ಸೋಮವಾರಪೇಟೆ, ಆ. 29: ಮಹಿಳೆಯರು ಸರಕಾರದಿಂದ ಬರುವ ಸೌಲಭ್ಯಗಳನ್ನು ಇಲಾಖೆಗಳ ಮೂಲಕ ಪಡೆದುಕೊಂಡು ಸ್ವಾವಲಂಬನೆಯತ್ತ ಮುಂದಡಿಯಿಡಬೇಕೆಂದು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಕರೆ ನೀಡಿದರು. ಇಲ್ಲಿನ ತಾಲೂಕು ಪಂಚಾಯಿತಿ ಕಚೇರಿ ಸಮೀಪ ರೂ. 35.5 ಲಕ್ಷ ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಸೋಮವಾರಪೇಟೆ ತಾಲೂಕು ಸ್ತ್ರೀ ಶಕ್ತಿ ಭವನದ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ಪ್ರಸ್ತುತ ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಹಿಳೆಯರು ಸಮಾಜದಲ್ಲಿ ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಮಹಿಳೆಯರು ಮನೆಯ ನಿರ್ವಹಣೆಯೊಂದಿಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲೂ ಕ್ರಿಯಾತ್ಮಕವಾಗಿ ತೊಡಗಿಸಿ ಕೊಳ್ಳುತ್ತಿರುವುದು ಶ್ಲಾಘನೀಯ. ಸ್ತ್ರೀಶಕ್ತಿ ಮತ್ತು ಸ್ವಸಹಾಯ ಗುಂಪುಗಳ ಮೂಲಕ ಸಾಲಗಳನ್ನು ಪಡೆದುಕೊಂಡವರು ಸಕಾಲದಲ್ಲಿ ಮರುಪಾವತಿ ಮಾಡಿದರೆ ಮಾತ್ರ ಸಂಘಗಳ ಬೆಳವಣಿಗೆ ಸಾಧ್ಯ ಎಂದರು.
ಸ್ತ್ರೀಶಕ್ತಿ ಭವನದ ಉದ್ಘಾಟನೆ ಯಾದರೆ ಸಾಲದು ತಾಲೂಕಿನ ಎಲ್ಲಾ ಭಾಗಗಳಿಂದ ಪ್ರತಿ ಸೋಮವಾರ ದಂದು ಇಲ್ಲಿಗೆ ಭೇಟಿ ನೀಡಿ ಇಲಾಖೆಗಳಿಂದ ದೊರಕುವ ಸೌಲಭ್ಯಗಳ ಕುರಿತು ಮಾಹಿತಿಯನ್ನು ಪಡೆಯುವಂತಾಗಬೇಕೆಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ, ಮಹಿಳೆಯರು ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘಗಳ ಮೂಲಕ ಇಂದು ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳ ಸದಸ್ಯರಾಗಿರುವದು ಹೆಮ್ಮೆಯ ವಿಚಾರ. ಕೆಲವು ಗ್ರಾಮಗಳಲ್ಲಿ ಅವ್ಯಾಹತವಾಗಿ ಮುಂದುವರೆದಿದ್ದ ಅಕ್ರಮ ಮದ್ಯ ತಯಾರಿಕೆ ಮತ್ತು ಮಾರಾಟಗಳನ್ನು ಮಹಿಳೆಯರು ಸಂಘಗಳ ಮೂಲಕವೇ ತಡೆ ಹಿಡಿದಿರುವದರಿಂದ ಇಂದು ಹಲವು ಗ್ರಾಮಗಳು ಮದ್ಯಮುಕ್ತ ಗ್ರಾಮವಾಗಿ ಶಾಂತಿಯನ್ನು ಕಾಪಾಡಿಕೊಂಡು ಬಂದಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಮಾತನಾಡಿ, ಜಿಲ್ಲೆಯ ಮೂರು ತಾಲೂಕುಗಳಲ್ಲಿಯೂ ಸ್ತ್ರೀಶಕ್ತಿ ಭವನ ನಿರ್ಮಾಣವಾಗಬೇಕು. ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳಲ್ಲಿ ಬದ್ಧತೆಯಿದ್ದರೆ ಎಲ್ಲಾ ಕೆಲಸವು ಸುಲಭ ಸಾಧ್ಯವಾಗುತ್ತದೆ. ಸುಶಿಕ್ಷಿತ ಸಮಾಜ ನಿರ್ಮಾಣ ಮಹಿಳೆಯರಿಂದ ಮಾತ್ರ ಸಾಧ್ಯ. ಸ್ತ್ರೀಶಕ್ತಿ ಸಂಘದ ಸದಸ್ಯರುಗಳು ಮತ್ತು ಅಂಗನವಾಡಿ ಕಾರ್ಯಕರ್ತರುಗಳನ್ನು ಕೇವಲ ಸಭೆ ಸಮಾರಂಭಗಳ ಮೆರವಣಿಗೆ ಮತ್ತು ಕಾರ್ಯಕ್ರಮಗಳಿಗೆ ಪ್ರೇಕ್ಷಕರಾಗಿ ಬಳಸಿಕೊಳ್ಳು ವಂತಾಗಬಾರದು ಎಂದರು.
ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ರಾಜೇಶ್, ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಲರಾಮ್, ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ ಅಧ್ಯಕ್ಷೆ ಮೇರಿ ಅಂಬುದಾಸ್, ಕಾರ್ಯದರ್ಶಿ ರೆಹನಾ ಫಿರೋಜ್, ಪ್ರಬಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸರಳಾಮಣಿ, ಬ್ಲಾಕ್ ಸೊಸೈಟಿ ಮಾಜಿ ಅಧ್ಯಕ್ಷೆ ಎನ್.ಕೆ.ಸುಮತಿ ಉಪಸ್ಥಿತರಿದ್ದರು.