ಗೋಣಿಕೊಪ್ಪಲು, ಜ. 26: ಹಾಕಿ ಕೂರ್ಗ್ ಆಶ್ರಯದಲ್ಲಿ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆದ ಪಾಲಂದಿರ ಅಪ್ಪಯ್ಯ ಸ್ಮಾರಕ ಮಹಿಳಾ ಹಾಕಿ ಟೂರ್ನಿಯಲ್ಲಿ ನಾಲ್ನಾಡ್ ಇಲವೆನ್ ಚಾಂಪಿಯನ್, ಅದಿತಿ ಟ್ಯಾಂಜಿರಿನೆಸ್ ರನ್ನರ್ ಅಪ್ ಸ್ಥಾನ ಪಡೆದಿದೆ.ಇಂದು ನಡೆದ ಫೈನಲ್ ಪಂದ್ಯದಲ್ಲಿ ನಾಲ್ನಾಡ್ ಅದಿತಿ ವಿರುದ್ಧ 1-0 ಗೋಲುಗಳ ಜಯ ಸಾಧಿಸಿತು. ನಾಲ್ನಾಡ್ ಪರ 17ನೇ ನಿಮಿಷದಲ್ಲಿ ಹೇಮ ಭಾರಿಸಿದ ಏಕೈಕ ಗೋಲು ಜಯಕ್ಕೆ ಕಾರಣವಾಯಿತು. ಅದಿತಿಗೆ 4 ಪೆನಾಲ್ಟಿ ಕಾರ್ನರ್ ದೊರೆತರೂ ಕೂಡ ಗೋಲು ದಾಖಲಿಸಲಾಗದೆ ಸೋಲನುಭವಿಸಿತು. ವಿಜೇತ ನಾಲ್ನಾಡ್‍ಗೆ 4 ಪೆನಾಲ್ಟಿ ಕಾರ್ನರ್ ದೊರೆಯಿತು. ಯಾವದೂ ಕೂಡ ಗೋಲಾಗಿ ಪರಿವರ್ತಿತವಾಗಲಿಲ್ಲ.

ಭಗವತಿಗೆ 3 ಸ್ಥಾನ: 3ನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಭಗವತಿ ಸ್ಪೋಟ್ರ್ಸ್ ಕ್ಲಬ್ ತಂಡಕ್ಕೆ ಮೂರನೇ ಸ್ಥಾನ, ಕೋರಲ್ ವಾಟರ್ಸ್‍ಗೆ ನಾಲ್ಕನೆ ಸ್ಥಾನ ಲಭಿಸಿತು.

ಭಗವತಿ 1-0 ಗೋಲುಗಳ ಗೆಲುವು ಪಡೆಯಿತು. ಭಗವತಿ ಪರ 48ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್‍ನ್ನು ನಿಶಾ ಗೋಲಾಗಿ ಪರಿವರ್ತಿಸಿದರು. ಭಗವತಿಗೆ 6, ಕೋರಲ್‍ಗೆ 2 ಪೆನಾಲ್ಟಿ ಕಾರ್ನರ್ ದೊರೆಯಿತು.

ಟೂರ್ನಿಯಲ್ಲಿ ಉತ್ತಮ ಆಟ ಪ್ರದರ್ಶಿಸಿದ ಅದಿತಿ ತಂಡದ ಅಳಮೇಂಗಡ ಕಾವೇರಮ್ಮ ಟೂರ್ನಿಯ ಉತ್ತಮ ಆಟಗಾರ್ತಿ ಪ್ರಶಸ್ತಿ ಪಡೆದರು. ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿಯನ್ನು ನಾಲ್ನಾಡ್ ತಂಡದ ಚಿತ್ರಶ್ರೀ, ಬೆಸ್ಟ್ ಫಾರ್ವರ್ಡ್ - ಭಗವತಿ ತಂಡದ ನಿಶಾ, ಬೆಸ್ಟ್ ಹಾಲ್ಫ್ - ಕೋರಲ್ ವಾಟರ್ಸ್ ತಂಡದ ಪೂಜಿತಾ, ಬೆಸ್ಟ್ ಬ್ಯಾಕ್ ಆಗಿ ಅದಿತಿ ಟ್ಯಾಂಜರಿನೆಸ್‍ನ ಲಿಕಿತಾ, ಭವಿಷ್ಯದ ಆಟಗಾರ್ತಿಯಾಗಿ ನಾಲ್ನಾಡ್‍ನ ನೇಹಾ, ಬೆಸ್ಟ್ ಆಲ್‍ರೌಂಡರ್ ಪ್ರಶಸ್ತಿಯನ್ನು ಟೀಮ್ ಬುಟ್ಟಿಯಂಡ ತಂಡದ ವಿಷ್ಮಾ ಪಡೆದುಕೊಂಡರು.

