ಚೆಟ್ಟಳ್ಳಿ, ಜ. 7: ತಾ. 12 ರಂದು ನಡೆಯಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯ ಚುನಾವಣೆಯ ವ್ಯವಸಾಯಗಾರರ ಮತಪಟ್ಟಿಯಲ್ಲಿ ಹಲವು ರೈತರ ಹೆಸರನ್ನು ಕೈ ಬಿಟ್ಟಿರುವದು ಗ್ರಾಮ ಲೆಕ್ಕಿಗನ ಬೇಜವಾಬ್ದಾರಿತನವಾಗಿದೆ ಎಂದು ಚೆಟ್ಟಳ್ಳಿ ಸಹಕಾರ ಸಂಘದ ಅಧ್ಯಕ್ಷ ಜನಪರ ಹೋರಾಟ ಸಮಿತಿಯ ಸಂಚಾಲಕ ಬಲ್ಲಾರಂಡ ಮಣಿ ಉತ್ತಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸೋಮವಾರಪೇಟೆ ತಾಲೂಕು ಸುಂಟಿಕೊಪ್ಪ ಹೋಬಳಿಗೆ ಒಳಪಡುವ ಚೇರಳ, ಶ್ರೀಮಂಗಲ, ಈರಳೆ, ವಳಮುಡಿ, ಏಳನೇಹೊಸಕೋಟೆ, ಅತ್ತೂರು-ನಲ್ಲೂರು, ನೆಲ್ಲಿಹುದಿಕೇರಿ, ಕೂಡ್ಲೂರು ಚೆಟ್ಟಳ್ಳಿ, ಅಭ್ಯತ್ ಮಂಗಲ ಚೇರಳ ಶ್ರೀಮಂಗಲ ಕ್ಷೇತ್ರದ ವ್ಯವಸಾಯಗಾರರ ಮತಪಟ್ಟಿಯಲ್ಲಿ ಅತೀ ಹೆಚ್ಚಿನ ರೈತರ ಹೆಸರು ಕೈಬಿಡಲಾಗಿದೆ. ಇದು ರೈತರಿಗೆ ಮಾಡಿದ ಅನ್ಯಾಯ, ಇದಕ್ಕೆ ಕಾರಣವೇನು? ಆರ್‍ಟಿಸಿಯಲ್ಲಿ ರೈತರ ಹೆಸರಿದ್ದು ಕೈ ಬಿಟ್ಟು ರೈತರ ಕಡೆಗಣಿಸಿರುವದು ಖಂಡನೀಯ.
ಮಣಿ ಉತ್ತಪ್ಪ ಅವರು ಸುಂಟಿಕೊಪ್ಪ ಹೋಬಳಿಯ ಪ್ರಬಾರ ಕಂದಾಯ ಪರಿವೀಕ್ಷಕರಾದ ನಾಗೇಶ್‍ರಾವ್ ರವರನ್ನು ಸಂಪರ್ಕಿಸಿದಾಗ ಮತ ಪಟ್ಟಿಯಲ್ಲಿ ಹಲವಾರು ರೈತರ ಹೆಸರು ಬಿಡಲಾಗಿದೆ, ಆಗಿನ ಗ್ರಾಮಲೆಕ್ಕಿಗರು ಗ್ರಾಮಗಳ ರೈತರ ಪಟ್ಟಿಯನ್ನು ತಯಾರಿಸಿ ಇಲಾಖೆಗೆ ಸಲ್ಲಿಸ ಬೇಕಿತ್ತು. ಅವರು ಮಾಡದ ಕಾರಣ ರೈತ ಹೆಸರು ಕೈಬಿಟ್ಟು ಹೊಗಿದೆಂದರು.
ಗ್ರಾಮ ಲೆಕ್ಕಿಗರ ಬೇಜಾವಾಬ್ದಾರಿಯಾಗಿದ್ದು ಇದಕ್ಕೆ ಅವರೇ ನೇರ ಹೊಣೆಯಾದರೆ ಚುನಾವಣಾ ಪಟ್ಟಿಯನ್ನು ತಯಾರಿಸಲು ಗುತ್ತಿಗೆದಾರರಿಗೆ ನೀಡಿರುವದು ಮತ್ತೊಂದು ಕಾರಣ. ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಚವರು ವ್ಯವಸಾಯಗಾರರ ಮತಪಟ್ಟಿಯಲ್ಲಿ ಹೆಸರು ಕೈಬಿಟ್ಟಿರುವ ಕ್ರಮದ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
- ಕರುಣ್ ಕಾಳಯ್ಯ