ಶ್ರೀಮಂಗಲ, ನ. 27: 3 ತಿಂಗಳ ಹಿಂದೆಯಷ್ಟೇ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಅಂತರ್ರಾಜ್ಯ ಹೆದ್ದಾರಿಯಲ್ಲಿ ವಾಹನ ತಡೆದು ಲಕ್ಷಾಂತರ ರೂ. ದರೋಡೆ ಮಾಡಿದ ಪ್ರಕರಣ ಮಾಸುವ ಮುನ್ನವೇ ಇಡೀ ಠಾಣಾ ವ್ಯಾಪ್ತಿಯಲ್ಲಿ ಕೇರಳ ರಾಜ್ಯಕ್ಕೆ ಸೇರಿದ ಕಾರನ್ನು ತಡೆದು ಹಲ್ಲೆ ನಡೆಸಿ ನಗದು ದರೋಡೆ ಮಾಡಿರುವ ಪ್ರಕರಣ ನಡೆದಿದೆ.ನಿನ್ನೆ ರಾತ್ರಿ 11.30ಕ್ಕೆ ಮೈಸೂರಿ ನಿಂದ ಕೇರಳದ ಕೂಜಿಕೋಡ್‍ಗೆ (ಕೊಡಗಿನ ಗೋಣಿಕೊಪ್ಪ, ಶ್ರೀಮಂಗಲ ರಾಜ್ಯ ಹೆದ್ದಾರಿ ಮೂಲಕ) ಕೋಜಿಕೋಡ್‍ನ ನೌಶದ್ ಹಾಗೂ ಚಾಲಕ ಮಹಮದ್ ಬಿಳಿ ಬಣ್ಣದ ಟೊಯೊಟಾ ಅಲ್ಟಿಸ್ ಕರೋಲ್ಲಾ ಕಾರಿನಲ್ಲಿ (ಕೆಎಲ್ 11 ಎಜಿ 5000) ತೆರಳುತ್ತಿದ್ದ ಸಂದರ್ಭ ಪೊನ್ನಂಪೇಟೆ ದಾಟಿ ಬೇಗೂರು ಕೊಲ್ಲಿ ಜಾಗದಲ್ಲಿ 2.30 ಗಂಟೆಗೆ (ಭಾನುವಾರ ಮುಂಜಾನೆ) ಕಾರನ್ನು ಎರಡು ಬಿಳಿ ಬಣ್ಣದ ಇನೋವಾ ಕಾರು ಅಡ್ಡಗಟ್ಟಿ (ಮೊದಲ ಪುಟದಿಂದ) ಅದರಲ್ಲಿದ್ದ 10-12 ಜನರು ನೌಶದ್ ಅವರನ್ನು ಬೆದರಿಸಿ, ಕಾರಿನಿಂದ ಹೊರಗೆಳೆದು, ಆತನಿಂದ 8 ಸಾವಿರ ನಗದು, 2 ಮೊಬೈಲ್ ಕಿತ್ತುಕೊಂಡಿದ್ದಾರೆ.

ನೌಶದ್‍ನನ್ನು ಅಲ್ಲೇ ಬಿಟ್ಟು ಮುಂದೆ 3 ಕಿ.ಮೀ. ದಾಟಿ ಹುದಿಕೇರಿ ಸಮೀಪ ಕಾರಿನ ಚಾಲಕ ಮಹಮ್ಮದ್‍ನನ್ನು ಕಾರು ನಿಲ್ಲಿಸಿ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ತನ್ನ ಬಳಿ ಹಣವಿಲ್ಲವೆಂದು ಹೇಳಿದಾಗ ಹಲ್ಲೆ ನಡೆಸಿ, ಆತನಿಂದ 15 ಸಾವಿರ ನಗದು ಹಾಗೂ ಮೊಬೈಲ್ ಕಿತ್ತುಕೊಂಡಿದ್ದಾರೆ. ನಂತರ ಎರಡು ಇನೋವಾ ಕಾರು ಕೇರಳ ಕಡೆ ಚಲಿಸಿದೆ.

ಹಲ್ಲೆಯಿಂದ ಎಡಕಾಲು ಮುರಿತಗೊಂಡ ಮಹಮ್ಮದ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ತಡೆದು, ವಿಚಾರ ತಿಳಿಸಿ ಗೋಣಿಕೊಪ್ಪ ಆಸ್ಪತ್ರೆಗೆ ದಾಖಲಾಗಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಾಗಿದ್ದಾನೆ. ನೌಶದ್ ಕೊಲ್ಲಿ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದು, ಒಂದೂವರೆ ತಿಂಗಳ ಹಿಂದೆ ರಜೆಯಲ್ಲಿ ಬಂದಿದ್ದರು.

ನೌಶದ್ ಶ್ರೀಮಂಗಲ ಠಾಣೆಗೆ ಭಾನುವಾರ ಪೂರ್ವಾಹ್ನ 11 ಗಂಟೆಗೆ ದೂರು ನೀಡಿದ್ದು, ಕಾರನ್ನು ಅಡ್ಡಗಟ್ಟಿದ ಸಂದರ್ಭ ಅಲ್ಟಿಸ್ ಕಾರು ಮುಂಭಾಗಕ್ಕೆ ತೀವ್ರ ಹಾನಿಯಾಗಿದೆ. 3 ತಿಂಗಳ ಹಿಂದೆಯಷ್ಟೇ ಶ್ರೀಮಂಗಲ ಸಮೀಪ ಇರ್ಪು ಜಂಕ್ಷನ್‍ನಲ್ಲಿ ಕೇರಳ ರಾಜ್ಯದ ಇನೋವಾ ಕಾರನ್ನು ತಡೆದು ಲಕ್ಷಾಂತರ ರೂ. ನಗದು ದರೋಡೆ ಮಾಡಲಾಗಿತ್ತು. ಈ ಪ್ರಕರಣವನ್ನು ಪೊಲೀಸರು ಅತಿ ಶೀಘ್ರದಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು. ಕೇರಳ ಮೂಲದವರನ್ನು ಬಂಧಿಸಲಾಗಿತ್ತು.

ಈ ಪ್ರಕರಣ ಪತ್ತೆ ಹಚ್ಚಲು ಸ್ಥಳಕ್ಕೆ ಬೆರಳಚ್ಚು ತಜ್ಞರ ತಂಡ ಆಗಮಿಸಿ ತನಿಖೆ ನಡೆಸಿದೆ. ಡಿವೈಎಸ್‍ಪಿ ನಾಗಪ್ಪ, ಕುಟ್ಟ ಸಿಪಿಐ ದಿವಾಕರ್, ಶ್ರೀಮಂಗಲ ಎಸ್‍ಐ ಶ್ರೀಧರ್, ಕುಟ್ಟ ಎಸ್‍ಐ ರವಿಕಿರಣ್ ಸ್ಥಳ ಮಹಜರು ನಡೆಸಿ, ತನಿಖೆ ಕೈಗೊಂಡಿದ್ದಾರೆ.