ಸೋಮವಾರಪೇಟೆ, ಜ.20: ಮಧ್ಯರಾತ್ರಿಯಲ್ಲಿ ಅಕ್ರಮ ಮರ ಸಾಗಾಟ ಮಾಡುತ್ತಿದ್ದ ಮರಗಳ್ಳರನ್ನು ಹಿಡಿಯಲು ತೆರಳಿದ ಅರಣ್ಯ ಇಲಾಖಾ ಸಿಬ್ಬಂದಿಗಳ ಕಾರ್ಯಕ್ಕೆ ಮರಗಳ್ಳರೇ ಅಡ್ಡಿ ಪಡಿಸಿದ ಹಿನ್ನೆಲೆ ಅಧಿಕಾರಿಯೋರ್ವರು ತಮ್ಮ ಬಳಿಯಿದ್ದ ರಿವಾಲ್ವರ್‍ನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಕಳ್ಳರನ್ನು ಹಿಮ್ಮೆಟ್ಟಿಸಿದ ಘಟನೆ ನಿನ್ನೆ ರಾತ್ರಿ 1 ಗಂಟೆಗೆ ನಡೆದಿದೆ.
ನಗರಕ್ಕೆ ಸಮೀಪದ ಹೊಸಬೀಡು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೊನೆಯಲ್ಲಿ ಅಕ್ರಮವಾಗಿ ಕಡಿದು ಸಾಗಿಸುತ್ತಿದ್ದ ಮರಗಳ ಸಹಿತ ಪಿಕ್‍ಅಪ್ ವಾಹನವನ್ನು ಅಧಿಕಾರಿಗಳ ತಂಡ ಮುಟ್ಟುಗೋಲು ಹಾಕಿಕೊಂಡು, ಪ್ರಕರಣದ ಪ್ರಮುಖ ಆರೋಪಿಯ ವಿರುದ್ಧ ಮೊಕದ್ದಮೆ ದಾಖಲಿಸಿದೆ.ತಾ.19ರ ರಾತ್ರಿ ಸೋಮವಾರಪೇಟೆ ವಲಯದ ಅರಣ್ಯಾಧಿಕಾರಿ, ಶಾಂತಳ್ಳಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಮತ್ತು ಅರಣ್ಯ ರಕ್ಷಕರು ಹಾಗೂ ಅರಣ್ಯ ವೀಕ್ಷಕರು ಕೂತಿ ರಸ್ತೆಯಲ್ಲಿ ಗಸ್ತು ತಿರುತ್ತಿದ್ದ ಸಂದರ್ಭ, ಹೊಸಬೀಡು ಗ್ರಾಮದ ಸರ್ಕಾರಿ ಶಾಲೆಯ ಮುಂಭಾಗದ ಒಳರಸ್ತೆಯಲ್ಲಿ ಅಕ್ರಮವಾಗಿ ಮರಗಳನ್ನು ಸಾಗಾಟಗೊಳಿಸುತ್ತಿರುವದು ಕಂಡುಬಂದಿದೆ.
ಕಲ್ಕಂದೂರು ಗ್ರಾಮ ನಿವಾಸಿ ಚೆನ್ನಕೇಶವ ಅಲಿಯಾಸ್ ಶೇಖರ್ ಎಂಬಾತ ತನ್ನ ಪಿಕ್‍ಅಪ್ ವಾಹನದಲ್ಲಿ (ಕೆ.ಎ. 12 ಎ.3582) ಅಕ್ರಮವಾಗಿ ದೂಪ ಹಾಗೂ ಕಾಡು ಜಾತಿಯ ಮರಗಳ ನಾಟಾವನ್ನು ಸಾಗಿಸುತ್ತಿದ್ದ ಸಂದರ್ಭ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ವಾಹನವನ್ನು ಹಿಡಿದಿದ್ದಾರೆ.
