ. ಪ್ರದೀಪ್, ಜಿಲ್ಲಾ ವಕ್ತಾರ ಕೆ.ಕೆ. ಮಂಜುನಾಥ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ, ಮಹಿಳಾ ಘಟಕದ ಅಧ್ಯಕ್ಷೆ ಕುಮುದಾ ಧರ್ಮಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್.ಅರುಣ್ ಮಾಚಯ್ಯ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಎ. ಯಾಕೂಬ್, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ಗಣೇಶ್, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಯು. ಅಬ್ದುಲ್ ರಜಾಕ್, ನಗರಸಭಾ ಅಧ್ಯಕ್ಷೆ ಶ್ರೀಮತಿ ಬಂಗೇರ, ಮೂಡ ಅಧ್ಯಕ್ಷೆ ಸುರಯ್ಯಾ ಅಬ್ರಾರ್, ಪ್ರಮುಖರಾದ ಮಿಟ್ಟು ಚಂಗಪ್ಪ, ಚಂದ್ರಮೌಳಿ, ಜಿಲ್ಲಾ ಪಂಚಾಯತ್ ಸದಸ್ಯ ಬಿ.ಎನ್. ಪ್ರಥ್ಯು ಮತ್ತಿತರ ಮುಖಂಡರು ಸಂತಾಪ ಸೂಚಿಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಅವರ ನಿಧನಕ್ಕೆ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಸಂತಾಪ ಸೂಚಿಸಿದ್ದಾರೆ.
ರಾಕೇಶ್ ಅವರೊಬ್ಬ ಸ್ನೇಹಚಾರದ ಹಾಗೂ ಸರಳ ಜೀವಿಯಾಗಿದ್ದರು. ಪಕ್ಷ ಸಂಘಟನೆಯೊಂದಿಗೆ ಸಾಮಾಜಿಕ ಕಾರ್ಯದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ಲೋಕೇಶ್ ತಿಳಿಸಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಎಸ್ಸಿ, ಎಸ್ಟಿ ಘಟಕದ ಅಧ್ಯಕ್ಷ ಟಿ.ಈ. ಸುರೇಶ್, ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಸ್.ಎಂ. ಚಂಗಪ್ಪ, ಯುವ ಮೋರ್ಚಾ ಅಧ್ಯಕ್ಷ ಚೇತನ್, ಬ್ಲಾಕ್ ಕಾರ್ಯದರ್ಶಿ ವಿ.ಎ. ಲಾರೆನ್ಸ್, ವಕ್ತಾರ ಹಾಗೂ ತಾ.ಪಂ. ಸದಸ್ಯ ಬಿ.ಬಿ. ಸತೀಶ್, ವಕ್ಫ್ ಬೋರ್ಡ್ ಉಪಾಧ್ಯಕ್ಷ ಎರ್ಮು ಹಾಜಿ ಅವರುಗಳೂ ಸಹ ಸಂತಾಪ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪುತ್ರ ರಾಕೇಶ್ ನಿಧನಕ್ಕೆ ಕೊಡಗು ಜಿಲ್ಲಾ ಜನತಾದಳದ ಕಾರ್ಯಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ. ಕೊಡಗು ಜಿಲ್ಲಾ ಅಹಿಂದ ಒಕ್ಕೂಟ, ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಅವರುಗಳೂ ಸಂತಾಪ ಸೂಚಿಸಿದೆ.