ಗೋಣಿಕೊಪ್ಪಲು, ಸೆ. 9: ಮಾಯಮುಡಿ ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಮೈದಾನದಲ್ಲಿ ಇಂದಿನಿಂದ ಮೂರು ದಿನಗಳ ಕಾಲ 5 ನೇ ವರ್ಷದ ಕೊಡವ-ಅಮ್ಮಕೊಡವ ತಂಡಗಳ ನಡುವೆ ವಾಲಿಬಾಲ್ ಪಂದ್ಯಾವಳಿ ನಡೆಯಲಿದ್ದು, ಮಾಯಮುಡಿ ಗ್ರಾ.ಪಂ. ಅಧ್ಯಕ್ಷ ಕಾಳಪಂಡ ಟಿಪ್ಪು ಬಿದ್ದಪ್ಪ ಅವರು ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಶ್ರೀ ಮಾನಿಲ್ ಅಯ್ಯಪ್ಪ ಸೇವಾ ಸಮಿತಿ, ಶ್ರೀ ಮಾನಿಲ್ ಅಯ್ಯಪ್ಪ ಯುವಕ ಸಂಘ, ಕೊಡವ ಕೂಟ, ದೊಡ್ಡಮಾಡ್ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕೊಡವ 23 ತಂಡ ಹಾಗೂ ಅಮ್ಮಕೊಡವ -2 ತಂಡಗಳು ಪ್ರಶಸ್ತಿಗಾಗಿ ಸೆಣೆಸಲಿದ್ದು ಇಂದು ನಡೆದ ಮನೆಯಪಂಡ-ಚಿರಿಯಪಂಡ ನಡುವಿನ ಉದ್ಘಾಟನಾ ಪಂದ್ಯಾಟವನ್ನು ಭಾರತ ತಂಡದ ಹಾಕಿ ಆಟಗಾರ ಎಸ್.ಕೆ. ಉತ್ತಮ್ಮ ಅವರ ಪೆÇೀಷಕರಾದ ಸಣ್ಣುವಂಡ ಕುಶಾಲಪ್ಪ ಉದ್ಘಾಟಿಸಿ, ಶುಭಕೋರಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ, ಜಿ.ಪಂ. ಸದಸ್ಯ ಮಾಜಿ ಮೂಕಳೇರ ಕುಶಾಲಪ್ಪ ಅವರು, ಜನಾಂಗದ ನಡುವೆ ಪ್ರೀತಿ ವಿಶ್ವಾಸ, ಬಾಂಧವ್ಯವೃದ್ಧಿಗೆ ಕೊಡವ ಅಮ್ಮಕೊಡವ ಕ್ರೀಡಾಕೂಟ ಉತ್ತೇಜನಕಾರಿಯಾಗಿದೆ. ಗ್ರಾಮೀಣ ಕ್ರೀಡೆಯನ್ನು ಉಳಿಸಿ ಬೆಳೆಸಲು ಎಲ್ಲರೂ ಮುಂದಾಗಬೇಕು ಎಂದು ಹೇಳಿದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಟಿಪ್ಪು ಬಿದ್ದಪ್ಪ ಅವರು, ಒಲಂಪಿಕ್‍ನಲ್ಲಿ ಗ್ರಾಮೀಣ ಪ್ರತಿಭೆಗಳೇ ಅಧಿಕವಾಗಿ ಸಾಧನೆ ಮಾಡುತ್ತಿದ್ದು, ನಗರ ಪ್ರದೇಶದ ಮಕ್ಕಳಿಗೆ ಮಾತ್ರ ಹೆಚ್ಚಿನ ಅವಕಾಶ ಕಲ್ಪಿಸಲಾಗುತ್ತಿದೆ. ಕೊಡವ-ಅಮ್ಮಕೊಡವ ಜನಾಂಗ ಅನ್ಯೋನ್ಯತೆಯೊಂದಿಗೆ ಬಾಳುತ್ತಿದ್ದು, ನಮ್ಮಲ್ಲಿ ಕೆಲವು ಕೊಡವ ಜನಾಂಗ ಅಹಂ ಹಾಗೂ ಉದ್ಧಟತನದಿಂದ ವರ್ತಿಸುತ್ತಿದ್ದು ಇದ್ದನ್ನು ಕೈಬಿಡಬೇಕು ಎಂದು ಕಿವಿಮಾತು ಹೇಳಿದರು.

