ಮಡಿಕೇರಿ, ಸೆ. 17: ಸರಕಾರ ಜನಪರವಾದ ಮರಳು ನೀತಿಯನ್ನು ಜಾರಿಗೆ ತರುವ ಮೂಲಕ ಪಂಚಾಯ್ತಿ ಮಟ್ಟದಲ್ಲಿ ಮರಳು ವಿತರಣೆಗೆ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುವದಾಗಿ ಕೊಡಗು ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘ ಎಚ್ಚರಿಕೆ ನೀಡಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಕಾರ್ಯದರ್ಶಿ ಎ.ಸಿ. ಸಾಬು, ಸರಕಾರ ಮರಳು ನೀತಿಯನ್ನು ಸಮರ್ಪಕವಾಗಿ ಜಾರಿಗೆ ತಾರದೆ ಇರುವದರಿಂದ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಇದರಿಂದ ಜಿಲ್ಲೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಆರೋಪಿಸಿ ದರು. ಮರಳಿನ ಬೆಲೆ ದುಬಾರಿಯಾಗಿ ರುವದರಿಂದ ಜನ ಸಾಮಾನ್ಯರು ಮರಳನ್ನು ಖರೀದಿಸ ಲಾಗದೆ ಕಟ್ಟಡ ಕಾಮಗಾರಿಗಳಿಗೆ ಹಿನ್ನಡೆಯಾಗಿದೆ. ಮುಂದಿನ ಒಂದು ತಿಂಗಳ ಒಳಗಾಗಿ ಕೊಡಗು ಜಿಲ್ಲೆಯಲ್ಲಿ ಜನಪರವಾದ ಮರಳು ನೀತಿಯನ್ನು ಅನುಷ್ಠಾನ ಗೊಳಿಸದಿದ್ದಲ್ಲಿ ಕಟ್ಟಡ ಕಾರ್ಮಿಕರು, ಲಾರಿ ಚಾಲಕರು ಹಾಗೂ ಮಾಲೀಕರು ಸೇರಿದಂತೆ ಕಾರ್ಮಿಕ ಸಂಘಟನೆಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುವದಾಗಿ ಎಚ್ಚರಿಕೆ ನೀಡಿದರು.
ಮರಳಿನ ಸಮಸ್ಯೆ ಪರಿಹರಿಸಲು ಸರಕಾರ ಕೆಲವು ತೀರ್ಮಾನಗಳನ್ನು ಕೈಗೊಂಡಿದ್ದರೂ, ಅಧಿಕಾರಿಗಳು ಅದನ್ನು ಪಾಲಿಸುತ್ತಿಲ್ಲ. ಬದಲಾಗಿ ಮರಳಿನ ಕೃತಕ ಅಭಾವ ಸೃಷ್ಟಿಸಿ ಲಂಚಕೋರ ಅಧಿಕಾರಿಗಳು ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಪರಿಸ್ಥಿತಿಯ ದುರ್ಲಾಭ ಪಡೆದು ಕೆಲವು ಪ್ರಭಾವಶಾಲಿಗಳು ದೊಡ್ಡ ಪ್ರಮಾಣದಲ್ಲಿ ಮರಳು ಸಂಗ್ರಹಿಸಿಟ್ಟುಕೊಂಡು ದುಬಾರಿ ಬೆಲೆಗೆ ಮಾರಾಟ ಮಾಡಿ ಅಪಾರ ಹಣ ಗಳಿಸುತ್ತಿದ್ದಾರೆ ಎಂದು ಸಾಬು ಆರೋಪಿಸಿದರು.
ಮುಖ್ಯಮಂತ್ರಿಗಳಾದಿಯಾಗಿ ಸಚಿವರುಗಳು, ಅಧಿಕಾರಿಗಳು ಮರಳು ನೀತಿ ಬಗ್ಗೆ ಭರವಸೆಗಳನ್ನು ಕೊಡುತ್ತಿ ದ್ದಾರೆ. ಆದರೆ ಲೋಕೋಪಯೋಗಿ ಇಲಾಖೆಯ ಯಾರ್ಡ್ಗಳಲ್ಲಿ ಮರಳು ಸಿಗುತ್ತಿಲ್ಲ. ದುಬಾರಿ ಬೆಲೆ ನೀಡಿದರೆ ಮಾತ್ರ ಬೇಕಾದಷ್ಟು ಮರಳು ಸಿಗುತ್ತಿದ್ದು, ಅದನ್ನು ಸಾಗಿಸುವ ಸಂದರ್ಭ ಪ್ರತಿ ಪೊಲೀಸ್ ಠಾಣೆಗಳಿಗೂ ಇಂತಿಷ್ಟು ಎಂಬಂತೆ ಹಣ ನೀಡಬೇಕಾದ ಪರಿಸ್ಥಿತಿ ಇದೆ. ಈ ಎಲ್ಲಾ ಸಮಸ್ಯೆಗಳಿಗೆ ಅಧಿಕಾರಿಗಳು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಪ್ರಮುಖ ಕಾರಣರಾಗಿದ್ದಾರೆ ಎಂದು ಸಾಬು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಸಾಲಿ ಪೌಲೋಸ್, ಕಾರ್ಯದರ್ಶಿ ಎ.ಸಿ.ಸಾಬು, ಖಜಾಂಚಿ ಹಮೀದ್, ಜಂಟಿ ಕಾರ್ಯದರ್ಶಿ ಗಳಾದ ಕೆ.ಕೆ.ಹರಿದಾಸ್ ಹಾಗೂ ಕೆ.ಎಸ್. ರತೀಶ್ ಉಪಸ್ಥಿತರಿದ್ದರು.