ಮಡಿಕೇರಿ, ಡಿ. 4: ಜಿಲ್ಲಾ ಕೇಂದ್ರ ಮಡಿಕೇರಿ ಸನಿಹದಲ್ಲಿ ಅರೆಭಾಷಿಕ ಗೌಡ ಜನಾಂಗದವರು ಹೆಚ್ಚಾಗಿರುವ ಮದೆ, ಬೆಟ್ಟತ್ತೂರು, ಜೋಡುಪಾಲ, 2ನೇ ಮೊಣ್ಣಂಗೇರಿ ಸೇರಿದಂತೆ ಇತ್ತೀಚೆಗಷ್ಟೆ ನೂತನವಾಗಿ ಮದೆ ಗೌಡ ಸಮಾಜವನ್ನು ರಚಿಸಲಾಗಿದೆ. ಈ ಸಮಾಜದ ಪ್ರಪ್ರಥಮ ಕಾರ್ಯಕ್ರಮವಾಗಿ ಇಂದು ಮದೆ ಗ್ರಾಮದ ಮದೆ ಮಹೇಶ್ವರ ಪದವಿ ಪೂರ್ವ ಕಾಲೇಜುವಿನಲ್ಲಿ ಜನಾಂಗ ಬಾಂಧವರ ಸಂತೋಷಕೂಟವನ್ನು ಏರ್ಪಡಿಸಲಾಗಿತ್ತು.
ಸಮಾಜದ ನೂತನ ಅಧ್ಯಕ್ಷರೂ ಆಗಿರುವ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರೂ ಆಗಿರುವ ಕೊಲ್ಯದ ಗಿರೀಶ್ ಅವರ ನೇತೃತ್ವದಲ್ಲಿ ಸಂತೋಷಕೂಟ ಕಾರ್ಯಕ್ರಮ ಆಯೋಜಿತವಾಗಿತ್ತು.
ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಗ್ರಾಮೀಣ ಕ್ರೀಡೆಯನ್ನು ಪ್ರತಿಬಿಂಬಿಸುವ ಕ್ರೀಡಾ ಸ್ಪರ್ಧೆ ಕಾರ್ಯಕ್ರಮಕ್ಕೆ ಹೆಚ್ಚು ಮುದ ನೀಡಿತು. ಮದೆ, ಬೆಟ್ಟತ್ತೂರು, ಜೋಡುಪಾಲ, 2ನೇ ಮೊಣ್ಣಂಗೇರಿ ವಿಭಾಗದ ನೂರಾರು ಮಂದಿ ಬೆಳಿಗ್ಗೆಯಿಂದ ಸಂಜೆತನಕ ನಡೆದ ವಿವಿಧ ಕಾರ್ಯಕ್ರಮದಲ್ಲಿ ಸಂಭ್ರಮದಿಂದ ಭಾಗಿಗಳಾಗಿದ್ದರು.
ಕಾಳು ಹೆರ್ಕುದು, ಕಪ್ಪೆ ಹಾರ್ದು, ವಿವಿಧ ವಿಭಾಗದಲ್ಲಿ ಓಟದ ಸ್ಪರ್ಧೆ, ಅಜ್ಜ, ಅಜ್ಜಿಗಳ್ಗೆ ರಬಸದ ನಡಿಗೆ, ಸಂಗೀತ ಕುರ್ಚಿ, ಹಗ್ಗಜಗ್ಗಾಟ, ಥ್ರೋಬಾಲ್ ನಂತಹ ಕ್ರೀಡಾ ಸ್ಪರ್ಧೆಗಳು ಗಮನ ಸೆಳೆದವು.
ಅಪರಾಹ್ನ ಊಟೋಪಚಾರದ ಬಳಿಕ ರಂಗು ರಂಗಿನ ಸಾಂಸ್ಕøತಿಕ ಕಾರ್ಯಕ್ರಮದೊಂದಿಗೆ ವಿಚಾರ ಗೋಷ್ಠಿ ನಡೆಯಿತು. ಮೈಸೂರಿನ ಉಪನ್ಯಾಸಕ ಪಟ್ಟಡ ಶಿವಕುಮಾರ್ ಅವರು ವಿಷಯ ಮಂಡನೆ ಮಾಡಿದರು.