ಪೆÇನ್ನಂಪೇಟೆ ಸರ್ಕಾರಿ ಪ.ಪೂ. ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಹೆಮ್ಮಚ್ಚಿಮನೆ ಕಮಲಾಕ್ಷಿ ಅವರು ಮಾತನಾಡಿ, ಮನಸ್ಸು ಹಾಗೂ ಶಾರೀರಿಕ ಬೆಳವಣಿಗೆಗೆ ಕ್ರೀಡೆ ಅಗತ್ಯ. ಕಾಡು ಪ್ರಾಣಿಗಳಿಗಿಂತಲೂ ಮನುಷ್ಯನೇ ಕ್ರೂರ ಪ್ರಾಣಿಯಾಗಿದ್ದು ದಕ್ಷಿಣ ಕಾಶ್ಮೀರ ಕೊಡಗಿನ ಪರಿಸರ ಇಲ್ಲಿನ ವನ್ಯಜೀವಿಗಳು, ಅಗಾಧ ಸಸ್ಯ ಸಂಪತ್ತನ್ನು ಉಳಿಸಲು, ಪ್ಲಾಸ್ಟಿಕ್ ನಿರ್ಮೂಲನೆಗೆ ನಾವೆಲ್ಲಾ ಪಣತೊಡಬೇಕು ಎಂದು ಅಭಿಪ್ರಾಯಪಟ್ಟರು.

ಪತ್ರಕರ್ತ ಚಮ್ಮಟ್ಟೀರ ಪ್ರವೀಣ್ ಮಾತನಾಡಿ, ಕೊಡವ ಅಮ್ಮಕೊಡವ ಅಲ್ಲದೆ ಜಿಲ್ಲೆಯ ಇತರೆ ಮೂಲನಿವಾಸಿ ಜನಾಂಗಗಳ ನಡುವೆಯೂ ಕ್ರೀಡಾಕೂಟವನ್ನು ನಡೆಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಬೇಕು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಚೆಪ್ಪುಡಿರ ಅಯ್ಯಪ್ಪ ಅವರು, ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ಅಗತ್ಯ. ಕ್ರೀಡಾಪಟುಗಳು ಕ್ರೀಡಾಮನೋಭಾವದೊಂದಿಗೆ ಸ್ಪರ್ಧಿಸಬೇಕೇ ವಿನಃ ಸೇಡಿನ ಮನೋಭಾವ ಬಿಡಬೇಕು ಎಂದು ಹೇಳಿದರು. ಇದೇ ಸಂದರ್ಭ ಗೆದ್ದ ಹಾಗೂ ಸೋಲನ್ನಪ್ಪಿದ ತಂಡದ ಉತ್ತಮ ಆಟಗಾರರಿಗೆ ಹಾಗೂ ಶಿಸ್ತುಬದ್ಧ ತಂಡಕ್ಕೆ ತಾವು ವೈಯಕ್ತಿಕ ಬಹುಮಾನ ನೀಡುವದಾಗಿ ಘೋಷಣೆ ಮಾಡಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಅಣ್ಣೀರ ಹರೀಶ್ ಮಾದಪ್ಪ ಸ್ವಾಗತ, ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಗೌರವ ಅಧ್ಯಕ್ಷ ರಮೇಶ್ ಮಾಯಮುಡಿ ನಿರೂಪಿಸಿ, ವಂದಿಸಿದರು.

ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಸಣ್ಣುವಂಡ ವಿಶ್ವನಾಥ್, ಯುವಕ ಸಂಘದ ಅಧ್ಯಕ್ಷ ಚೆಪ್ಪುಡಿರ ಕೆ.ಪ್ರದೀಪ್ ಉಪಸ್ಥಿತರಿದ್ದರು. ವಾಲಿಬಾಲ್ ಪಂದ್ಯದ ತೀರ್ಪುಗಾರರಾಗಿ ಮಲ್ಲಂಗಡ ಸತ್ಯ ಹಾಗೂ ಚಿರಿಯಪಂಡ ಸುಬ್ಬಯ್ಯ ಕಾರ್ಯನಿರ್ವಹಿಸಿದರು.