ಮಡಿಕೇರಿ, ನ. 17: ನಗರದ ಕನ್ನಂಡಬಾಣೆಯಲ್ಲಿರುವ ಬೃಹತ್ ನೀರಿನ ಜಲಮೂಲ ಮಣ್ಣು ಪಾಲಾಗುತ್ತಿದ್ದು, ಇದನ್ನು ಸಂರಕ್ಷಿಸಿಕೊಳ್ಳುವಲ್ಲಿ ಜಿಲ್ಲಾಡಳಿತ ಹಾಗೂ ನಗರಸಭೆ ಕೂಡಲೇ ಎಚ್ಚೆತ್ತುಕೊಳ್ಳುವಂತೆ ನಗರಸಭೆಯ ಹಿರಿಯ ಸದಸ್ಯ ಚುಮ್ಮಿ ದೇವಯ್ಯ ಒತ್ತಾಯಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಲಮೂಲಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಲವು ಬಾರಿ ನಗರಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದರೂ ಅದನ್ನು ಕಾರ್ಯಗತಗೊಳಿಸುವಲ್ಲಿ ಸಂಬಂಧಿಸಿದವರು ವಿಫಲರಾಗುತ್ತಿದ್ದಾರೆ. ಪರಿಣಾಮ ನೀರಿನ ಮೂಲವಿರುವ ಜಾಗಗಳನ್ನು ಕೆಲವರು ಭೂಪರಿವರ್ತನೆ ಮಾಡಿಕೊಂಡು ಮಣ್ಣು ಹಾಕಿ ಮುಚ್ಚುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಕನ್ನಂಡ ಬಾಣೆಯಲ್ಲಿರುವ ನೈಸರ್ಗಿಕ ನೀರಿನ ಮೂಲವಿರುವ ಜಾಗವು ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ್ದಾಗಿದ್ದು, ಇದನ್ನು ಭೂ ಪರಿವರ್ತನೆ ಮಾಡಲಾಗಿದೆ. ಬೇರೆಡೆ ನಡೆಯುತ್ತಿರುವ ಕಟ್ಟಡ ಕಾಮಗಾರಿಯ ಸ್ಥಳದಲ್ಲಿದ್ದ ಮಣ್ಣನ್ನು ತಂದು ಜಲಮೂಲವಿರುವ ಜಾಗಕ್ಕೆ ಸುರಿಯಲಾಗುತ್ತಿದೆ. ಪರಿಣಾಮ ಸುಮಾರು ನಾಲ್ಕೈದು ಪ್ರದೇಶಗಳ ನಿವಾಸಿಗಳಿಗೆ ಕುಡಿಯುವ ನೀರು ಒದಗಿಸುತ್ತಿದ್ದ ಜಲಮೂಲ ಮಣ್ಣು ಪಾಲಾಗುತ್ತಿದೆ. ಆದ್ದರಿಂದ ನಗರಸಭೆ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ ಆ ಜಲಮೂಲವಿರುವ ಜಾಗವನ್ನು ಖಾಸಗಿ ವ್ಯಕ್ತಿಯಿಂದ ಖರೀದಿಸಿ ಅಥವಾ ಪರಿಹಾರ ನೀಡಿ ಜಲಮೂಲವನ್ನು ಸಂರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇಲ್ಲವಾದರೆ ಸುಮಾರು 70 ವರ್ಷಗಳಿಂದ ಸುಮಾರು 2000 ಕುಟುಂಬಗಳಿಗೆ ನೀರು ಒದಗಿಸುತ್ತಿದ್ದ ಜಲಮೂಲ ಕಣ್ಮರೆಯಾಗುವದರಲ್ಲಿ ಸಂದೇಹವಿಲ್ಲ ಎಂದು ಚುಮ್ಮಿ ದೇವಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.