ವೀರಾಜಪೇಟೆ. ಜ. 5: ದೇಶ ರಕ್ಷಣೆಯಲ್ಲಿ ತೊಡಗಿಸಿಕೊಂಡ ನಿವೃತ್ತ ಲೆ.ಕ. ಕರುಂಬಯ್ಯ ಮತ್ತು ನಿವೃತ್ತÀ ಕ್ಯಾಪ್ಟನ್ ಪಿ.ಎಸ್. ಕಾರ್ಯಪ್ಪ ಅವರನ್ನು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಕ್ರಿಮಿನಲ್ ಪಟ್ಟ ಕಟ್ಟಿ ಅಪಮಾನಿಸಿರುವದು ಇಡೀ ಸೇನಾನಿಗಳು ಹಾಗೂ ಕೊಡಗಿನ ಜನರಿಗೆ ಮಾಡಿದ ಅಪಮಾನ ಎಂದು ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಮೂಕೊಂಡ ಬೋಸ್ ದೇವಯ್ಯ ಹೇಳಿದರು.
ಅಮ್ಮತ್ತಿಯ ಹೊಸೂರು ಗ್ರಾಮದಲ್ಲಿನ ನಿವೃತ್ತ ಸೈನಿಕರ ವಿರುದ್ಧ ತಾಲೂಕು ತಹಶೀಲ್ದಾರ್ ಮಹಾದೇವಸ್ವಾಮಿ ಅವರು ಜಾಗದ ಮಧ್ಯ ಭಾಗದಲ್ಲಿರುವ ಸರಕಾರಿ ಜಾಗಕ್ಕೆ ಜೆಸಿಬಿ ತೆಗೆದುಕೊಂಡು ಹೋಗಲು ಅವಕಾಶ ನೀಡದ ಹಿನ್ನೆಲೆಯಲ್ಲಿ ವಿನಾ ಕಾರಣ ಕ್ರಿಮಿನಲ್ ಪ್ರಕರಣ ದಾಖಲಿಸಿರುವದನ್ನು ಖಂಡಿಸಿ ಕೊಡವ ಸಮಾಜ, ಅಮ್ಮತ್ತಿ ರೈತ ಸಂಘ, ಯುಕೋ ಸಂಘಟನೆ , ಕಾವೇರಿ ಸೇನೆ, ಸ್ಥಳೀಯ ಗ್ರಾಮಸ್ಥರ ನೇತೃತ್ವದಲ್ಲಿ ಇಂದು ಅಮ್ಮತ್ತಿ ಕಂದಾಯ ಇಲಾಖೆಯ ಮುಂದೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಪ್ರತಿಭಟನಾÀ ನಿರತರನ್ನು ಉದ್ದೇಶಿಸಿ ಮಾತನಾಡಿದರು.
ಇಬ್ಬರು ಸೇನಾನಿಗಳ ತಂದೆ ಕಾಲದಲ್ಲಿ ಅವರ ಖಾಸಗಿ ತೋಟದ ಮಧ್ಯ ಭಾಗದಲ್ಲಿರುವ ಸರಕಾರಿ ಜಾಗದ ಮಂಜೂರಾತಿಗೆ
(ಮೊದಲ ಪುಟದಿಂದ) ಕೋರಿ 53 ವರ್ಷದ ಹಿಂದೆ ಅರ್ಜಿ ಹಾಕಿ ಹಣವನ್ನು ಪಾವತಿಸಿದ ದಾಖಲೆ ಇದೆ. ಆದರೆ ಇಲ್ಲಿ ಸರಕಾರಿ ಜಾಗಕ್ಕೆ ತೆರಳಲು ದಾರಿ ಇಲ್ಲದ್ದರಿಂದ ಖಾಸಗಿ ಜಾಗದಲ್ಲಿ ಪ್ರವೇಶ ಅತಿಕ್ರಮಣವಾಗು ತ್ತದೆ ಎಂಬ ಪರಿಜ್ಞಾನ ಅಧಿಕಾರಿಗಳಿಗೆ ಇಲ್ಲವೇ ಎಂದು ಪ್ರಶ್ನಿಸಿದ ಅವರು ಅಧಿಕಾರಿಗಳಿಗೆ ಸಹಕಾರ ನೀಡಿದ್ದು, ಯಂತ್ರ ತೆಗೆದುಕೊಂಡುಹೋಗಲು ಮಾತ್ರ ಅಡ್ಡಿ ಮಾಡಿದ್ದಾರೆ. ವಿಚಾರ ತಿಳಿದ ಗ್ರಾಮಸ್ಥರು ಅಲ್ಲಿಗೆ ತೆರಳಿ ವಿನಾಃಕಾರಣ ತೊಂದರೆ ನೀಡಬೇಡಿ ಎಂದು ತಿಳಿಸಿದ್ದರು. ಆದರೆ ಅಧಿಕಾರಿಗಳು ಉದ್ಧಟತನ ತೋರಿದ್ದು, ತಕ್ಷಣ ಪ್ರಕರಣ ಹಿಂಪಡೆಯದೇ ಹೋದರೆ ಮುಂದಿನ ಪರಿಣಾಮಕ್ಕೆ ತಹಶೀಲ್ದಾರ್ ಹೊಣೆ ಎಂದು ಬೋಸ್ ದೇವಯ್ಯ ಎಚ್ಚರಿಸಿದರು.
