ಗೋಣಿಕೊಪ್ಪಲು, ಸೆ. 22: ಮಾಲ್ದಾರೆ ಹಾಗೂ ಚೆನ್ನಯ್ಯನ ಕೋಟೆ ವ್ಯಾಪ್ತಿಯಲ್ಲಿ ವಾಸ ಮಾಡುತ್ತಿರುವ ನೂರಾರು ಗಿರಿಜನ ಕುಟುಂಬಗಳು ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಡಿತರ ಚೀಟಿ ಇತ್ಯಾದಿಗಳಿಂದ ವಂಚಿತ ರಾಗಿದ್ದು, ಸರ್ಕಾರದ ಸೌಲಭ್ಯವನ್ನು ಹೊಂದಿಕೊಳ್ಳುವಲ್ಲಿ ಕಾನೂನು ತೊಡಕು ಉಂಟಾಗುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತಲ ತಲಾಂತರದಿಂದ ಶೋಷಣೆ ಗೊಳಗಾಗಿರುವ ಜೇನುಕುರುಬ, ಬೆಟ್ಟಕುರುಬ, ಯರವ ಇತ್ಯಾದಿ ಆದಿವಾಸಿ ಜನಾಂಗವನ್ನು ಗುರುತಿಸಿ ಮೊದಲಿಗೆ ಗುರುತಿನ ಚೀಟಿ, ನಂತರ ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿ ದೊರಕಿಸಿ ಕೊಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಕೊಡಗು ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕರ್ನಾಟಕ ಸರ್ಕಾರ, ವೀರಾಜಪೇಟೆ ತಾಲೂಕು ಕಾನೂನು ಸೇವೆಗಳ ಸಮಿತಿ, ವೀರಾಜಪೇಟೆ ವಕೀಲರ ಸಂಘ, ಕೊಡಗು ಜಿ.ಪಂ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ದಿಡ್ಡಳ್ಳಿ ಗಿರಿಜನ ಹಾಡಿಯಲ್ಲಿ ಬಸವನಹಳ್ಳಿ ಆಶ್ರಮ ಶಾಲೆಯ ಮುಂಭಾಗ ‘ಕಾಡಿನ ಮಕ್ಕಳಿಗೆ ಕಾನೂನು ಅರಿವು ಕಾರ್ಯಕ್ರಮ’ದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಯಾವದೇ ಶೋಷಿತ ಗಿರಿಜನರಿಗೆ ಸರ್ಕಾರದ ಸವಲತ್ತು ದೊರಯಬೇಕಿದ್ದಲ್ಲಿ ಗುರುತಿನ ಪತ್ರ, ಆಧಾರ್ ಕಾರ್ಡ್ ಅನಿವಾರ್ಯ. ಬ್ಯಾಂಕ್ ಖಾತೆ ತೆರೆಯಲೂ ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿ ವಿತರಿಸಲೂ ಆಧಾರ್ ಅಗತ್ಯವಿದೆ. ಈ ನಿಟ್ಟಿನಲ್ಲಿ ತಿಂಗಳ ಅವಧಿಯಲ್ಲಿ ಮೊದಲಿಗೆ ಎರಡು ಗ್ರಾಮ ಪಂಚಾಯಿತಿಗಳ ಆದಿವಾಸಿ ಜನಾಂಗವನ್ನು ಗುರುತಿಸಿ ಗುರುತಿನ ಚೀಟಿ ನೀಡುವ ಕಾರ್ಯಕ್ರಮವನ್ನು ಗ್ರಾ.ಪಂ.ಯ ಪಿಡಿಓ ಆಸಕ್ತಿವಹಿಸಿ ಮಾಡ ಬೇಕಾಗಿದೆ. ಗಿರಿಜನ ಮಹಿಳೆಯರಿಗೆ ಹೆರಿಗೆ ಭತ್ಯೆ ಇತ್ಯಾದಿ ಸರ್ಕಾರದ ಯೋಜನೆ ತಲಪಿಸಲು, ನಿವೇಶನ ಒದಗಿಸಲು, ವಸತಿ ಯೋಜನೆ ಅನುಷ್ಠಾನಗೊಳಿಸಲು, ಯಶಸ್ವಿನಿ ವಿಮಾ ಯೋಜನೆಯನ್ನು ಗಿರಿಜನ ಫಲಾನುಭವಿಗಳಿಗೆ ಒದಗಿಸಲು ಐಟಿಡಿಪಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ತುರ್ತು ಸ್ಪಂದನೆ ನೀಡಬೇಕಾಗಿದೆ ಎಂದು ಹೇಳಿದರು.
