ಚೆಟ್ಟಳ್ಳಿ, ಡಿ. 19: ವರ್ಧಾ ಚಂಡಮಾರುತದ ಪ್ರಭಾವದಿಂದ ಚೆಟ್ಟಳ್ಳಿಯಲ್ಲಿ ಕಳೆದೆರಡು ದಿನಗಳಿಂದ ಮೋಡ ಕಟ್ಟಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಭತ್ತದ ಗದ್ದೆಗಳಲ್ಲಿ ನೀರು ನಿಂತು ಗದ್ದೆಗಳಲ್ಲೆಲ್ಲ ಕೊಯ್ದಿಟ್ಟ ಭತ್ತದ ಪೈರುಗಳು ಸಂಪೂರ್ಣ ಜಲಾವೃತಗೊಂಡು ಬೆಳೆಗಾರನಿಗೆ ತೀವ್ರ ನಷ್ಟ ಸಂಭವಿಸಿದೆ.
ಚೆಟ್ಟಳ್ಳಿಯ ಶ್ರೀಮಂಗಲ ಗ್ರಾಮದ ಅಯ್ಯಂಡ್ರ ಎಸ್.ನಾಣಯ್ಯ (ಮಿಟ್ಟು) ಅವರ ಭತ್ತದ ಗದ್ದೆಯಲ್ಲಿ ಮಳೆಯಿಂದಾಗಿ ನೀರು ತುಂಬಿ ತೀವ್ರ ನಷ್ಟ ಸಂಭವಿಸಿದೆ. ನಾಣಯ್ಯ ಅವರ ಕುಟುಂಬದವರೆ ಖದ್ದಾಗಿ ಉತ್ತು, ಬಿತ್ತು, ನೆಟ್ಟು ಕಟಾವಿಗೆ ಬಂದ ಭತ್ತದ ಬೆಳೆಯನ್ನು ಕಳೆದ ನಾಲ್ಕೈದು ದಿನಗಳ ಹಿಂದೆ ಕುಯಿಲು ಮಾಡ ಲಾಗಿತ್ತು. ವರ್ಧ ಚಂಡಮಾರುತದ ಪ್ರಭಾವದಿಂದ ಗದ್ದೆಯಲೆಲ್ಲ ನೀರುತುಂಬಿ, ಪೈರುಗಳೆಲ್ಲಾ ಜಲಾವೃತವಾಗಿದೆ. ಭತ್ತದ ತೆನೆಯೆಲ್ಲ ನೀರಿಂದ ತೊಯಿದು ಹೋಗಿದೆ.
ರೈತನಿಗೆ ಭತ್ತದ ಬೆಳೆ ಒಂದೆಡೆ ನಷ್ಟವಾದರೆ ಮತ್ತೊಂದೆಡೆ ದನಕರುಗಳಿಗೆ ಮೇವಿಲ್ಲದ ಪರಿಸ್ಥಿತಿಯೊದಗಿದೆ. ಹಲವು ಕಾರಣಗಳಿಂದ ಭತ್ತ ಬೆಳೆಯುವಲ್ಲಿ ನಷ್ಟ ಸಂಭವಿಸುವದರಿಂದ ಗದ್ದೆಯನ್ನು ಹಾಗೇ ಬಿಟ್ಟರೆ, ಹತ್ತಿರದ ಚೇರಳ ಗ್ರಾಮದಲ್ಲಿ ರೈತರು ಬೆಳೆದ ಗದ್ದೆಯನ್ನು ಕಾಡಾನೆಗಳ ನಿರಂತರ ಧಾಳಿಯಿಂದ ಸಂಪೂರ್ಣ ನೆಲಸಮಗೊಂಡು ಹುತ್ತರಿ ಹಬ್ಬದಲ್ಲಿ ಕದಿರು ತೆಗೆಯಲು (ಹೊಸ ಅಕ್ಕಿ ತರಲು) ಬೆಳೆಯಿಲ್ಲದ ಪರಿಸ್ಥಿತಿ ಯಾಗಿತ್ತೆಂದು ಇಲ್ಲಿನ ರೈತರು ಅಳಲನ್ನು ತೋಡಿಕೊಂಡಿದ್ದಾರೆ. ಬೆಳೆ ನಷ್ಟದಲ್ಲಿ ರುವ ರೈತರ ಸಂಕಷ್ಟಕ್ಕೆ ಸರಕಾರವು ಮುಂದಾಗ ಬೇಕೆಂದು ಆಗ್ರಹಿಸಿದ್ದಾರೆ.
-ಕರುಣ್ ಕಾಳಯ್ಯ