ಸಿದ್ದಾಪುರ, ಡಿ. 20: ದಿಡ್ಡಳ್ಳಿಯ ಆದಿವಾಸಿಗಳ 577 ಗುಡಿಸಲುಗಳನ್ನು ಏಕಾಏಕಿ ಕೆಡವಿರುವ ಸರಕಾರದ ನೀತಿ ಖಂಡನೀಯ ಎಂದು ಬಿ.ಜೆ.ಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಮಾಲ್ದಾರೆ ಸಮೀಪದ ದಿಡ್ಡಳ್ಳಿಯ ನಿರಾಶ್ರಿತರು ವಾಸವಾಗಿರುವ ಸ್ಥಳಕ್ಕೆ ಭೇಟಿ ನೀಡಿ, ಗಿರಿಜನರ ಸಮಸ್ಯೆಗಳನ್ನು ಆಲಿಸಿದ ಅವರು, ಸರಕಾರ ಆದಿವಾಸಿಗಳಿಗೆ ಸೂರು ಕಲ್ಪಿಸಿ ಬೇಕಾಗಿದೆ. ಅರಣ್ಯದಲ್ಲಿ ವಾಸವಾಗಿದ್ದ ಗಿರಿಜನರಿಗೆ ದೌರ್ಜನ್ಯ ವೆಸಗಿ, ಗುಡಿಸಲು ಕೆಡವಿರುವದನ್ನು ಖಂಡಿಸಿದರು. ಇಲಾಖಾಧಿಕಾರಿಗಳು ಹಾಗೂ ಸರಕಾರ ಗಿರಿಜನರನ್ನು ಬೀದಿಪಾಲು ಮಾಡಿ ನಿರ್ಗತಿಕರನ್ನಾಗಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ತಾನು ಗಿರಿಜನರ ಪರ ಬಂದಿದ್ದು, ಕೂಡಲೇ ಮುಖ್ಯಮಂತ್ರಿ ಸ್ಥಳಕ್ಕೆ ಭೇಟಿ ನೀಡಬೇಕೆಂದು ಒತ್ತಾಯಿಸಿದರು. ಕೆಲವು ಸಚಿವರುಗಳನ್ನು ದಿಡ್ಡಳ್ಳಿಗೆ ಕಳುಹಿಸಿ ಮೂಗಿಗೆ ತುಪ್ಪ ಸುರಿಯುವ ಕೆಲಸ ಮಾಡದಿರಿ ಎಂದ ಅವರು, ಸರಕಾರ ಹಾಗೂ ಅಧಿಕಾರಿಗಳು ತಕ್ಷಣ ಭೂಮಿಯನ್ನು ನೀಡಿ ಆದಿವಾಸಿಗಳಿಗೆ ಸೂರು ಕಲ್ಪಿಸಬೇಕು. ಅಹಿಂದ ಪರ ಭಾಷಣ ಮಾಡುವ ಮುಖ್ಯಮಂತ್ರಿಗಳು ಆದಿವಾಸಿಗಳ ಬಗ್ಗೆ ಕಾಳಜಿ ಇದ್ದಲ್ಲಿ ತಕ್ಷಣ ದಿಡ್ಡಳ್ಳಿಗೆ ಭೇಟಿ ನೀಡಿ ಸಮಸ್ಯೆಗೆ ಸ್ಪಂದಿಸಬೇಕೆಂದು ಒತ್ತಾಯಿಸಿದರು. ಸಮಸ್ಯೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೆ ತರಲಾಗುವದು ಎಂದರು. ಆದಿವಾಸಿಗಳು ಕಾಡನ್ನು ರಕ್ಷಣೆ ಮಾಡಿದ್ದಾರೆ. ಅರಣ್ಯ ಅಧಿಕಾರಿಗಳು ಲೂಟಿಕೋರರೊಂದಿಗೆ ಸೇರಿ ಅರಣ್ಯವನ್ನು ಲೂಟಿ ಮಾಡುತ್ತಿದ್ದಾರೆ. ಆದಿವಾಸಿಗಳು ವಿದ್ಯಾವಂತರಾಗಿ, ಸ್ವಾಭಿಮಾನದಿಂದ ಬದುಕಬೇಕು. ಕಾಡನ್ನು ಒತ್ತುವರಿ ಮಾಡಿಕೊಂಡಿರುವ ಒತ್ತುವರಿದಾರರನ್ನು ತೆರವುಗೊಳಿಸಿ ಆದಿವಾಸಿಗಳಿಗೆ ಸೂರು ಒದಗಿಸಬೇಕು ಹಾಗೂ ಸಾಗುವಳಿ ಮಾಡಲು ಜಾಗವನ್ನು ನೀಡಬೇಕೆಂದು ಅವರು ಒತ್ತಾಯಿಸಿದರು. ನಿಮ್ಮನ್ನು ಬೀದಿಪಾಲು ಮಾಡಲು ನಾನು ಬಿಡುವದಿಲ್ಲ. ನೆಮ್ಮದಿಯಿಂದ ಬದುಕಲು ಸರಕಾರ ಅವಕಾಶ ನೀಡಬೇಕು. ಪಕ್ಷವು ಬುಡಕಟ್ಟು ಜನಾಂಗಕ್ಕೆ ನ್ಯಾಯ ಒದಗಿಸುವವರೆಗೂ ಹೋರಾಟಕ್ಕೆ ತಮ್ಮ ಬೆಂಬಲವಿದೆ ಎಂದರು.
ಹೋರಾಟ ಯಶಸ್ವಿಯಾಗಲಿ ಎಂದರಲ್ಲದೇ, ಆದಿವಾಸಿಗಳ ಹೋರಾಟಕ್ಕೆ ಜಯವಾಗಲಿ, ಬೇಕು ಬೇಕು ಭೂಮಿ ಬೇಕು ಎಂದು ಘೋಷಣೆ ಕೂಗಿ ಆದಿವಾಸಿಗಳ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಜೇನುಕುರುಬರ ಮುತ್ತಮ್ಮ ಹಾಗೂ ಸ್ವಾಮಿ ತಮಗಾದ ಅನ್ಯಾಯ ಹಾಗೂ ಘಟನೆಯ ಬಗ್ಗೆ ತಮ್ಮ ಅಳಲನ್ನು ತೋಡಿಕೊಂಡರು.
ಈ ಸಂದರ್ಭ ಸಂಸದ ಪ್ರತಾಪ್ ಸಿಂಹ, ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಮಾಜಿ ಸಚಿವ ವಿಜಯಶಂಕರ್, ಬಿ.ಜೆ.ಪಿ. ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಎಂ. ಶಿವಣ್ಣ, ಜಿ.ಪಂ. ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಮಾಜಿ ಜಿ.ಪಂ. ಅಧ್ಯಕ್ಷ ರಾಜಾರಾವ್, ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಮನು ಮುತ್ತಪ್ಪ, ಸಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವಿಜು ಸುಬ್ರಮಣಿ, ಬಿ.ಜೆ.ಪಿ. ಜಿಲ್ಲಾ ಪ್ರ. ಕಾರ್ಯದರ್ಶಿ ಕಾಂತಿ ಸತೀಶ್, ವಿ.ಕೆ.ಲೋಕೇಶ್, ತಾ.ಪಂ. ಸದಸ್ಯರಾದ ಅಜಿತ್ ಕರುಂಬಯ್ಯ, ಜನೀಶ್ ಸೇರಿದಂತೆ ಇನ್ನಿತರರು ಇದ್ದರು.
ಬಿ.ಜೆ.ಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸ್ಥಳಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆ ಡಿ.ವೈ.ಎಸ್.ಪಿ. ಛಬ್ಬಿ, ಸಿ.ಐ. ಮೇದಪ್ಪ, ಎಸ್.ಐ. ಸಂತೋಷ್ ಕಶ್ಯಪ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.