ಸೋಮವಾರಪೇಟೆ, ನ. 3: ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕಾರೇಕಾಡು ಗ್ರಾಮಕ್ಕೆ ತೆರಳುವ ರಸ್ತೆಯನ್ನು ಶಾದಿ ಮಹಲ್‍ನ ಆಡಳಿತ ಮಂಡಳಿಯಿಂದ ಅಗೆಯಲಾಗಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆಯಿತು. ಮಾದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ನೂತನವಾಗಿ ಶಾದಿ ಮಹಲ್ ನಿರ್ಮಾಣವಾಗಿದ್ದು, ಇದಕ್ಕೆ ಒತ್ತಿಕೊಂಡಂತೆ ಕಾರೇಕಾಡು ಗ್ರಾಮಕ್ಕೆ ತೆರಳುವ ರಸ್ತೆ ಇದೆ. ಈ ರಸ್ತೆಯನ್ನು ಏಕಾಏಕಿ ಶಾದಿಮಹಲ್ ಆಡಳಿತ ಮಂಡಳಿಯವರು ಜೆಸಿಬಿ ಯಂತ್ರ ಬಳಸಿ ಸಮತಟ್ಟು ಮಾಡಿದ್ದು, ಗ್ರಾಮಕ್ಕೆ ತೆರಳಲು ಈ ಹಿಂದೆಯಿದ್ದಂತೆಯೇ ರಸ್ತೆ ನಿರ್ಮಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ ಹಿನ್ನೆಲೆ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ನಂತರ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿ ಪ್ರಮುಖರು, ಅಭಿವೃದ್ಧಿ ಅಧಿಕಾರಿ, ಕಾರೇಕಾಡು ಗ್ರಾಮಸ್ಥರು ಹಾಗೂ ಶಾದಿಮಹಲ್ ಆಡಳಿತ ಮಂಡಳಿ ಪ್ರಮುಖರ ನಡುವೆ ಮಾತುಕತೆ ನಡೆದು, ಈ ಹಿಂದೆ ಇದ್ದಂತೆಯೇ ರಸ್ತೆಯನ್ನು ಮರು ನಿರ್ಮಿಸಿಕೊಡುವ ಬಗ್ಗೆ ಭರವಸೆ ದೊರೆತ ಹಿನ್ನೆಲೆ ಪರಿಸ್ಥಿತಿ ತಿಳಿಯಾಯಿತು.

ಶಾದಿಮಹಲ್ ಪಕ್ಕದ ರಸ್ತೆಯನ್ನು ಅಗಲೀಕರಣಗೊಳಿಸುವದು, ವಾಹನ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ರಸ್ತೆ ಅಗಲೀಕರಣಕ್ಕೆ ಆಡಳಿತ ಮಂಡಳಿಯವರು ಗುರುವಾರ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು ಸ್ಥಳ ಪರಿಶೀಲಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಣಯಿಸಲಾಗಿತ್ತು.

ಈ ಮಧ್ಯೆ ಸಾಲು ಸಾಲು ರಜೆ ಇದ್ದ ಹಿನ್ನೆಲೆ ಗ್ರಾ.ಪಂ. ಪ್ರಮುಖರು ಸ್ಥಳ ಪರಿಶೀಲನೆ ನಡೆಸಿರಲಿಲ್ಲ. ಆದರೂ ಮೊನ್ನೆ ದಿನ ರಾತ್ರಿ ರಸ್ತೆಯನ್ನು ಜೆಸಿಬಿ ಬಳಸಿ ಅಗೆಯಲಾಗಿತ್ತು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು ಪಂಚಾಯಿತಿಗೆ ದೂರು ನೀಡಿದರು.

ಸ್ಥಳಕ್ಕೆ ತೆರಳಿದ ಗ್ರಾ.ಪಂ. ಆಡಳಿತ ಮಂಡಳಿ ಸದಸ್ಯರು, ಅಭಿವೃದ್ಧಿ ಅಧಿಕಾರಿ ಸೇರಿದಂತೆ ಇತರರು ಪರಿಶೀಲನೆ ನಡೆಸಿದ್ದು, ಉಭಯ ಕಡೆಯವರೊಂದಿಗೆ ಮಾತುಕತೆ ನಡೆಸಿದರು.

ಈ ಸಂದರ್ಭ ಈ ಹಿಂದೆ ಇದ್ದಂತೆಯೇ ರಸ್ತೆಯನ್ನು ಮರು ನಿರ್ಮಿಸಿಕೊಡುವ ಬಗ್ಗೆ ಶಾದಿಮಹಲ್ ಆಡಳಿತ ಮಂಡಳಿಯಿಂದ ಲಿಖಿತ ಭರವಸೆ ಪಡೆದುಕೊಂಡಿದ್ದು, ಇದರಂತೆ ಸಂಜೆ ವೇಳೆಗೆ ರಸ್ತೆಯನ್ನು ಮೊದಲಿನಂತೆ ಮಾಡಲಾಯಿತು.

ಗ್ರಾ.ಪಂ. ಅಧ್ಯಕ್ಷೆ ಲತಾ ನಾಗರಾಜ್, ಸದಸ್ಯರುಗಳಾದ ಉಮೇಶ್ ಉತ್ತಪ್ಪ, ಮಜೀದ್, ಇಬ್ರಾಹಿಂ, ಲತೀಫ್, ಪ್ರೇಮಾ, ಭಾಗೀರಥಿ, ಪಿಡಿಓ ಶ್ಯಾಂ, ಶಾದಿಮಹಲ್ ಅಧ್ಯಕ್ಷ ಗಫರ್, ಸ್ಥಳೀಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸಿದರು.

ಸ್ಥಳಕ್ಕೆ ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಶಿವಣ್ಣ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.