ಕುಶಾಲನಗರ, ಡಿ. 10: ಕುಶಾಲನಗರ ವಾಸವಿ ಯುವಜನ ಸಂಘದ ಆಶ್ರಯದಲ್ಲಿ ಸುಬ್ರಹ್ಮಣ್ಯ ಷಷ್ಠಿಯ ಪ್ರಯುಕ್ತ ಸಾರ್ವಜನಿಕ ಮಹಿಳೆಯರಿಗೆ 3ನೇ ವರ್ಷದ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಕುಶಾಲನಗರ ರಥಬೀದಿಯಲ್ಲಿ ಆಯೋಜಿಸಲಾದ ಈ ಸ್ಪರ್ಧೆಗೆ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್. ಸತ್ಯನಾರಾಯಣ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ಎಂ. ಚರಣ್, ಕಿರುತೆರೆ ಧಾರಾವಾಹಿ ನಿರ್ಮಾಪಕ ಉಮಾಶಂಕರ್, ಉದ್ಯಮಿ ಎಸ್.ಕೆ. ಸತೀಶ್ ಉಪಸ್ಥಿತರಿದ್ದರು. ವಾಸವಿ ಯುವಜನ ಸಂಘದ ಅಧ್ಯಕ್ಷ ವಿ.ಆರ್. ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಾಗೋ ಭಾರತ್ ಸಂಚಾಲಕ ಆರ್.ಎನ್. ಯಶಸ್ ವಿಶೇಷ ಭಾಷಣಕಾರರಾಗಿ ಪಾಲ್ಗೊಂಡಿದ್ದರು.
ರಂಗೋಲಿ ಸ್ಪರ್ಧೆಯಲ್ಲಿ 75 ಮಂದಿ ಮಹಿಳೆಯರು ಪಾಲ್ಗೊಂಡಿದ್ದರು. ರಸ್ತೆಯುದ್ದಕ್ಕೂ ಆಕರ್ಷಕ ರಂಗೋಲಿಗಳ ಚಿತ್ತಾರ ಎಲ್ಲರ ಗಮನ ಸೆಳೆಯಿತು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಗಾಯತ್ರಿ ಬಾಬು ಹಾಗೂ ಎರಡನೇ ಬಹುಮಾನವನ್ನು ಛಾಯಾ ಅವರು ಪಡೆದುಕೊಂಡರು. ಪ್ರಥಮ ಬಹುಮಾನವಾಗಿ ರೂ. 2 ಸಾವಿರ ನಗದು, 1 ಗ್ರಾಂ. ಚಿನ್ನದ ನಾಣ್ಯ, ದ್ವಿತೀಯ ಬಹುಮಾನವಾಗಿ ರೂ. 1 ಸಾವಿರ ನಗದು, ಅರ್ಧ ಗ್ರಾಂ. ಚಿನ್ನದ ನಾಣ್ಯ ಮತ್ತು ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆ ನೀಡಲಾಯಿತು. ಅದೃಷ್ಟ ಸ್ಪರ್ಧಿಗೆ 1 ಗ್ರಾಂ. ಬಂಗಾರದ ನಾಣ್ಯ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಆರ್. ರವಿಕುಮಾರ್, ವಾಸವಿ ಯುವತಿಯರ ಸಂಘದ ಅಧ್ಯಕ್ಷೆ ರಶ್ಮಿ ಅಮೃತ್, ಆರ್ಯವೈಶ್ಯ ಮಹಿಳಾ ಮಂಡಳಿಯ ಅಧ್ಯಕ್ಷೆ ಆಶಾ ಅಶೋಕ್, ಕಾರ್ಯಕ್ರಮ ನಿರ್ದೇಶಕರುಗಳಾದ ಕೆ.ಎನ್. ನಾಗಪ್ರವೀಣ್, ವಿ.ಜೆ. ಬಾಲಾಜಿ, ವೈಶಾಖ್, ಪ್ರವೀಣ್ ಮತ್ತಿತರರು ಇದ್ದರು.