ಈ ಸಂದರ್ಭ ವಾಹನ ದೊಳಗಿದ್ದವರು ಸ್ಥಳದಿಂದ ಪರಾರಿ ಯಾಗಿದ್ದು, ಸ್ವಲ್ಪ ಸಮಯದಲ್ಲಿಯೇ ಬೈಕ್ ಹಾಗೂ ಬೊಲೇರೋ ವಾಹನದಲ್ಲಿ ಆಗಮಿಸಿದ ಶೇಖರ್ ಮತ್ತು ಇತರರು, ಅರಣ್ಯಾಧಿಕಾರಿಗಳು ವಶಪಡಿಸಿಕೊಂಡು
(ಮೊದಲ ಪುಟದಿಂದ) ಕಚೇರಿಗೆ ತರುತ್ತಿದ್ದ ತನ್ನದೇ ಪಿಕ್‍ಅಪ್ ವಾಹನಕ್ಕೆ ತಡೆಯೊಡ್ಡಿದ್ದಾರೆ ಎನ್ನಲಾಗಿದೆ.
ಈ ಸಂದರ್ಭ ಶೇಖರ್ ಹಾಗೂ ಸಹಚರರ ಬೈಕ್ ಹಾಗೂ ಬೊಲೇರೋ ವಾಹನಕ್ಕೆ ಪಿಕ್‍ಅಪ್ ಡಿಕ್ಕಿಯಾಗಿದೆ. ಪಿಕ್‍ಅಪ್‍ನಿಂದ ಕೆಳಗಿಳಿದ ಅರಣ್ಯ ಇಲಾಖಾಧಿಕಾರಿ ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್‍ಗೆ ಕರೆ ಮಾಡಿ ಪೊಲೀಸರನ್ನು ಸ್ಥಳಕ್ಕೆ ಕರೆಸಲು ಅಣಿಯಾಗುತ್ತಿದ್ದಂತೆ, ಅವರ ಮೊಬೈಲ್ ಕಸಿದುಕೊಳ್ಳಲು ಆರೋಪಿ ಶೇಖರ್ ಯತ್ನಿಸಿದ್ದಾನೆ. ಈ ಸಂದರ್ಭ ತಳ್ಳಾಟ-ನೂಕಾಟ ನಡೆದಿದ್ದು, ಅರಣ್ಯ ಇಲಾಖಾಧಿಕಾರಿ ತಮ್ಮ ಬಳಿಯಿದ್ದ ರಿವಾಲ್ವರ್‍ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಅನಿರೀಕ್ಷಿತ ಘಟನೆಯಿಂದ ಬೆದರಿದ ಮರಗಳ್ಳರ ತಂಡ ಬೈಕ್ ಹಾಗೂ ಬೊಲೇರೋ ವಾಹನದೊಂದಿಗೆ ಸ್ಥಳದಿಂದ ಪರಾರಿಯಾಗಿದೆ ಎನ್ನಲಾಗಿದೆ. ಇಷ್ಟೆÀ್ಟಲ್ಲಾ ಘಟನೆಗಳು ನಡೆದಿದ್ದರೂ ಅರಣ್ಯಾಧಿಕಾರಿಗಳು ಅಕ್ರಮ ಮರ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತ್ರ ಮೊಕದ್ದಮೆ ದಾಖಲಿಸಿಕೊಂಡಿದ್ದು, ಆರೋಪಿ ಚನ್ನಕೇಶವನ ಪತ್ತೆಗೆ ಬಲೆ ಬೀಸಿದ್ದಾರೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಮೊಹಿಸೀನ್ ಬಾಷ, ಉಪ ವಲಯ ಅರಣ್ಯಾಧಿಕಾರಿ ಲಾಲ್‍ಸಾಬ್, ಅರಣ್ಯ ರಕ್ಷಕರಾದ ಬಿ.ಎಸ್. ಕಿರಣ್, ಪಿ.ಕೆ. ಚೇತನ್, ಚಾಲಕರಾದ ಚಂದ್ರನ್ ಎಂ.ಆರ್., ಅರಣ್ಯ ವೀಕ್ಷಕರಾದ ಬಿ.ಎಸ್. ಸುಂದರ್, ವಿಜಯ, ಪವನ್ ಅವರುಗಳು ಭಾಗವಹಿಸಿದ್ದರು.