ಕುಶಾಲನಗರ, ಜ. 9: ರಾಜ್ಯದ ಖಾಸಗಿ ಜಾಗದಲ್ಲಿರುವ ನಿಗದಿತ 42 ಜಾತಿಯ ಮರಗಳನ್ನು ಕಡಿಯಲು ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ಕೊಡಗಿನ ಪರಿಸರ ಮತ್ತೆ ಬರಡಾಗಲು ಅಖಾಡ ಸಿದ್ಧಗೊಳ್ಳುತ್ತಿದೆ. ಖಾಸಗಿ ಜಾಗದಲ್ಲಿರುವ ಮರಗಳನ್ನು ಕಡಿಯಲು ಅರಣ್ಯ ಇಲಾಖೆಯ ಪರವಾನಗಿ ಅಗತ್ಯವಿಲ್ಲ ಎಂಬ ಸುತ್ತೋಲೆ ಅರಣ್ಯ ಕಚೇರಿಗಳಿಗೆ ರವಾನೆಯಾಗಿದ್ದು, ಜಿಲ್ಲೆಯಲ್ಲಿ ಟಿಂಬರ್ ಮಾಫಿಯಾ ಮತ್ತೆ ತನ್ನ ಚಟುವಟಿಕೆ ಬಿರುಸುಗೊಳಿಸಿದೆ.ಈ ಹಿಂದೆ ರಾಜ್ಯ ಸರಕಾರ 26 ಜಾತಿಯ ಮರಗಳನ್ನು ಮಾತ್ರ ಕಡಿಯಲು ಅವಕಾಶ ನೀಡಿ ನಂತರ ಪರಿಸರವಾದಿಗಳ ವಿರೋಧದ ನಡುವೆ ಮಾವಿನ ಮರ ಹಾಗೂ ಬಳಂಜಿ ಕಡಿಯಲು ನಿರ್ಬಂಧ ಹೇರಿತ್ತು. ಇದೀಗ ಈ 26 ಜಾತಿ ಸೇರಿದಂತೆ ಇದರ ಮಿತಿಯನ್ನು 42 ಕ್ಕೆ ಏರಿಸಲಾಗಿದ್ದು, ಸರಕಾರದ ಈ ನಿರ್ಧಾರಕ್ಕೆ ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಅಕೇಶಿಯ, ಹೈಬ್ರೀಡ್ ಅಕೇಶಿಯ, ದೊಡ್ಡಬೇವು, ರೈನ್ಟ್ರೀ, ದೊಡ್ಡ ಬಿದಿರು, ಕಿರು ಬಿದಿರು ಹೊರತುಪಡಿಸಿ ಉಳಿದ ಎಲ್ಲಾ ಬಿದಿರುಗಳು ಗೋಡಂಬಿ, ಅಡಿಕೆ, ಗಾಳಿ ಮರ, ನಿಂಬೆ, ಕಿತ್ತಳೆ, ಕಾಫಿ, ಗುಲ್ಮೊಹರ್, ನೀಲಗಿರಿ, ಗೊಬ್ಬರದ ಗಿಡ, ಸಿಲ್ವರ್, ರಬ್ಬರ್, ಛತ್ರಿ ಮರಗಳನ್ನು ಅನುಮತಿ ಇಲ್ಲದೆ ಕಡಿಯಬಹುದೆಂದು ಈ ಹಿಂದೆಯೇ ಆದೇಶ ಹೊರಡಿಸಿತ್ತು. ಇದೀಗ ಹೊಸತಾಗಿ ಸಪೋಟ, ಹೆಬ್ಬೇವು, ಆಕಾಶ ಮಲ್ಲಿಗೆ, ನುಗ್ಗೆ, ಹಿಪ್ಪುನೇರಳೆ, ಕರಿಬೇವು, ಬಸವನಪಾದ, ದೇವರಕಣಗಿಲೆ, ಸೀಬೆ ಮತ್ತಿತರ ಮರಗಳನ್ನು ಈ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ.
