ಕೂಡಿಗೆ, ಜ. 24: ಕಣಿವೆಯಲ್ಲಿ ನಡೆದ ಮಾನವ ಹಕ್ಕುಗಳು ಮತ್ತು ಕಾನೂನು ಅರಿವು ಸಂವಾದ ಕಾರ್ಯಕ್ರಮ ವಿಶ್ವಮಾನವ ಹಕ್ಕು ದಿನಾಚರಣೆಯ ಅಂಗವಾಗಿ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ-ದೆಹಲಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕ್ರೀಯಾಶೀಲ ಅಭಿವೃದ್ಧಿ ಸಂಸ್ಥೆ (ಎ.ಡಿ.ಓ) ಮಡಿಕೇರಿ ಇವರ ಆಶ್ರಯದಲ್ಲಿ ಮಾನವ ಹಕ್ಕುಗಳು ಹಾಗೂ ಕಾನೂನು ಅರಿವು ಸಂವಾದ ಕಾರ್ಯಕ್ರಮ ಕಣಿವೆಯ ಶ್ರೀ ರಾಮಲಿಂಗೇಶ್ವರ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆ ಯನ್ನು ಜಿ.ಕಾ.ಸೇ.ಪ್ರಾ. ಸದಸ್ಯ ಕಾರ್ಯದರ್ಶಿ ಮೋಹನ್ ಪ್ರಭು ನೆರವೇರಿಸಿ ನಂತರ ಮಾತನಾಡಿ, ಹುಟ್ಟಿನಿಂದ ಸಿಗುವ ಹಕ್ಕೇ ಮಾನವ ಹಕ್ಕಾಗಿರುತ್ತದೆ. ಸಂವಿಧಾನ ರಚನೆ ಗೊಂಡಾಗಿನಿಂದ ಅಳವಡಿಸ ಲಾಗಿರುವ ಕಾನೂನನ್ನು ಪ್ರತಿಯೊಬ್ಬರು ಅರಿತು ತನ್ನ ಕಾರ್ಯವನ್ನು ನಿರ್ವಹಿಸಿದಲ್ಲಿ ಸಮಾನ ಹಕ್ಕಿನ ಅರಿವಿನ ಮೂಲಕ ತನ್ನ ಪ್ರಗತಿಯನ್ನು ಸಾಧಿಸಲು ಸಹಕಾರಿಯಾಗುತ್ತದೆ.
ಮಹಿಳೆಯರ ರಕ್ಷಣೆ ಸೇರಿದಂತೆ ಎಲ್ಲರನ್ನೂ ಗೌರವದಿಂದ ಕಾಣುವ ಜೀವಿಸುವ ಹಕ್ಕು, ಶುದ್ಧವಾದ ಶಿಕ್ಷಣದ ಹಕ್ಕು ಹಾಗೂ ವಿಶಾಲವಾದ ಶೈಕ್ಷಣಿಕ ಹಕ್ಕು ಇವುಗಳೆಲ್ಲವೂ ಮನುಷ್ಯನ ದೇಹದ ಅಂಗಗಳಿದ್ದ ಹಾಗೆ ದೇಶದ ಪ್ರಗತಿಗೆ ಕಾನೂನು ಸಹ ಸಹಕಾರಿಯಾಗುತ್ತದೆ. ಈ ಸಂದರ್ಭ ಮಹಿಳೆಯ ಕಾನೂನು ಅರಿವಿನ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸೋಮವಾರಪೇಟೆ ವಕೀಲ ಅಭಿಮನ್ಯು ಕುಮಾರ್ ಮಾತನಾಡಿ, ಕಾನೂನನ್ನು ಗೌರವದಿಂದ ಕಾಣುತ್ತಾ ತನ್ನ ಹಕ್ಕು ಚಲಾವಣೆಯ ವಿಷಯಗಳನ್ನು ಪ್ರತಿಯೊಬ್ಬರು ಅರಿತು ಸಾಗುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ. ನಾರಾಯಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿಯ ಕೆ.ಎನ್. ಸುರೇಶ್, ಹೆಬ್ಬಾಲೆ ಗ್ರಾ.ಪಂ. ಅಧ್ಯಕ್ಷೆ ಕೆ.ಎಸ್. ಲತಾ, ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೆಚ್.ಈ. ರಾಕೇಶ್, ಕಣಿವೆ ಸಾಹಿತಿ ಭಾರಧ್ವಾಜ್, ಮಾನವ ಹಕ್ಕು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಸೋಮವಾರ ಪೇಟೆ ತಾಲೂಕು ಅಧ್ಯಕ್ಷ ಪಿ. ಮಧು, ರಾಜ್ಯ ಕಾರ್ಯದರ್ಶಿ ಧರಣಿ, ಮಹಿಳಾ ಘಟಕದ ಕಾರ್ಯದರ್ಶಿ ಫಾತಿಮಾ, ಮಡಿಕೇರಿ ತಾಲೂಕು ಮಾನವ ಹಕ್ಕು ಅಧ್ಯಕ್ಷ ಜಿನ್ನು ನಾಣಯ್ಯ, ಗಂಗಾಧರ್, ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶೈಲ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಸುರೇಶ್ ಮತ್ತು ಸಾಹಿತಿ ಭಾರಧ್ವಾಜ್ ಇವರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹೋಬಳಿ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತರು ಹಾಗೂ ವಿವಿಧ ಸಂಸ್ಥೆಯ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.