ಈ ಮುನ್ನ ಬೆಳಿಗ್ಗೆ ಕಾರ್ಯಕ್ರಮವನ್ನು ಮದೆ ಗ್ರಾ.ಪಂ. ಅಧ್ಯಕ್ಷ ಮುದ್ಯನ ಚಂದ್ರಶೇಖರ್ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ
(ಮೊದಲ ಪುಟದಿಂದ) ಅವರು ಗ್ರಾಮದಲ್ಲಿ ಸಮಾಜದ ಕಟ್ಟಡ ನಿರ್ಮಾಣ ಮಾಡುವ ಅಗತ್ಯತೆ ಇದ್ದು, ಎಲ್ಲರ ಸಹಕಾರ ಅಗತ್ಯವಿದೆ. ಪಂಚಾಯಿತಿಯಿಂದಲೂ ಅಗತ್ಯ ಸ್ಪಂದನ ನೀಡುವದಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಾಜದ ಅಧ್ಯಕ್ಷ ಕೊಲ್ಯದ ಗಿರೀಶ್ ಅವರು ಮದೆನಾಡು ವಿಭಾಗದಲ್ಲಿ ಅರೆಭಾಷಿಕ ಗೌಡ ಸಮುದಾಯದವರು ಅಧಿಕ ಸಂಖ್ಯೆಯಲ್ಲಿ ಇದ್ದರೂ ಈತನಕ ಇಲ್ಲಿ ಗೌಡ ಸಮಾಜ ಅಸ್ತಿತ್ವಕ್ಕೆ ಬಂದಿರಲಿಲ್ಲ. ಇದೀಗ ಸಾಕಷ್ಟು ಗ್ರಾಮಸ್ಥರ, ಸದಸ್ಯರ ಪರಿಶ್ರಮದಿಂದ ಗೌಡ ಸಮಾಜ ರಚಿಸಲಾಗಿದೆ. ಮುಂದಿನ ದಿನದಲ್ಲಿ ಜಾಗ ಗುರುತಿಸಿ ಸಮಾಜದ ನೂತನ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನಿಸಲಾಗುವದು. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಸಂತೋಷಕೂಟದ ಅಂಗವಾಗಿ ಗ್ರಾಮೀಣ ಕ್ರೀಡೆಯನ್ನು ನೆನಪಿಸುವ ನಿಟ್ಟಿನಲ್ಲಿ ಗ್ರಾಮೀಣ ಕ್ರೀಡೆ ಹಾಗೂ ಪ್ರತಿಭೆಗಳನ್ನು ಹೊರತರಲು ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಿರುವದಾಗಿ ಗಿರೀಶ್ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯ ಶಿಕ್ಷಕ ನೆರಿಯನ ಸೋಮಯ್ಯ, ಕುಶಾಲನಗರದ ಉದ್ಯಮಿ ಉಗ್ರಾಣಿ ಮನೋಜ್ ಕುಮಾರ್, ಅಂತರ ರಾಷ್ಟ್ರೀಯ ಪದಕ ವಿಜೇತ ಕರಾಟೆ ತರಬೇತುದಾರ ಹುದೇರಿ ಮುತ್ತಪ್ಪ, ಮಾಜಿ ಸೈನಿಕ ತಳೂರು ಅಪ್ಪಾಜಿ, ಬೆಟ್ಟತ್ತೂರಿನ ಹಿರಿಯರಾದ ಕೊಂಪುಳೀರ ಆನಂದ, 2ನೇ ಮೊಣ್ಣಂಗೇರಿಯ ಮುದಿಯಾರು ರಾಘವ ಪಾಲ್ಗೊಂಡಿದ್ದರು.
ಬಟ್ಯನ ಗಣೇಶ್ ಸ್ವಾಗತಿಸಿ, ಚೆರಿಯಮನೆ ಸಿಂಚನ ಹಾಗೂ ಬಾಳೆಕಜೆ ಸಾಹಿತ್ಯ ಪ್ರಾರ್ಥಿಸಿದರು. ಉಗ್ರಾಣಿ ದೇವಯ್ಯ ಪ್ರಾಸ್ತಾವಿಕ ನುಡಿಯಾಡಿದರು. ಪಟ್ಟಡ ಹೇಮಂತ್ ನಿರೂಪಿಸಿ, ವಂದಿಸಿದರು. ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಪ್ರಾಯೋಜಕತ್ವದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.