ಪಂದ್ಯಾವಳಿ ನಿರ್ದೇಶಕರಾಗಿ ನೆಲ್ಲಮ್ಕಕಡ ಪವನ್, ತೀರ್ಪುಗಾರರಾಗಿ ಮೂಕಚಂಡ ನಾಚಪ್ಪ, ಮತ್ರಂಡ ಬೋಪಣ್ಣ, ವಿನೋದ್, ದರ್ಶನ್ ದೇವಯ್ಯ, ಹೆಚ್ ಎನ್ ಅರುಣ್, ವಾಟೇರೀರ ಮೊಣ್ಣಪ್ಪ, ಬೊಳ್ಳಚಂಡ ನಾಣಯ್ಯ, ವೀಕ್ಷಕ ವಿವರಣೆಯನ್ನು ಸುಳ್ಳಿಮಾಡ ಸುಬ್ಬಯ್ಯ, ಅಜ್ಜಮಾಡ ಪೊನ್ನಪ್ಪ ನೀಡಿದರು.

ಸನ್ಮಾನ: ಅಂಪೈಯರ್ ಪುಳ್ಳಂಗಡ ರೋಹಿಣಿ, ಭಾರತ ಸಬ್ ಜೂನಿಯರ್ ತರಬೇತಿ ಕೇಂದ್ರಕ್ಕೆ ಆಯ್ಕೆಯಾದ ಆಟಗಾರರುಗಳಾದ ಕೇಚೇಟೀರ ಪಾರ್ವತಿ, ಬಾಳೆಯಡ ರಿಶೀಕಾ ತಿಮ್ಮಯ್ಯ, ಕರೋಟೀರ ದೀಪ್ತಿ, ಕೆ.ಆರ್ ಭೂಮಿಕ ಹಾಗೂ ಗಾಹ್ನವಿ ಇವರುಗಳನ್ನು ಸನ್ಮಾನಿಸಲಾಯಿತು.

ತಮಿಳುನಾಡುವಿನ ರಾಮನಾಥಪುರದಲ್ಲಿ ನಡೆದ 7ನೇ ಹಾಕಿ ಇಂಡಿಯಾ ಸಬ್ ಜೂನಿಯರ್ ಬಾಲಕಿಯರ ರಾಷ್ಟ್ರೀಯ ಕ್ರೀಡಾಕೂಟವನ್ನು ಪ್ರತಿನಿಧಿಸಿ ಕಂಚಿನ ಪದಕ ಪಡೆದ ಆಟಗಾರರನ್ನು ಸನ್ಮಾನಿಸಲಾಯಿತು.

ಸಮಾರೋಪ: ಸಮಾರೋಪದಲ್ಲಿ ಅಪ್ಪಚ್ಚಕವಿ ವಿದ್ಯಾಲಯ ಮಕ್ಕಳಿಂದ ಪರೆಯಕಳಿ ಪ್ರದರ್ಶನವಾಯಿತು. ಈ ಸಂದರ್ಭ ಹಾಕಿ ಕೂರ್ಗ್ ಅಧ್ಯಕ್ಷ ಪೈಕೇರ ಕಾಳಯ್ಯ, ಪಂದ್ಯಾವಳಿ ಸಮಿತಿ ನಿರ್ದೇಶಕ ಬುಟ್ಟಿಯಂಡ ಚೆಂಗಪ್ಪ, ಜಂಟಿ ಕಾರ್ಯದರ್ಶಿ, ದಾನಿ ಪಾಲಂದಿರ ಪಾರ್ವತಿ ಅಪ್ಪಯ್ಯ, ಹಾಕಿ ಕೂರ್ಗ್ ಉಪಾಧ್ಯಕ್ಷ ಮೊಳ್ಳೇರ ಸುಬ್ಬಯ್ಯ, ತರಬೇತುದಾರ ಡಾ. ದೇಚಮ್ಮ, ಅಂತರರಾಷ್ಟ್ರೀಯ ಅಂಪೈಯರ್ ಪುಳ್ಳಂಗಡ ರೋಹಿಣಿ ಉಪಸ್ಥಿತರಿದ್ದರು. ಉಳುವಂಗಡ ಲೋಹಿತ್ ಭೀಮಯ್ಯ ಪ್ರಾರ್ಥಿಸಿದರು.