ಆಲೂರು-ಸಿದ್ದಾಪುರ, ಅ. 1: ಮಹಿಳೆಯರ ಸಬಲೀಕರಣದಲ್ಲಿ ಕಾನೂನು ಮತ್ತು ಮಹಿಳಾ ದೌರ್ಜನ್ಯ ತಡೆ ಕಾಯಿದೆಯ ಪಾತ್ರ ಮಹತ್ವ ದಾಗಿರುತ್ತದೆ ಎಂದು ಸೋಮವಾರಪೇಟೆ ಸಿವಿಲ್ ನ್ಯಾಯಾಲಯದ ನ್ಯಾಯವಾದಿ ಯತೀಶ್ ಅಭಿಪ್ರಾಯಪಟ್ಟರು.
ಕೊಡ್ಲಿಪೇಟೆ ಹಲಸಿನಮರ ಗೌರಮ್ಮ ಶಾಂತಮಲ್ಲಪ್ಪ ಪ್ರ.ದ. ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾಲೇಜಿನ ಮಹಿಳಾ ದೌರ್ಜನ್ಯ ತಡೆ ಘಟಕದ ಉದ್ಘಾಟನೆ ಹಾಗೂ ಮಹಿಳಾ ಸಬಲೀಕರಣದ ಕುರಿತು ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಮಹಿಳಾ ದೌರ್ಜನ್ಯ ತಡೆ ಕಾಯಿದೆಯಿಂದ ಮಹಿಳೆಯರು ಹಲವಾರು ಹಕ್ಕುಗಳನ್ನು ಪಡೆಯುತ್ತಿದ್ದಾರೆ, ಆದರೂ ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಭ್ರೂಣ ಹತ್ಯೆ, ವರದಕ್ಷಿಣೆ ಕಿರುಕುಳ ಮುಂತಾದ ಶೋಷಣೆಗಳು ನಡೆಯುತ್ತಿರುವದು ಕಳವಳಕಾರಿಯಾಗಿದೆ ಎಂದರು.
ಕೊಡ್ಲಿಪೇಟೆ ಗಂಗಾ ವೀರಶೈವ ಸಮಾಜದ ಅಧ್ಯಕ್ಷೆ ಮಂಜುಳ ಸುರೇಶ್ ಮಾತನಾಡಿ, ಹೆಣ್ಣು ಮಕ್ಕಳು ವಿದ್ಯಾವಂತರಾದರೆ ಹೆಣ್ಣು ಮಕ್ಕಳಲ್ಲಿ ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ. ಇದರಿಂದ ಸಮಾಜದಲ್ಲಿ ಮಹಿಳೆಯರ ಮೇಲಾಗುತ್ತಿರುವ ಅತ್ಯಾಚಾರ, ಲೈಂಗಿಕ ಕಿರುಕುಳ, ವರದಕ್ಷಿಣೆ ಕಿರುಕುಳ ಮುಂತಾದ ಸಾಮಾಜಿಕ ಪಿಡುಗುಗಳ ಬಗ್ಗೆ ಜಾಗೃತರಾಗಲು ಸಾಧ್ಯವಾಗುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಎಂ.ಆರ್. ನಿರಂಜನ್ ಮಾತನಾಡಿ, ಕಾಲೇಜಿನಲ್ಲಿ ಸ್ಥಾಪಿತವಾಗಿರುವ ಮಹಿಳಾ ದೌರ್ಜನ್ಯ ತಡೆ ಘಟಕದ ಉಪಯೋಗವನ್ನು ವಿದ್ಯಾರ್ಥಿನಿ ಯರು ಪಡೆದುಕೊಳ್ಳಬೇಕು. ಘಟಕದ ಉದ್ದೇಶವನ್ನು ಸಹ ವಿದ್ಯಾರ್ಥಿನಿ ಯರು ಅರಿತುಕೊಂಡು ಶೋಷಿತ ಮಹಿಳೆಯರ ರಕ್ಷಣೆಗೆ ನಿಲ್ಲಬೇಕು, ಈ ನಿಟ್ಟಿನಲ್ಲಿ ವಿದ್ಯಾರ್ಥಿನಿಯರು ಯಾವದೇ ಅಂಜಿಕೆ, ಅಳುಕು ಇಲ್ಲದೆ ಘಟಕದಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳಬೇಕೆಂದರು. ಕಾರ್ಯಕ್ರಮದಲ್ಲಿ ಮಹಿಳಾ ಉಪನ್ಯಾಸಕರು, ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
- ದಿನೇಶ್ ಮಾಲಂಬಿ