ಮಡಿಕೇರಿ, ಜ. 16: ನಗರಸಭೆ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ಇದೇ ಪ್ರಥಮ ಬಾರಿಗೆ ಗುಪ್ತ ಮತದಾನದ ಮೂಲಕ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಸಮಿತಿಯಲ್ಲಿ ಬಿಜೆಪಿ ಸದಸ್ಯರು ಪಾರಮ್ಯ ಮೆರೆದಿದ್ದು, ಆಡಳಿತ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸುವಂತಾಯಿತು.ಸದಸ್ಯ ಬಲದ ಸ್ಥಾಯಿ ಸಮಿತಿ ಸದಸ್ಯರಾಗಿ ಬಿಜೆಪಿ ಸದಸ್ಯರಾದ ನೆರವಂಡ ಅನಿತಾ ಪೂವಯ್ಯ (16ಮತ), ಪಿ.ಡಿ. ಪೊನ್ನಪ್ಪ (14), ಕೆ.ಎಸ್. ರಮೇಶ್ (14), ಐ.ಜಿ. ಶಿವಕುಮಾರ್ (14), ಪಿ.ಟಿ. ಉಣ್ಣಿಕೃಷ್ಣ (14) ಹಾಗೂ ಎಸ್ಡಿಪಿಐನ ಕೆ.ಜಿ. ಪೀಟರ್ (14) ನಿರಾಯಾಸವಾಗಿ ಆಯ್ಕೆಯಾದರು. ಸಮಿತಿಯ ಉಳಿದ ಐವರು ಸದಸ್ಯರುಗಳ ಪೈಕಿ 7 ಮಂದಿಗೆ ತಲಾ 13 ಮತಗಳನ್ನು ಪಡೆದ ಹಿನ್ನೆಲೆಯಲ್ಲಿ ಐವರನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಯಿತು. ಬಿಜೆಪಿಯ ಲಕ್ಷ್ಮಿ(13), ಸವಿತಾ ರಾಕೇಶ್ (13), ಕಾಂಗ್ರೆಸ್ನ ಕೆ.ಎಂ. ಗಣೇಶ್ (13), ಚುಮ್ಮಿದೇವಯ್ಯ (13), ಜುಲೇಕಾಬಿ (13) ಆಯ್ಕೆಯಾದರು.
ನಗರಸಭಾ ಸಭಾಂಗಣದಲ್ಲಿ ನಗರಸಭಾಧ್ಯಕ್ಷತೆ ಕಾವೇರಮ್ಮ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಲಾಟರಿಯಲ್ಲಿ ಎಸ್ಡಿಪಿಐನ ಮನ್ಸೂರ್ (13) ಹಾಗೂ ನೀಮಾ ಅರ್ಶದ್ (13) ಸೋಲನುಭವಿಸಬೇಕಾಯಿತು.ಉಳಿದಂತೆ ಅಮಿನ್ ಮೊಯ್ಸಿನ್ (11), ನಂದಕುಮಾರ್ (12), ಪ್ರಕಾಶ್ ಆಚಾರ್ಯ (12), ತಜಸ್ಸುಂ (11), ಲೀಲಾ ಶೇಷಮ್ಮ (12) ಮತ ಪಡೆದರು.
ಸಂತಾಪ
ಸಭೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಮುಖಂಡ ಬಿ.ಟಿ. ಪ್ರದೀಪ್ ಅವರ ಅಕಾಲಿಕ ನಿಧನಕ್ಕೆ ಸಭೆಯಲ್ಲಿ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು. ನಗರಸಭೆ ಕೌನ್ಸಿಲ್ ಸಾಮಾನ್ಯ ಸಭೆಯನ್ನು ತಾ. 18ಕ್ಕೆ ಮುಂದೂಡಿ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ಅಧ್ಯಕ್ಷರು ಅವಕಾಶ ಮಾಡಿಕೊಟ್ಟರು. ಈ ಸಂದರ್ಭ ಮಾತನಾಡಿದ ಅಧ್ಯಕ್ಷರು ಸ್ಥಾಯಿ ಸಮಿತಿಯಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ಗೆ 6 ಮಂದಿ, ಬಿಜೆಪಿಯಿಂದ ಮೂವರು ಹಾಗೂ ಎಸ್ಡಿಪಿಐನಿಂದ ಇಬ್ಬರನ್ನು ಆಯ್ಕೆಗೊಳಿಸಲು ಅವಕಾಶ ಮಾಡಿಕೊಡುವಂತೆ ಕೋರಿದರು.
ಬಿಜೆಪಿ ಸದಸ್ಯ ಪಿ.ಡಿ. ಪೊನ್ನಪ್ಪ ಮಾತನಾಡಿ, ಸ್ಥಾಯಿ ಸಮಿತಿಗೆ ಬಿಜೆಪಿಯಿಂದ 6 ಮಂದಿಯ ಆಯ್ಕೆಗೆ ಅವಕಾಶ ಮಾಡಿಕೊಡುವಂತೆ ವಿನಂತಿಸಿದರು.