*ಗೋಣಿಕೊಪ್ಪಲು, ಅ. 27: ಮಳೆ ನಿಂತರೆ ಸಾಕಪ್ಪ ಎಂದು ಹಾರೈಸುತ್ತಿದ್ದ ಕೊಡಗಿನಲ್ಲಿ ಈ ಬಾರಿ ಮಳೆ ಬಂದರೆ ಸಾಕಪ್ಪ ಎಂದು ಹಂಬಲಿಸುವ ಸ್ಥಿತಿ ಉದ್ಭವಿಸಿದೆ. ಬೇಸಿಗೆಯಂತೆ ಬಿಸಿಲ ತಾಪ ಹೆಚ್ಚಿದೆ. ಬೆಳಗಿನ ವೇಳೆ ಮಂಜು ಮುಸುಕಿ ಚಳಿ ಶುರುವಾಗಿದೆ. ನದಿ ತೊರೆಗಳು ಒಣಗಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ.ತಿತಿಮತಿ ಭಾಗದ ಜನತೆ ಸಮೀಪದ ಮಾವಕಲ್ ಬೆಟ್ಟದ ದೇವತೆಗೆ ಮಳೆ ಬರಿಸುವಂತೆ ಮೊರೆ ಇಟ್ಟಿದ್ದಾರೆ. ತಿತಿಮತಿಯ ಕಾಫಿ ಬೆಳೆಗಾರ ಚೆಪ್ಪುಡೀರ ಕಾರ್ಯಪ್ಪ ಅವರ ನೇತೃತ್ವದಲ್ಲಿ ಬುಧವಾರ ಬೆಟ್ಟ ಏರಿದ ತಿತಿಮತಿ, ನೊಕ್ಯ, ಭದ್ರಗೋಳ, ಮಜ್ಜಿಗೆಹಳ್ಳ, ಹೆಬ್ಬಾಲೆ ಪಟ್ಟಣದ ಜನತೆ ದೇವರಿಗೆ ಪೂಜೆ ಸಲ್ಲಿಸಿ ಮಳೆ ಕರುಣಿಸುವಂತೆ ಬೇಡಿಕೊಂಡರು.
ತಿತಿಮತಿ ಭಾಗಕ್ಕೆ ವಾಡಿಕೆಯಂತೆ ಪ್ರತಿವರ್ಷ 50ರಿಂದ 60 ಇಂಚು ಮಳೆ ಬೀಳುತ್ತದೆ. ಆದರೆ ಈ ಬಾರಿ ಕೇವಲ 24 ಇಂಚು ಮಳೆಯಾಗಿದೆ. ಇನ್ನೂ ಬೇಸಿಗೆ ಕಾಲ ನಾಲಕ್ಕೈದು ತಿಂಗಳಿದ್ದು ಈಗಲೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವಾಗ ಮುಂದಿನ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಾಗದಾಗಿದೆ ಎಂದು ಕಾರ್ಯಪ್ಪ ಹೇಳಿದರು.
ಮಳೆ ಕಡಿಮೆಯಾದ ವರ್ಷ ಮಾವಕಲ್ಲು ಬೆಟ್ಟದ ದೇವರಿಗೆ ಪೂಜೆ ಸಲ್ಲಿಸುವದು ವಾಡಿಕೆ. ಅದರಂತೆ ಈ ಬಾರಿಯೂ ಕೂಡ ಪೂಜೆ ಸಲ್ಲಿಸಲಾಗಿದೆ ಎಂದು ಹೇಳಿದರು.