ಯುಕೋ ಸಂಘಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿ, ಯಾರು ಎಲ್ಲಿಂದ ವಲಸೆ ಬಂದರೂ ಅವರಿಗೆ ಗೌರವ ನೀಡುತ್ತೇವೆ. ಆದರೆ ನಮಗೆ ತೊಂದರೆ ಆದರೆ ಸಹಿಸುವದಿಲ್ಲ. ಕಾಡಿನಲ್ಲಿರುವ ನಕ್ಸಲರು ಅಪಾಯಕಾರರಲ್ಲ. ನಮ್ಮ ನಡುವೆ ನಾಡಿನೊಳಗೆ ಇರುವ ನಕ್ಸಲರೇ ಅಪಾಯಕಾರಿ. ಇಂದು ದಿಢೀರ್ ಎಂದು ಕೆಲವು ನಿರಾಶ್ರಿತರು ಕೊಡಗಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೊಡಗಿನಲ್ಲಿ ಎಲ್ಲಾ ನಿರಾಶ್ರಿತರಿಗೆ ಜಾಗ ನೀಡುತ್ತಾ ಹೋದರೆ ಕೊಡಗು ಬರಡಾದೀತು. ಅಭಿವೃದ್ಧಿ ಹೆಸರಿನಲ್ಲಿ ಇಲ್ಲಿನ ಜಲ, ಅರಣ್ಯ, ಪ್ರಕೃತಿ ನಾಶವಾಗುತ್ತಿದೆ. ಅತ್ತ ಕೊಡಗಿನ ಯೋಧರು ಗಡಿಯನ್ನು ಕಾಯುತ್ತಿದ್ದು, ಅವರ ತವರಿನಲ್ಲಿರುವವರಿಗೆ ರಕ್ಷಣೆ ಇಲ್ಲದಾಗಿದೆ. ಕೊಡವರಲ್ಲಿ ಸಂಘಟನೆ ಇಲ್ಲ ಎಂದು ಪೊಲೀಸ್ ಇಲಾಖೆ ಹಾಗೂ ಅಧಿಕಾರಿಗಳು ಭಾವಿಸುವದು ಬೇಡ. ಕೊಡವ ಕೊಡವೇತರರು ಎಂದು ಬೇಧ ಹುಟ್ಟು ಹಾಕಲಾಗಿದೆ. ಇನ್ನು ಮುಂದೆ ಕೊಡವರು ದಿಟ್ಟ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಕೆ ನೀಡಿದ ಅವರು ಮಾಜಿ ಸೈನಿಕರನ್ನು ಗೌರವಿಸಿ ಅವರ ಪ್ರಕರಣ ಹಿಂಪಡೆದು ಅವರಿಗೆ ಜಾಗ ನೀಡುವಂತೆ ಆಗ್ರಹಿಸಿದರು.
ನಿವೃತ್ತ ಜನರಲ್ ಬಾಚಮಂಡ ಕಾರ್ಯಪ್ಪ ಮಾತನಾಡಿ, ಖಾಸಗಿ ಜಾಗದಲ್ಲಿ ಕಾಫಿ ಗಿಡ ಕಿತ್ತು ದಾರಿ ಬೇಕು ಎನ್ನುವದು ಅಧಿಕಾರಿಗಳ ಸರ್ವಾಧಿಕಾರಿ ಧೋರಣೆಯಾಗಿದೆ. ಜೀವಕ್ಕೆ ಹೆದರುವದಿಲ್ಲ. ಎಲ್ಲರೂ ಒಂದಾಗಿ ಬನ್ನಿ, ಜೆಸಿಬಿ ಮುಂದೆ ನಾನೇ ಮಲಗುತ್ತೇನೆ. ನಾವು ಸೈನಿಕರು, ಅಧಿಕಾರಿಗಳು ನಮ್ಮನ್ನು ಕಾಡಿಗೆ ಸೇರಿಸಲು ಹೋರಟಿದ್ದಾರೆಯೋ ಗೊತ್ತಿಲ್ಲ, ನಾವು ಕಾಡು ಸೇರಿದರೆ ನಮ್ಮ ಹೋರಾಟ ಹತ್ತಿಕ್ಕಲು ಸೇನೆ ಬರಬೇಕಾದಿತು ಎಂದು ಎಚ್ಚರಿಸಿದ ಅವರು; ವಲಸಿಗರಿಗೆ ತಿಂಗಳಲ್ಲಿ ಸರÀಕಾರಿ ಜಾಗ ಸಿದ್ಧ. ಆದರೆ ಸೈನಿಕರಿಗೆ ಇಲ್ಲ ಎಂಬ ನೀತಿ ಬಿಡಿ ಎಂದರು. ಸಭೆಯನ್ನುದ್ದೇಶಿಸಿ ಕಾವೇರಿ ಸೇನೆಯ ರವಿ ಚಂಗಪ್ಪ, ಅಮ್ಮತ್ತಿ ರೈತ ಸಂಘದ ಅಧ್ಯಕ್ಷರು ಮತ್ತು ಮಾಜಿ ಯೋಧ ಕಾವಡಿಚಂಡ ಗಣಪತಿ ಮುಂತಾದವರು ಮಾತನಾಡಿದರು.
ಈ ಸಂದರ್ಭ ತಾಲೂಕು ಸಾರ್ವಜನಿಕ ಹಿತಾರಕ್ಷಣಾ ಸಮಿತಿ ಅಧ್ಯಕ್ಷ ಕೇಚಂಡ ಕುಶಾಲಪ್ಪ, ಅಮ್ಮತ್ತಿ ರೈತ ಸಂಘದ ಕಾರ್ಯದರ್ಶಿ ಯು.ಎಸ್.ಜಗತ್, ಕೊಡಗು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚೇಂದ್ರಿಮಾಡ ಗಣೇಶ್ ನಂಜಪ್ಪ ಮುಂತಾದವರು ಉಪಸ್ಥಿತರಿದ್ದರು.