ಮಡಿಕೇರಿ, ಡಿ. 16 : ಅನೈತಿಕ ಪ್ರಕರಣ ಹಾಗೂ ಹಲವು ಹಗರಣಗಳಿಂದ ರಾಜ್ಯ ಸರಕಾರ ಇಡೀ ಕರ್ನಾಟಕವನ್ನು ತಲೆ ತಗ್ಗಿಸುಂತೆ ಮಾಡಿದೆ ಎಂದು ಆರೋಪಿಸಿರುವ ಜಿಲ್ಲಾ ಬಿಜೆಪಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ವಕ್ತಾರ ಸುಬ್ರಹ್ಮಣ್ಯ ಉಪಾಧ್ಯಾಯ, ಮಾಜಿ ಸಚಿವ ಮೇಟಿ ಅವರ ರಾಸಲೀಲೆ ಪ್ರಕರಣದ ಮಾಹಿತಿ ಒಂದು ತಿಂಗಳ ಹಿಂದೆಯೇ ಮುಖ್ಯಮಂತ್ರಿಗಳಿಗೆ ತಿಳಿದಿದ್ದರೂ ತಮ್ಮ ಆಪ್ತರನ್ನು ರಕ್ಷಣೆ ಮಾಡುವ ಕಾರ್ಯದಲ್ಲಿ ತೊಡಗಿದ್ದರು ಎಂದು ಆರೋಪಿಸಿದರು. ದೇಶದ ಮುಂದಿನ ಪ್ರಜೆಗಳಾದ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕಾಗಿದ್ದ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ಅರೆನಗ್ನ ಚಿತ್ರಗಳನ್ನು ನೋಡಿದ ಬಗ್ಗೆ ಸಾಕ್ಷಿಯಿದ್ದರೂ ಈ ಪ್ರಕರಣವನ್ನು ಲಘುವಾಗಿ ಕಾಣುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕ ಅಧ:ಪತನವನ್ನು ಪ್ರದರ್ಶಿಸಿದ್ದಾರೆ ಎಂದು ಟೀಕಿಸಿದರು.
ಅನೇಕ ಹಗರಣ ಹಾಗೂ ಅನೈತಿಕ ಪ್ರಕರಣಗಳ ಮೂಲಕ ಕರ್ನಾಟಕ ರಾಜ್ಯದ ಗೌರವಕ್ಕೆ ಧÀಕ್ಕೆ ತಂದ ಮೊದಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂದು ಸುಬ್ರಹ್ಮಣ್ಯ ಉಪಾಧ್ಯಾಯ ಆರೋಪಿಸಿದರು. ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಚುನಾವಣೆಯನ್ನು ಎದುರಿಸಲಿ ಎಂದು ಸವಾಲು ಹಾಕಿದರು. ಕೇಂದ್ರ ಸರಕಾರ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿ ನೋಟುಗಳನ್ನು ಅಮಾನ್ಯ ಗೊಳಿಸಿದ್ದರೂ ಹೊಸ ನೋಟುಗಳನ್ನು ಅಕ್ರಮವಾಗಿ ಸಂಗ್ರಹಿಸಿಡುವ ಮೂಲಕ ಮುಖ್ಯಮಂತ್ರಿಗಳ ಬೆಂಬಲಿಗರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದರು.
ಸರಕಾರವೇ ನಿವೇಶನ ನೀಡಲಿ
ದಿಡ್ಡಳ್ಳಿಯಲ್ಲಿ ಗುಡಿಸಲುಗಳನ್ನು ಕಳೆದುಕೊಂಡ ಗಿರಿಜನರಿಗೆ ಜಿಲ್ಲಾಡಳಿತ ನಿವೇಶನ ನೀಡಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಒತ್ತಾಯಿಸಿ ರುವದು ಹಾಸ್ಯಾಸ್ಪದ ವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವೇ ಅಧಿಕಾರದಲ್ಲಿರುವದರಿಂದ ಸರಕಾರವೇ ಬೀದಿಪಾಲಾದವರಿಗೆ ನಿವೇಶನವನ್ನು ನೀಡಬಹುದಾಗಿದೆ. ಆದರೆ ಮಗುವನ್ನು ಚಿವುಟಿ ತೊಟ್ಟಿಲು ತೂಗುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದು ಆರೋಪಿಸಿದ ಸುಬ್ರಹ್ಮಣ್ಯ ಉಪಾಧ್ಯಾಯ ಗುಡಿಸಲು ಕಳೆದು ಕೊಂಡವರಿಗೆ ಅದೇ ಜಾಗವನ್ನು ಮಂಜೂರು ಮಾಡ ಬೇಕೆಂದು ಒತ್ತಾಯಿಸಿದರು. ಗಿರಿಜನರ ಬವಣೆ ಕುರಿತು ಜಿಲ್ಲೆಯ ಶಾಸಕರುಗಳು ವಿಧಾನಸಭೆಯಲ್ಲಿ ಪ್ರಸ್ತಾಪಿಸಲಿದ್ದಾರೆ ಎಂದರು.
