ಮಡಿಕೇರಿ, ಅ. 22: ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ಇಂದು ವಿವಿಧೆಡೆ ಪೋಲಿಯೋ ನಿರ್ಮೂಲನೆ ಕುರಿತು ಜಾಗೃತಿ ವೀಡಿಯೋ ಶೋ ನಡೆಯಿತು.ಮಧ್ಯಾಹ್ನ ಮೂರು ಗಂಟೆಗೆ ನಗರದ ಇಂದಿರಾಗಾಂಧಿ ವೃತ್ತದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಕುಮಾರ್ ಭಿತ್ತಿ ಪತ್ರ ಹಂಚುವ ಮೂಲಕ ಉದ್ಘಾಟನೆ ಮಾಡಿದರು. ಪೋಲಿಯೋ ನಿರ್ಮೂಲನೆ ಕುರಿತು ರೋಟರಿ ನಡೆಸುತ್ತಿರುವ ಕ್ರಾಂತಿಯನ್ನು ಪ್ರಶಂಶಿಸಿದ ಅವರು, ಎಲ್ಲಾ ಪೋಷಕರೂ ಕಡ್ಡಾಯವಾಗಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿ ಭಾರತವನ್ನು ಪೋಲಿಯೋ ಮುಕ್ತವಾಗಿ ಉಳಿಸುವಂತೆ ಕರೆ ನೀಡಿದರು.
ಸಹಾಯಕ ರಾಜ್ಯಪಾಲ ಡಾ. ಪ್ರಶಾಂತ್ ಕೊಡಗಿನ ಹಲವೆಡೆ ರೋಡ್ ಶೋ ಏರ್ಪಡಿಸಿರುವ ಕುರಿತು ಮಾಹಿತಿ ನೀಡಿದರು. ವಿಶ್ವವನ್ನು ಪೋಲಿಯೋ ಮುಕ್ತವಾಗಿಸುವತ್ತ ರೋಟರಿ ವ್ಯಯಿಸುತ್ತಿರುವ ಹಣಕಾಸು ವಿವರ ಹಾಗೂ ಉದ್ದೇಶದ ಕುರಿತು ಮಾಜಿ ಅಧ್ಯಕ್ಷ ಕೆ.ಕೆ. ವಿಶ್ವನಾಥ್ ವಿವರಿಸಿದರು.
ರಾಜಾಸೀಟಿನಲ್ಲಿ: ಇಂದಿರಾ ಗಾಂಧಿ ವೃತ್ತ, ಮಾರುಕಟ್ಟೆ ಹಾಗೂ ಆಜಾದ್ ನಗರಗಳಲ್ಲಿ ರೋಡ್ ಶೋ ನಡೆಸಿದ ಬಳಿಕ ಸಂಜೆ ರಾಜಾಸೀಟಿನ ಎದುರು ಕಾರ್ಯಕ್ರಮ ನಡೆಸಲಾಯಿತು. ಜಿಲ್ಲಾ ಗವರ್ನರ್ ಡಾ. ನಾಗಾರ್ಜುನ್ ಭಾಗವಹಿಸಿ ಪೋಲಿಯೋ ನಿರ್ಮೂಲನೆಯ ಅಗತ್ಯತೆಯನ್ನು ವಿವರಿಸಿದರು. ಒಲಂಪಿಯನ್ ಸುನಿಲ್ ಭಿತ್ತಿ ಪತ್ರ ಬಿಡುಗಡೆ ಮಾಡಿದರು. ಮಿಸ್ಟಿಹಿಲ್ಸ್ ಅಧ್ಯಕ್ಷ ಕೇಶವ ಪ್ರಸಾದ್ ಸ್ವಾಗತಿಸಿದರು. ದುಬೈ ರೋಟರಿ ಸಂಸ್ಥೆಯೊಂದರ ಮಾಜಿ ಅಧ್ಯಕ್ಷ ಜಾಫರ್ ಎನ್. ಸುರಾ ಹಾಗೂ ರೋಟರಿ ಸದಸ್ಯರುಗಳು ಹಾಜರಿದ್ದರು. ಎಲ್ಲೆಡೆ 25 ನಿಮಿಷದ ವೀಡಿಯೋ ತೋರಿಸಿ ಪೋಲಿಯೋ ಕುರಿತು ಜಾಗೃತಿ ಮೂಡಿಸಲಾಯಿತು.