ಅಭಯಾರಣ್ಯದಲ್ಲಿ ವಾಸಿಸುತ್ತಿರುವ ಗಿರಿಜನರನ್ನು ಅರಣ್ಯದ ಅಂಚಿಗೆ ತಂದು ಎಲ್ಲಾ ಮೂಲಭೂತ ಸೌಲಭ್ಯವನ್ನು ಒದಗಿಸುವಂತಾಗಬೇಕು. ಸ್ವಾತಂತ್ರ್ಯ ಬಂದು 7 ದಶಕಗಳೇ ಕಳೆದರೂ ಬುಡಕಟ್ಟು ಜನಾಂಗ ವಸತಿ ಸವಲತ್ತು ವಂಚಿತವಾಗಲು ಕೆಲವೊಂದು ತಾಂತ್ರಿಕ ವ್ಯವಸ್ಥೆ ಕಾರಣ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಪ್ರತೀಯೊಬ್ಬರಿಗೂ ಸರ್ಕಾರದ ಯೋಜನೆ ತಲಪಲು, ನ್ಯೂನ್ಯತೆ ಸರಿಪಡಿಸಲು ಹಾಡಿಗಳಲ್ಲಿ ಕಾನೂನು ಅರಿವು ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿರುವದು ಶ್ಲಾಘನೀಯ ಎಂದು ನುಡಿದರು. ಹಾಡಿಗಳು ಹಾಗೂ ಬುಡಕಟ್ಟು ಕೃಷಿಕರ ಸಂಘದಲ್ಲಿರುವ ನಾಯಕರುಗಳು ಸಮಸ್ಯೆಯನ್ನು ಜಿಲ್ಲಾಡಳಿತಕ್ಕೆ ತಲಪಿಸುವ ಕೆಲಸ ಮಾಡಬೇಕು. ಗಿರಿಜನ ಮಹಿಳೆಯರು ಆಸ್ಪತ್ರೆಯಲ್ಲಿ ಹೆರಿಗೆಯಾಗುವಂತಾಗಬೇಕು. ಮೊದಲು ತಮ್ಮ ಮಕ್ಕಳಿಗೆ ವಸತಿ ಶಾಲೆಯಲ್ಲಿ ಶಿಕ್ಷಣ ನೀಡಲು ಮುಂದಾಗಬೇಕು. ಅರಣ್ಯ ಹಕ್ಕು ಕಾಯ್ದೆ ಶೇ. 100 ರಷ್ಟು ಜಿಲ್ಲೆಯಲ್ಲಿ ಜಾರಿಯಾಗುವ ನಿಟ್ಟಿನಲ್ಲಿ ಜಿಲ್ಲಾಡಳಿತದ ಸಹಕಾರ ಇದ್ದೇ ಇದೆ. ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆಯ ಮಟ್ಟದಲ್ಲಿ ಆಗಬೇಕಾದ ಜಾತಿ ದೃಢೀಕರಣ ಪತ್ರ ಇತ್ಯಾದಿಗಳನ್ನು ಶೋಷಿತ ವರ್ಗಕ್ಕೆ ಶೀಘ್ರ ನೀಡುವಂತಾಗಲು ಸೂಚನೆ ನೀಡಲಾಗುವದು. ಹಲವಷ್ಟು ಗಿರಿಜನ ಕುಟುಂಬಗಳಲ್ಲಿ ಸಾವು ಸಂಭವಿಸಿದರೆ ಅಂತ್ಯಸಂಸ್ಕಾರಕ್ಕೆ ಶ್ಮಸಾನವೂ ಇಲ್ಲ. ಈ ಬಗ್ಗೆಯೂ ಚಿಂತನೆ ನಡೆಸಿ ಜಾಗ ಮುಂಜೂರು ಮಾಡಲಾಗುವದು ಎಂದು ಅಭಿಪ್ರಾಯ ಪಟ್ಟ ಅವರು ಗಿರಿಜನ ಪುರುಷರು ಹಾಗೂ ಮಹಿಳೆಯರು ಕುಡಿತದ ಚಟ ಬಿಡಬೇಕೆಂದರು.
