ಮಡಿಕೇರಿ, ಜು. 21: ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಪೊಲೀಸರಿಂದ ತನಿಖೆ ಪ್ರಾರಂಭಗೊಂಡಿದೆ.ಮೃತರ ಪುತ್ರ ಎಂ.ಜಿ. ನೇಹಾಲ್ ಮಡಿಕೇರಿಯ ಪ್ರಧಾನ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಖಾಸಗಿ ದೂರಿನ ಆಧಾರದಲ್ಲಿ ನ್ಯಾಯಾಧೀಶರ ನಿರ್ದೇಶನದನ್ವಯ ನಗರ ಪೊಲೀಸರು ಆರೋಪಿಗಳಾದ ಕೆ.ಜೆ.ಜಾರ್ಜ್, ಪ್ರಣಬ್ ಮೊಹಾಂತಿ. ಎ.ಎಂ.ಪ್ರಸಾದ್ ಅವರುಗಳ ವಿರುದ್ಧ ಎಫ್.ಐ.ಆರ್ ದಾಖಲಿಸಿದ್ದರು. ಇದೀಗ ಪ್ರ್ರಾಥಮಿಕ ಹಂತದ ತನಿಖೆ ಆರಂಭಗೊಂಡಿರುವದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ “ಶಕ್ತಿ”ಗೆ ಖಚಿತಪಡಿಸಿದ್ದಾರೆ. ಆಗಸ್ಟ್ 5 ಕ್ಕೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು. ಬಳಿಕವೂ ನ್ಯಾಯಾಲಯದ ನಿರ್ದೇಶನದಂತೆ ತನಿಖೆ ಪೂರ್ಣಗೊಳ್ಳುವವರೆಗೂ ಮುಂದುವರಿಯುವದಾಗಿ ಅವರು ತಿಳಿಸಿದರು. ಸಿ.ಐ.ಡಿ. ನಡೆಸಿರುವ ತನಿಖೆಯ ಮಾಹಿತಿ ಪಡೆಯುವ ಅಗತ್ಯದ ಕುರಿತು ಕೇಳಿದಾಗ ಅಗತ್ಯ ಬಿದ್ದರೆ ಮಾಹಿತಿ ಪಡೆಯಲಾಗುವದು, ಘಟನೆಯ ಪ್ರಾರಂಭದಿಂದಲೇ ತನಿಖೆ ಕೈಗೊಳ್ಳಲಾಗುವದು ಎಂದು ತಿಳಿಸಿದರು.ಕಾನೂನಾತ್ಮಕ ಅಂಶದಂತೆ ನ್ಯಾಯಾಧೀಶರು ಘಟನೆ ನಡೆದ ಪ್ರದೇಶ ವ್ಯಾಪ್ತಿಯ ಪೊಲೀಸ್ ಠಾಣೆಯ ಎಸ್. ಐ. ಅವರು ತನಿಖೆ ನಡೆಸುವಂತೆ ನಿರ್ದೇಶಿಸುತ್ತಾರೆ. ಈ ಪ್ರಕರಣದಲ್ಲಿಯೂ ಅದೇ ರೀತಿ ನಗರ ಎಸ್.ಐ. ಗೆ ನಿರ್ದೇಶಿಸಲಾಗಿದೆ. ಆದರೆÀ, “ಶಕ್ತಿ”ಗೆ ತಿಳಿದುಬಂದಂತೆ, ಮುಂದೆ ತನಿಖೆಯ ಬೆಳವಣಿಗೆಯ ಹಂತದಲ್ಲಿ ಅಗತ್ಯ ಬಿದ್ದಲ್ಲಿ ಹಿರಿಯ ಅಧಿಕಾರಿಗಳೂ ತನಿಖೆಯಲ್ಲಿ ಪಾಲ್ಗೊಳ್ಳುವಂತೆಯೂ ನ್ಯಾಯಾಲಯ ನಿರ್ದೇಶಿಸುವ ಸಾಧ್ಯತೆಯಿದೆ.ಹೈಕೋರ್ಟ್ : ವಿಚಾರಣೆಗೆ ಬಂದಿಲ್ಲ

ಈ ನಡುವೆ ಹಿರಿಯ ಆರೋಪಿ ಅಧಿಕಾರಿಗಳಾದ ಪ್ರಣಬ್ ಮೊಹಾಂತಿ ಹಾಗೂ ಎ.ಎಂ. ಪ್ರಸಾದ್ ಅವರು ಮಡಿಕೇರಿ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್‍ನಲ್ಲಿ ಸಲ್ಲಿಸಿದ್ದ ಕ್ರಿಮಿನಲ್ ಪಿಟಿಷನ್ ವಿಚಾರಣೆ ಇಂದೂ ಕೂಡ ನಡೆಯಲಿಲ್ಲ. ಕೋರ್ಟ್ 6 ರಲ್ಲಿ ಇಂದಿನ ಪಟ್ಟಿಯಲ್ಲಿ ಸಂಖ್ಯೆ 182 ರಲ್ಲಿದ್ದ ಅರ್ಜಿ ವಿಚಾರಣೆಗೆ ಬರಲಿಲ್ಲ. ಬಹುಶ: ಶುಕ್ರವಾರವೂ ವಿಚಾರಣೆಗೆ ಬರುವದು ಸಂಶಯ ಎಂದು ನೇಹಾಲ್ ಪರ ವಕೀಲರಾದ ಎಂ.ಟಿ.ನಾಣಯ್ಯ ‘ಶಕ್ತಿ’ ಗೆ ತಿಳಿಸಿÀದ್ದಾರೆ. ಮುಂದಿನ ಸೋಮವಾರ ವಿಚಾರಣೆಗೆ ಬರುವ ಸಾಧ್ಯತೆಯಿದ್ದು ಇದೀಗ ಬೆಂಚ್‍ನ ನ್ಯಾಯಾಧೀüಶರಾಗಿರುವ ಹೆಚ್. ಬಿಳ್ಳಪ್ಪ ಅವರು ಧಾರವಾಡಕ್ಕೆ ತೆರಳಲಿದ್ದು, ಬದಲೀ ನ್ಯಾಯಾಧೀಶರ ಸಮ್ಮುಖದಲ್ಲಿ ವಿಚಾರಣೆ ನಡೆಯಲಿದೆ.