ವೀರಾಜಪೇಟೆ, ಜ. 9: ಮನೆಯಲ್ಲಿ ಕಳವು ಮಾಡಿದ್ದನ್ನು ಮನೆಯ ಯಜಮಾನಿ ನೋಡಿದ ರೆಂಬ ಕಾರಣಕ್ಕಾಗಿ ಆಕೆಯ ಕುತ್ತಿಗೆಗೆ ಹಗ್ಗ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ ಆರೋಪದ ಮೇರೆ ಕೋತೂರು ಗ್ರಾಮದ ಪಣಿ ಎರವರ ಚುಬ್ರ ಅಲಿಯಾಸ್ ಬಿ ಬೊಳಕ ಎಂಬಾತನಿಗೆ ಇಲ್ಲಿನ ಎರಡನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಟಿ.ಎಂ.ನಾಗರಾಜ್ ಅವರು ಕಠಿಣ ಜೀವಾವಧಿ ಶಿಕ್ಷೆ ಹಾಗೂ ರೂ. 30.000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.ತಾ. 20-7-2014ರಂದು ಪೊನ್ನಂಪೇಟೆ ಬಳಿಯ ಕೋತೂರು ಗ್ರಾಮದ ಪೆಮ್ಮಂಡ ಸೀತಮ್ಮ ಅವರ ಮನೆಗೆ ನುಗ್ಗಿದ ಚುಬ್ರ, ಮನೆಯ ಅಲ್ಮೇರಾದ ಬಾಗಿಲನ್ನು ತೆರೆದು ಬೆಲೆ ಬಾಳುವ ವಸ್ತುಗಳನ್ನು ಹುಡುಕುತ್ತಿದ್ದಾಗ ಮನೆಯಲ್ಲಿದ್ದ ಸೀತಮ್ಮ ಆಕಸ್ಮಿಕವಾಗಿ ನೋಡಿದ್ದರಿಂದ ಮುಂದೆ ತನಗೆ ತೊಂದರೆಯಾಗಲಿದೆ ಎಂಬ ಭಾವನೆಯಿಂದ ಸೀತಮ್ಮನನ್ನು ಕೆಳಗೆ ಬೀಳಿಸಿ ಹಗ್ಗದಿಂದ ಆಕೆಯ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆಂದು ಪ್ರಕರಣದ ತನಿಖೆ ನಡೆಸಿದ್ದ ಗೋಣಿಕೊಪ್ಪ ಪೊಲೀಸರು ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.ಆರೋಪಿ ದಂಡ ಪಾವತಿಸಲು ವಿಫಲನಾದರೆ ಮತ್ತೆ 1 ವರ್ಷ ಸಾದಾ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.ಸರ್ಕಾರದ ಪರ ಸಹಾಯಕ ಅಭಿಯೋಜಕ ಕೆ.ನಾಗರಾಜ ಆಚಾರ್ಯ ವಾದ ಮಂಡಿಸಿದರು.