ನಾಪೋಕ್ಲು, ಡಿ. 25: ಮಧ್ಯಕಾಲೀನ ಯುಗ ಇಡೀ ಜಗತ್ತಿನಲ್ಲಿ ಬದಲಾವಣೆ ತಂದಂತಹ ಯುಗ. ಜನಸಾಮಾನ್ಯರ ಕಾಲವಾಗಿ ವ್ಯಕ್ತಿತ್ವಕ್ಕೆ ಹೆಚ್ಚು ಒತ್ತು ನೀಡಿದಂತಹ ಯುಗವಾಗಿದ್ದು ಸಾಂಸ್ಕøತಿಕ, ರಾಜಕೀಯ, ಸಾಹಿತ್ಯಿಕವಾಗಿ ಹಾಗೂ ಸಾಮಾಜಿಕವಾಗಿ ಬದಲಾವಣೆ ತಂದಂತಹ ಕಾಲವಾಗಿದೆ ಎಂದು ಮೈಸೂರು ವಿಶ್ವ ವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ. ಜಿ.ಆರ್. ತಿಪ್ಪೇಸ್ವಾಮಿ ತಿಳಿಸಿದರು.

ನಾಪೋಕ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠದ ವತಿಯಿಂದ ಜರುಗಿದ ಪ್ರಚಾರೋಪನ್ಯಾಸ ಮಾಲಿಕೆಯ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿ, ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ರತ್ನಾಕರವರ್ಣಿಯ ಭರತೇಶ ವೈಭವ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠದ ಸಂಯೋಜಕ ಪ್ರೊ. ಸೋಮಣ್ಣ ಪ್ರಾಸ್ತಾವಿಕ ನುಡಿಗಳನ್ನಾಡಿ, ಮಂಗಳೂರು, ಉಡುಪಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಳೆಗನ್ನಡ ಸಾಹಿತ್ಯದ ಪರಂಪರೆ, ಕನ್ನಡ ಸಾಹಿತ್ಯಕ್ಕೆ ಜೈನ ಧರ್ಮವು ನೀಡಿರುವ ಕೊಡುಗೆ ಹಾಗೂ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಸಾಂಗತ್ಯ ಪ್ರಕಾರದಲ್ಲಿ ಕಾವ್ಯವನ್ನು ರಚಿಸಿ, ರಾಷ್ಟ್ರಕವಿ ಕುವೆಂಪು ಅವರ ಮೆಚ್ಚುಗೆಗೆ ಪಾತ್ರರಾಗಿ ಮಹಾಕವಿ ಎಂದು ಗುರುತಿಸಿಕೊಂಡ ಕ್ರಿ.ಶ. ಹದಿನಾರನೆಯ ಶತಮಾನದಲ್ಲಿ ಜೀವಿಸಿದಂತಹ ರತ್ನಾಕರವರ್ಣಿಯ ಕಾವ್ಯದ ಮಹತ್ವವನ್ನು ಪರಿಚಯಿಸುವ ನಿಟ್ಟಿನಲ್ಲಿ ಅಧ್ಯಯನ ಪೀಠವನ್ನು ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ರತ್ನಾಕರವರ್ಣಿಯ ಜೀವನ ಹಾಗೂ ಕೃತಿಗಳನ್ನು ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸಲಾಗುವದು ಹಾಗೂ ಲೇಖನಗಳನ್ನೊಳಗೊಂಡ ಗ್ರಂಥವನ್ನು ಹೊರ ತರಲಾಗುವದು ಎಂದು ತಿಳಿಸಿದರು.

ಇದೇ ಸಂದರ್ಭ ನಾಪೋಕ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪಿ.ಎನ್. ಸತೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸುಮಾರು ಎರಡು ಸಾವಿರ ವರ್ಷಗಳ ಪುರಾತನ ಭಾಷೆಯಾಗಿರುವ ಕನ್ನಡ ಭಾಷೆಯು ತನ್ನದೇ ಆದ ಇತಿಹಾಸ ಮತ್ತು ಶ್ರೀಮಂತಿಕೆಯನ್ನು ಇಂದಿಗೂ ಉಳಿಸಿಕೊಂಡು ಬಂದಿದೆ. ಇಂಗ್ಲೀಷ್ ಭಾಷೆಯ ವ್ಯಾಮೋಹದ ನಡುವೆಯು ಕನ್ನಡ ಭಾಷೆ ಮತ್ತು ಸಾಹಿತ್ಯ ತನ್ನ ಅಸ್ತಿತ್ವವನ್ನು ಕಳೆದುಕೊಂಡಿಲ್ಲ ದಿರುವದು ಕನ್ನಡ ಭಾಷೆಯ ಶ್ರೇಷ್ಟತೆಯನ್ನು ಸಾರುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ನಿರೂಪಣೆ ಯನ್ನು ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರೊ. ಕನ್ನಿಕಾ ಹಾಗೂ ಸ್ವಾಗತವನ್ನು ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಕಾವೇರಮ್ಮ ನಡೆಸಿಕೊಟ್ಟರು. ಚಿಕ್ಕ ಅಳುವಾರ ಸ್ನಾತಕೋತ್ತರ ಪದವಿ ಕೇಂದ್ರದ ಕನ್ನಡ ವಿಭಾಗದ ಉಪನ್ಯಾಸಕ ಜûಮೀರ್ ಅಹಮದ್, ನಾಪೋಕ್ಲು ಸ.ಪ್ರ.ದ. ಕಾಲೇಜಿನ ವಿವಿಧ ವಿಭಾಗಗಳ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.