ಕೊಡಗು ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಸಿವಿಲ್ ನ್ಯಾಯಾಧೀಶ ಮೋಹನ್ ಪ್ರಭು ಮಾತನಾಡಿ, ನಾವೆಲ್ಲಾ ಮನುಷ್ಯ ಜಾತಿ. ಹುಟ್ಟಿದ ಮೇಲೆ ಜೀವಿಸಲು ಎಲ್ಲಾ ಮೂಲಭೂತ ಹಕ್ಕು ಹಾಗೂ ಕರ್ತವ್ಯ ನಮ್ಮ ಸಂವಿಧಾನದಲ್ಲಿದೆ. ಮಹಿಳೆಯರು, ಮಕ್ಕಳ ರಕ್ಷಣೆ, ಪರಿಶಿಷ್ಟ ಜಾತಿ-ಪಂಗಡದ ಅಭ್ಯುದಯಕ್ಕೆ ಸಂವಿಧಾನಾತ್ಮಕ ಹಕ್ಕು ಬಾಧ್ಯತೆಗಳಿವೆ. 2006 ರಲ್ಲಿ ಕಾಡಿನಲ್ಲಿ ವಾಸಿಸುವ ಗಿರಿಜನರ ಪರವಾಗಿ ಅರಣ್ಯ ಹಕ್ಕು ಕಾಯ್ದೆ ಜಾರಿಯಾಯಿತು. ಕಾಡಿನಲ್ಲಿ ಸುಮಾರು ಮೂರು ತಲೆಮಾರು ವಾಸಮಾಡಿದ್ದು, 2005ಕ್ಕೂ ಮುನ್ನ ಕಾಡಿನಲ್ಲಿ ವಾಸವಿದ್ದವರಿಗೆ ಅರಣ್ಯ ಹಕ್ಕು ಅನ್ವಯಿಸುತ್ತದೆ. ಈ ಬಗ್ಗೆ ಗ್ರಾಮ ಸಮಿತಿಗಳ ಗಮನಕ್ಕೆ ತಂದು ಅನ್ಯಾಯವಾಗದಂತೆ ವಸತಿ ಇತ್ಯಾದಿ ಪೂರಕ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಉಚಿತ ಶಿಕ್ಷಣ, ಶುದ್ಧ ಕುಡಿಯುವ ನೀರು ಒದಗಿಸಬೇಕಾಗಿದೆ. ಬಾಲ್ಯ ವಿವಾಹಕ್ಕೆ ಕಡಿವಾಣ ಅಗತ್ಯ. ಉಚಿತ ಕಾನೂನು ಸೇವೆಯೂ ಪರಿಶಿಷ್ಟ ಜಾತಿ-ಪಂಗಡಗಳಿಗೆ ಲಭ್ಯವಿದ್ದೂ, ಅರ್ಜಿ ಬರೆಯಲೂ ಸ್ವಯಂ ಸೇವಕರ ಸೌಲಭ್ಯ ಹೊಂದಲೂ ಅವಕಾಶವಿದೆ ಎಂದು ಹೇಳಿದರು.
ಕೊಡಗು ಗ್ರಾಮೀಣ ಮಕ್ಕಳ ವೈದ್ಯಾಧಿಕಾರಿ ಡಾ. ದೇವಿ ಆನಂದ್ ಅವರು, ಮಹಿಳೆಯರು, ಮಕ್ಕಳಿಗೆ ಸಿಗುವ ವೈದ್ಯಕೀಯ ಸೇವೆ ಹಾಗೂ ಶಸ್ತ್ರಚಿಕಿತ್ಸೆಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಇತ್ಯಾದಿಗಳ ಬಗ್ಗೆ ವಿವರಿಸಿದರು.
ಸಿದ್ದಾಪುರ ಪೆÇಲೀಸ್ ಉಪನಿರೀಕ್ಷಕ ಕುಮಾರ್ ಅವರು ಬಾಲ್ಯ ವಿವಾಹ, ಅತ್ಯಾಚಾರ ಇತ್ಯಾದಿಗಳಿಂದ ಗಿರಿಜನರು ಶೋಷಣೆಗೊಳಗಾಗುತ್ತಿರುವದು ಹಾಗೂ ಅಗತ್ಯ ಕಾನೂನು ಸೇವೆಗಳ ಬಗ್ಗೆ ಮಾಹಿತಿ ನೀಡಿದರು.
ಗಿರಿಜನ ಮುಖಂಡ ಜೇನು ಕುರುಬರ ಅಪ್ಪಾಜಿ, ತಾ.ಪಂ. ಮಾಜಿ ಸದಸ್ಯ ಜೆ.ಕೆ. ರಾಮು ಮಾತನಾಡಿದರು. ಜಿಲ್ಲಾ ಸಮಗ್ರ ಗಿರಿಜನ ಯೋಜನೆ (ಐಟಿಡಿಪಿ) ಪ್ರಬಾರ ಯೋಜನಾ ಸಮನ್ವಯಾಧಿಕಾರಿ ಕೆ.ವಿ. ಸುರೇಶ್ ಅವರು, ಕೊಡಗು ಜಿಲ್ಲೆಯಲ್ಲಿ ಒಟ್ಟು 58 ಸಾವಿರ ಗಿರಿಜನರಿದ್ದು, 154 ಹಾಡಿಗಳು ಹಾಗೂ 14,200 ಕುಟುಂಬಗಳು ವಾಸವಿದ್ದು ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಹಲವು ಗಿರಿಜನರು ತಮ್ಮ ಸಂಕಷ್ಟಗಳನ್ನು ತೋಡಿಕೊಂಡರು. ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯರಾದ ಇಂದಿರಾ, ಕಾವೇರಮ್ಮ, ಶಿವಮ್ಮ, ರಾಜು, ತಾಲೂಕು ಪರಿಶಿಷ್ಟ ಇಲಾಖೆಯ ಚಂದ್ರಶೇಖರ್, ರಂಗನಾಥ್ ಮುಂತಾದವರು ಉಪಸ್ಥಿತರಿದ್ದರು. ಚೆನ್ನಯ್ಯನಕೋಟೆ ಪಿಡಿಓ ರಾಜನ್ ಮುಂತಾದವರು ಉಪಸ್ಥಿತರಿದ್ದರು.
- ಟಿ.ಎಲ್. ಶ್ರೀನಿವಾಸ್