ಕೂಡಿಗೆ, ಅ. 27: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬನಶಂಕರಿ ಬಡಾವಣೆಯಲ್ಲಿ ವಾಸವಿರುವ ವಿಜಯ್‍ಕುಮಾರ್ ಎಂಬವರ ಮನೆಗೆ ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಬೈಕ್‍ಗಳಲ್ಲಿ ಬಂದ ಸುಮಾರು 10 ಮಂದಿಯ ತಂಡ ಮನೆಗೆ ಏಕಾಏಕಿ ನುಗ್ಗಿ ಅಲ್ಲಿದ್ದ ವಸ್ತುಗಳನ್ನು ಹಾನಿಗೊಳಿಸಿ, ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಅವರ ಬೈಕ್ ಹಾಗೂ ಮನೆಯ ಕಿಟಿಕಿ ಗಾಜುಗಳನ್ನು ಪುಡಿಪುಡಿಗೊಳಿಸಿ ಮನೆ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದಾರೆ.
ಅವರ ಮನೆಯಲ್ಲಿ ನಡೆಯುತ್ತಿದ್ದ ಪಿತೃಪಕ್ಷದ ಪೂಜಾ ಕೈಂಕರ್ಯ ಮುಗಿದ ತಕ್ಷಣ ವಿಜಯ್‍ಕುಮಾರ್ ಅವರ ತಲೆ ಮತ್ತು ಎದೆ ಭಾಗಕ್ಕೆ ಮರ ತುಂಡಿನಿಂದ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ಅವರನ್ನು ತಡೆಯಲು ಬಂದ ಪತ್ನಿ ಸುಜಾತ ಮತ್ತು ಅವರ ಮಗ ಮೋಕ್ಷಿತ್ ಅವರ ಮೇಲೂ ಹಲ್ಲೆ ನಡೆಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ವಿಜಯ್‍ಕುಮಾರ್ ಕುಶಾಲನಗರ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ಚಾಮರಾಯನಕೋಟೆಯವರೆನ್ನಲಾದವರು ಹಳೆಯ ವೈಷಮ್ಯದಿಂದ ಈ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ.
ವಿಜಯ್ ಕುಮಾರ್ ಅವರು ಪಿರಿಯಾಪಟ್ಟಣ ತಾಲೂಕಿನ ಗುಡ್ಡೇನಹಳ್ಳಿಯ ನಳಂದ ಗುರುಕುಲ ಶಾಲೆಯಲ್ಲಿ ಸಂಗೀತ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕೃತ್ಯ ನಡೆದ ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.