(ಮೊದಲ ಪುಟದಿಂದ) ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆಯ ಕೆಡಿಪಿ ಸಭೆಯ ದಿನವನ್ನು ನಿಗಧಿ ಮಾಡುವ ಸಂದರ್ಭ ಶಾಸಕರಾದಿಯಾಗಿ ಸ್ಥಳೀಯ ಜನಪ್ರತಿನಿಧಿಗಳನ್ನು ಗಣನೆಗೆ ತೆಗೆದುಕೊಳ್ಳದ ಜಿಲ್ಲಾ ಉಸ್ತುವಾರಿ ಸಚಿವರು ದರ್ಪದಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲು ಸಚಿವರನ್ನು ಕಾಯುತ್ತಿದ್ದ ಕಾರಣದಿಂದ ಅಕಾಡೆಮಿಗಳು ನಡೆಸಿದ “ಸಂಗಮ ಸಂಭ್ರಮ” ಕಾರ್ಯಕ್ರಮದಲ್ಲಿ ಶಾಸಕರುಗಳಿಗೆ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲವೆಂದು ಸಮರ್ಥಿಸಿ ಕೊಂಡ ಸುಬ್ರಹ್ಮಣ್ಯ ಉಪಾಧ್ಯಾಯ ಕಾರ್ಯಕ್ರಮವನ್ನು ಉದ್ಘಾಟಿಸಬೇಕಾಗಿದ್ದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರಾದ ಉಮಾಶ್ರೀ ಅವರು ಯಾಕೆ ಗೈರು ಹಾಜರಾಗಿದ್ದರು ಎನ್ನುವದನ್ನು ಜಿಲ್ಲಾ ಕಾಂಗ್ರೆಸ್ ಮೊದಲು ಸ್ಪಷ್ಟಪಡಿಸಲಿ ಎಂದರು.
ಚುನಾವಣೆ ಬಂದಾಗ ಚಾಲ್ತಿಗೆ ಬರುವ ಜೆಡಿಎಸ್ ಜಿಲ್ಲೆಯಲ್ಲಿ ಅಸ್ತಿತ್ವದಲ್ಲೇ ಇಲ್ಲವೆಂದು ವ್ಯಂಗ್ಯವಾಡಿದ ಅವರು ಜೆಡಿಎಸ್ ಟೀಕೆಗಳಿಗೆ ಸ್ಪಷ್ಟೀಕರಣ ನೀಡುವ ಅಗತ್ಯವಿಲ್ಲವೆಂದರು.
ಜಿಲ್ಲಾ ಕಾರ್ಯದರ್ಶಿ ರವಿಬಸಪ್ಪ ಮಾತನಾಡಿ ಸಹಕಾರ ಸಂಘಗಳ ಮೂಲಕ ನಡೆಯುತ್ತಿದ್ದ ಟೆಂಡರ್ ಪ್ರಕ್ರಿಯೆಗಳನ್ನು ಇ-ಟೆಂಡರ್ ವ್ಯಾಪ್ತಿಗೆ ಒಳಪಡಿಸುವ ಮೂಲಕ ಸಚಿವರುಗಳು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಸ್ಥಳೀಯರಿಗೆ ಗುತ್ತಿಗೆ ದೊರೆಯದೆ ಹೊರ ಜಿಲ್ಲೆಯ ಗುತ್ತಿಗೆದಾರರಿಂದ ಕಳಪೆ ಗುಣಮಟ್ಟದ ಸಾಮಗ್ರಿಗಳು ಜಿಲ್ಲೆಗೆ ಸರಬರಾಜಾಗುತ್ತಿದೆ ಎಂದು ಟೀಕಿಸಿದರು.
ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಜೈನಿ ಮಾತನಾಡಿ ಕೇಂದ್ರ ಸರಕಾರದ ಅನುದಾನದಿಂದ ನಗರಸಭೆ ವತಿಯಿಂದ ನಡೆಯುತ್ತಿರುವ ಒಳ ಚರಂಡಿ ಕಾಮಗಾರಿ ಅವೈಜ್ಞಾನಿಕ ವಾಗಿದ್ದು, ರಸ್ತೆಗಳು ಹದಗೆಟ್ಟು ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಗರಸಭೆ ಈ ಕುರಿತು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಇನ್ನೂ ಕೂಡ ದಸರಾ ಅನುದಾನ ಬಿಡುಗಡೆಯಾಗದೆ ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಮಹೇಶ್ ಜೈನಿ ಜಿಲ್ಲಾ ಉಸ್ತುವಾರಿ ಸಚಿವರು ಅನುದಾನ ಬಿಡುಗಡೆಗೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದರು. ಸುದ್ದಿಗೋಷ್ಠಿಯಲ್ಲಿ ನಗರ ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ್ ಹಾಗೂ ಉಮೇಶ್ ಸುಬ್ರಹ್ಮಣಿ ಉಪಸ್ಥಿತರಿದ್ದರು.