ಮಡಿಕೇರಿ, ಸೆ. 8: ಮರಗಳ ನಾಶದಿಂದ ಕೊಡಗು ಸೇರಿದಂತೆ ಅತಿ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಮಳೆಯ ಕೊರತೆ ಉಂಟಾಗಿ ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಎದುರಾಗಿದೆ ಎಂದು ಅಭಿಪ್ರಾಯಪಟ್ಟಿರುವ ಕಾವೇರಿ ಸೇನೆ ಮರಗಳ ಹನನ ತಡೆಯದಿದ್ದಲ್ಲಿ ಮುಂದೆ ಎದುರಾಗುವ ಪ್ರಾಕೃತಿಕ ವಿಕೋಪಗಳಿಗೆ ಅಧಿಕಾರಿಗಳೇ ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾವೇರಿ ಸೇನೆ ಸಂಚಾಲಕ ರವಿ ಚಂಗಪ್ಪ ದಾಖಲೆಯ ಪ್ರಮಾಣದಷ್ಟು ಮಳೆಯಾಗುತ್ತಿದ್ದ ಕೊಡಗಿನ ಅನೇಕ ಪ್ರದೇಶಗಳಲ್ಲಿ 50 ರಿಂದ ನೂರು ಇಂಚಿನಷ್ಟು ಮಳೆಯ ಕೊರತೆ ಎದುರಾಗಿದ್ದು, ಇದಕ್ಕೆ ಇತ್ತೀಚೆಗೆ ಜಿಲ್ಲೆಯಲ್ಲಾದ ಲಕ್ಷಾಂತರ ಮರಗಳ ನಾಶವೆಂದು ಆರೋಪಿಸಿದರು. ರಾಜ್ಯದ ಜಲಾಶಯಗಳಲ್ಲಿ ನೀರಿನ ಕೊರತೆ ಎದುರಾಗಿದ್ದು, ಕಾವೇರಿ ವಿವಾದದಿಂದ ಹೋರಾಟಗಳು ನಡೆಯುತ್ತಿವೆ. ಪ್ರತಿಭಟನೆಗಳಿಂದ ಸಾರ್ವಜನಿಕ ಆಸ್ತಿಪಾಸ್ತಿಗೂ ನಷ್ಟವಾಗುತ್ತಿದೆ. ಕೊಡಗಿನ ಮೂಲಕ ಹಾದು ಹೋದ ಹೈಟೆನ್ಷನ್ ವಿದ್ಯುತ್ ಮಾರ್ಗಕ್ಕಾಗಿ ಸಾವಿರಾರು ಮರಗಳು ನಾಶವಾಗುವ ಸಂದರ್ಭ ಕಾವೇರಿ ಸೇನೆಯ ಹೋರಾಟಕ್ಕೆ ಬೆಂಬಲ ನೀಡದೆ ಹಿಂಬದಿಯಿಂದ ವಿದ್ಯುತ್ ಮಾರ್ಗ ಪೂರ್ಣಗೊಳ್ಳುವಂತೆ ನೋಡಿಕೊಂಡರು. ಈ ಕಾರಣದಿಂದಲೇ ಇಂದು ಜಿಲ್ಲೆಯ ಮರಗಳು ನಾಶವಾಗಿ ಪ್ರಾಕೃತಿಕ ಅಸಮತೋಲನದಿಂದ ಅರ್ಧದಷ್ಟು ಮಳೆಯ ಕೊರತೆ ಎದುರಾಗಿದೆ ಎಂದು ರವಿ ಚಂಗಪ್ಪ ಆರೋಪಿಸಿದರು.
ಇತ್ತೀಚೆಗೆ ಸರಕಾರ ಮಾವು, ಬೇವು ಹಾಗೂ ಬಳಂಜಿ ಮರಗಳನ್ನು ಕಡಿತಲೆ ಮಾಡಲು ಅನುಮತಿ ನೀಡಿದ ಕಾರಣ ಕೊಡಗು, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ ಭಾಗಗಳಲ್ಲಿ ಸುಮಾರು 30 ಲಕ್ಷದಷ್ಟು ಮರಗಳು ನಾಶವಾಗಿವೆ. ಈ ಎಲ್ಲಾ ಕಾರಣಗಳಿಂದ ರಾಜ್ಯದಲ್ಲಿ ಮಳೆಯ ಕೊರತೆ ಎದುರಾಗಿ ಬರ ಪರಿಸ್ಥಿತಿ ತಲೆ ದೋರಿದೆ. ಕಾವೇರಿ ವಿವಾದ ಎದುರಾದಾಗ ಪ್ರತಿಭಟನೆ ನಡೆಸುವ ಹೋರಾಟಗಾರರು ಕಾವೇರಿ ಹುಟ್ಟುವ ಪ್ರದೇಶದಲ್ಲಿ ಮಳೆಯಾಗುವಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಕೊಡಗಿನ ಮರಗಳನ್ನು ಸಂರಕ್ಷಿಸುವ ಕುರಿತು ಗಂಭೀರ ಚಿಂತನೆ ನಡೆಸಬೇಕೆಂದು ರವಿ ಚಂಗಪ್ಪ ಒತ್ತಾಯಿಸಿದರು.
ತಕ್ಷಣ ಜಿಲ್ಲಾಡಳಿತ ಎಚ್ಚೆತ್ತು ಕೊಂಡು ಕಾಫಿ ತೋಟಗಳು ಪರಿವರ್ತನೆಯಾಗಿ ರೆಸಾರ್ಟ್ಗಳು ನಿರ್ಮಾಣವಾಗುವದನ್ನು ಮತ್ತು ಬೆಲೆ ಬಾಳುವ ಮರಗಳು ನಾಶವಾಗುವ ದನ್ನು ತಡೆಗಟ್ಟಬೇಕು. ತಪ್ಪಿದಲ್ಲಿ ಮುಂದೆ ಸಂಭವಿಸುವ ಪ್ರಾಕೃತಿಕ ವಿಕೋಪಗಳಿಗೆ ಅಧಿಕಾರಿಗಳೇ ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಸಂಘಟನೆಯ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಹೊಸಬೀಡು ಶಶಿ ಉಪಸ್ಥಿತರಿದ್ದರು.