ಜನರು ತಮ್ಮ ಜಾಗದಲ್ಲಿರುವ ಮರಗಳನ್ನು ಕಡಿಯಲು ಪರವಾನಗಿಗಾಗಿ ಈ ಹಿಂದೆ ಅರಣ್ಯ ಕಚೇರಿಗೆ ಅಲೆಯುವಂತಹ ಸ್ಥಿತಿ ಉಂಟಾಗಿತ್ತು. ಜಾಗದ ಹಕ್ಕುಪತ್ರ, ಅವಿಭಜಿತ ಕುಟುಂಬವಾಗಿದ್ದರೆ ಒಪ್ಪಿಗೆ ಪತ್ರ ಸೇರಿದಂತೆ ಹಲವು ದಾಖಲೆಗಳನ್ನು ಕೂಡ ನೀಡಬೇಕಾಗಿತ್ತು. ಅಲ್ಲದೆ ಒಬ್ಬ ವ್ಯಕ್ತಿಗೆ 100 ಸಿಎಫ್ಟಿವರೆಗೆ ಮಾತ್ರ ಮರ ಕಡಿಯುವ ಅವಕಾಶ ಇತ್ತು. ಹೆಚ್ಚಿನ ಮಿತಿಯಲ್ಲಿ ಕಡಿಯಬೇಕಾಗಿದ್ದರೆ ಮರದ ಮೌಲ್ಯಕ್ಕೆ ಅನುಗುಣವಾಗಿ ಸಂಬಂಧಿಸಿದ ಅಧಿಕಾರಿಗಳಿಂದ ಒಪ್ಪಿಗೆ ಪಡೆಯಬೇಕಿತ್ತು. ಇದರಿಂದ ಹಲವು ತೊಂದರೆಗಳನ್ನು ಎದುರಿಸುವ ಹಿನ್ನೆಲೆ ಸರಕಾರ ಇದೀಗ ಈ ವಿನಾಯಿತಿ ನೀಡಿದೆ. ಈ ವಿನಾಯಿತಿ ಕೇವಲ ಖಾಸಗಿ ಜಾಗಕ್ಕಷ್ಟೆ ಅನ್ವಯವಾಗಿದೆ.
ಜನರ ದಿನನಿತ್ಯದ ಉಪಯೋಗ ಕ್ಕಾಗಿ ಈ ನಿಯಮ ಮಾಡಲಾಗಿದೆ. ಕೇರಳ, ತಮಿಳುನಾಡಿನಲ್ಲಿಯೂ ಇದೇ ನಿಯಮವಿದ್ದು, ಕೇಂದ್ರ ಪರಿಸರ ಇಲಾಖೆ ಕೂಡ ನಿಯಮ ವನ್ನು ಸರಳೀಕರಣ ಮಾಡಬೇಕು ಎನ್ನುವ ಸೂಚನೆ ನೀಡಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅರಣ್ಯ ಸಚಿವಾಲಯ ತಿಳಿಸಿದೆ. ಆದೇಶದ ಅನ್ವಯ ತಕರಾರು ಬಂದಲ್ಲಿ ಅರಣ್ಯ ಇಲಾಖೆ ಮಧ್ಯ ಪ್ರವೇಶಿಸುತ್ತದೆ ಎಂದು ಅರಣ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ.
ರಾಜ್ಯ ಸರಕಾರದ ಈ ನಿಯಮಕ್ಕೆ ಪರ-ವಿರೋಧ ವ್ಯಕ್ತಗೊಳ್ಳುತ್ತಿದ್ದು, ಕಾನೂನು-ಕಟ್ಟಲೆಗಳಿದ್ದಲ್ಲಿ ಮಾತ್ರ ಜನ ಮರ ಕಡಿಯಲು ಹಿಂದೇಟು ಹಾಕಲು ಸಾಧ್ಯ ಎನ್ನುವದು ಪರಿಸರವಾದಿಗಳ ನಿಲುವು. ಇದೀಗ ಬೇಕಾಬಿಟ್ಟಿಯಾಗಿ ಮರಗಳ ಹನನವಾಗುವದರೊಂದಿಗೆ ಪರಿಸರಕ್ಕೆ ಹಾನಿಯಾಗುವ ಸಾಧ್ಯತೆ ಅಧಿಕವಾಗಿದೆ.
ಆದರೆ ಬೆಲೆಬಾಳುವ ಮರಗಳನ್ನು ಮಾತ್ರ ಕಡಿಯಲು ಸರಕಾರ ಅನುಮತಿ ನೀಡಿಲ್ಲ ಎನ್ನುವದೇ ಇಲ್ಲಿ ಸಂತಸ ಪಡುವ ವಿಚಾರವಾಗಿದೆ. ಇದು ಟಿಂಬರ್ ಮಾಫಿಯಾಕ್ಕೆ ಅನುಕೂಲವಾಗುವದ ರೊಂದಿಗೆ ಈ ಮರಗಳೊಂದಿಗೆ ಬೆಲೆ ಬಾಳುವ ಮರಗಳನ್ನು ಕಡಿದು ಸಾಗಿಸುವ ಅಪಾಯವಿದೆ ಎನ್ನುವದು ಪರಿಸರವಾದಿಗಳ ಆತಂಕವಾಗಿದೆ. ಮರ ಕಡಿಯುವ ಸಂದರ್ಭ ಮರಗಳನ್ನು ಬೆಳೆಸುವ ಪ್ರಕ್ರಿಯೆ ಬಗ್ಗೆಯೂ ಸರಕಾರ ಕಠಿಣ ನಿಯಮ ರೂಪಿಸಿದರೆ ಒಳಿತು ಎನ್ನುವದು ಪರಿಸರವಾದಿಗಳ ವಾದವಾಗಿದೆ.
ದಿಢೀರ್ ವರ್ಗಾವಣೆ: ಕೊಡಗು ಜಿಲ್ಲೆಯ ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಏಡುಕೊಂಡಲು ಅವರನ್ನು ಮಡಿಕೇರಿ ವಿಭಾಗದಿಂದ ದಿಢೀರನೆ ವರ್ಗಾವಣೆಗೊಳಿಸ ಲಾಗಿದೆ. ಅವರ ಸ್ಥಾನಕ್ಕೆ ವೀರಾಜಪೇಟೆ ಯಲ್ಲಿ ಡಿಎಫ್ಓ ಆಗಿ ಸೇವೆ ಸಲ್ಲಿಸುತ್ತಿದ್ದ ಸೂರ್ಯ ಸೇನ ಅವರನ್ನು ನೇಮಿಸಲಾಗಿದೆ. ಏಡುಕೊಂಡಲು ಅವರನ್ನು ಧಾರವಾಡ ಜಿಲ್ಲೆಗೆ ವರ್ಗಾಯಿಸಿ ಸರಕಾರ ಆದೇಶ ಹೊರಡಿಸಿದೆ.
ಜಿಲ್ಲೆಯಲ್ಲಿ ಕಳೆದ 2 ವರ್ಷಗಳಿಂದ ಪ್ರಾಮಾಣಿಕ ಮತ್ತು ದಿಟ್ಟ ನಿಲುವುಗಳೊಂದಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಈ ಅಧಿಕಾರಿಯ ದಿಢೀರ್ ವರ್ಗಾವಣೆ ಹಿಂದೆ ಕೇರಳದ ಟಿಂಬರ್ ಮಾಫಿಯಾ ಸೇರಿದಂತೆ ಇಲಾಖೆಯ ಉನ್ನತ ಮಟ್ಟದ ಕಾಣದ ಕೈಗಳ ಒತ್ತಡ ಇರುವ ಬಗ್ಗೆ ಎಲ್ಲೆಡೆ ಗುಸುಗುಸು ಮಾತುಗಳು ಕೇಳಿಬರತೊಡಗಿವೆ.
- ಚಂದ್ರಮೋಹನ್