ಮಡಿಕೇರಿ, ಅ. 7: ಐತಿಹಾಸಿಕ ಮಡಿಕೇರಿ ನಗರ ದಸರಾ ಜನೋತ್ಸವದಲ್ಲಿಂದು ಮಹಿಳೆಯರದೇ ದರ್ಬಾರ್ ಕಂಡು ಬಂದಿತು. ಮಡಿಕೇರಿ ನಗರ ದಸರಾ ಸಾಂಸ್ಕøತಿಕ ಸಮಿತಿ ವತಿಯಿಂದ ಮಹಿಳಾ ದಸರಾ ಅಂಗವಾಗಿ ಮಹಿಳೆಯರಿಗೋಸ್ಕರ ವೈವಿಧ್ಯಮಯ ಸ್ಪರ್ಧಾ ಕಾರ್ಯಕ್ರಮ ಹಾಗೂ ಮಹಿಳೆಯರಿಂದಲೇ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿತು.
ಮಹಿಳಾ ದಸರಾ ಸ್ಪರ್ಧೆಗಳನ್ನು ಗಾಂಧಿ ಮೈದಾನದಲ್ಲಿ ಕಲಾಸಂಭ್ರಮ ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಸ್ವತಃ ಮೆಹಂದಿ ಹಾಕಿಸಿಕೊಳ್ಳುವ ಮೂಲಕ ಉದ್ಘಾಟಿಸಿ ಮಾತನಾಡಿ, ಭಾರತೀಯ ಸಂಸ್ಕøತಿಯಲ್ಲಿ ಮಹಿಳೆಯರಿಗೆ ಪೂಜ್ಯ ಭಾವನೆಗಳಿವೆ. ಮಹಿಳೆಯರು ಕೂಡ ಆ ಭಾವನೆಯಿಂದಲೇ ಸಮಾಜದಲ್ಲಿ ನಡೆದುಕೊಳ್ಳಬೇಕು. ಮಹಿಳೆಯು ಇಂದು ಸಾಮಾಜಿಕವಾಗಿ, ಆರ್ಥಿಕವಾಗಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಮುಂದುವರೆಯುತ್ತಿದ್ದಾರೆ. ಪುರುಷರು ಕೂಡ ಮಹಿಳೆಯರ ಆಸಕ್ತಿಗನುಗುಣ ಪ್ರೋತ್ಸಾಹ ನೀಡುತ್ತಿದ್ದಾರೆ. ಮಹಿಳೆಯರು ಸಮಾಜದಲ್ಲಿ ಸಿಕ್ಕಿದ ಅವಕಾಶಗಳನ್ನು ಸದುಪಯೋಗಪಡಿಸಿ ಕೊಂಡು ಸಬಲತೆಯನ್ನು ಸಾಧಿಸಬೇಕೆಂದು ಕರೆ ನೀಡಿದ ಅವರು, ಇಂದಿನ ಮಹಿಳಾ ದಸರಾ ಸಂಭ್ರಮದಲ್ಲಿ ಹೆಚ್ಚಿನ ಮಹಿಳೆಯರು ಸೇರದೇ ಇರುವದು ವಿಷಾಧನೀಯ ಎಂದು ಹೇಳಿದರು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ, ಜನೋತ್ಸವದಿಂದ ಸಂತಸ - ಸಂಭ್ರಮ ಸಿಗಲಿದೆ. ಸ್ತ್ರೀ ಶಕ್ತಿ ಹಾಗೂ ಸ್ವಸಹಾಯ ಸಂಘಗಳಿಂದ ಮಹಿಳೆಯರು ಸಶಕ್ತರಾಗುತ್ತಿದ್ದಾರೆ. ಸರ್ಕಾರಗಳು ಕೂಡ ಮಹಿಳೆಯರ ಸಬಲೀಕರಣಕ್ಕೆ ಪ್ರೋತ್ಸಾಹ ನೀಡುತ್ತಿವೆ. ಆದರೆ ಮಹಿಳಾ ದಸರಾ ಸಂಭ್ರಮದಲ್ಲಿ ಬೆರಳೆಣಿಕೆಯ ಮಹಿಳೆಯರು ಸೇರಿರುವದು ವಿಷಾದನೀಯ ಎಂದರು.
ಮಡಿಕೇರಿ ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಮಾತನಾಡಿ, ಹಿಂದೆ ನಾಲ್ಕು
(ಮೊದಲ ಪುಟದಿಂದ) ಗೋಡೆಗಳ ಮಧ್ಯೆ ಇದ್ದ ಮಹಿಳೆಯರು ಇಂದು ಸಮಾಜದ ಮುಖ್ಯ ವಾಹಿನಿಗೆ ಬಂದು ಎಲ್ಲಾ ಕ್ಷೇತ್ರಗಳಲ್ಲೂ ಸಶಕ್ತರಾಗುತ್ತಿದ್ದಾರೆ. ಮಹಿಳೆ ತನ್ನ ಕುಟುಂಬ ಸೇರಿದಂತೆ ಸಮಾಜದಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಿದ್ದಾಳೆ. ಮಹಿಳೆಯರಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಅಗತ್ಯವೆಂದರು.
ನಗರ ಸಭಾಯುಕ್ತೆ ಬಿ.ಬಿ. ಪುಷ್ಪಾವತಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳಾ ದಸರಾ ಸಂಭ್ರಮದಲ್ಲಿ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಮಹಿಳೆಯರಿಂದಲೇ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಆದರೆ ಕಾರ್ಯಕ್ರಮದಲ್ಲಿ ನಿರೀಕ್ಷೆಯ ಪ್ರಮಾಣದಲ್ಲಿ ಮಹಿಳೆಯರು ಭಾಗವಹಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಹಿಳಾ ದಸರಾ ಸಂಭ್ರಮದಲ್ಲಿ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸಿರಿಧಾನ್ಯ ಮೇಳ, ಭಾರತೀಯ ಸಾಂಪ್ರದಾಯಿಕ ಉಡುಗೆ - ತೊಡುಗೆ ಸ್ಪರ್ಧೆ, ಮೆಹಂದಿ ಹಾಕುವ ಸ್ಪರ್ಧೆ, ಏಕ ಪಾತ್ರಾಭಿನಯ ಸ್ಪರ್ಧೆ, ಮಹಿಳಾ ಸಂಘಗಳಿಗೆ ಉತ್ಪನ್ನಗಳ ಪ್ರದರ್ಶನ ಸ್ಪರ್ಧೆ, ವಾಲಗತ್ತಾಟ್ ಸ್ಪರ್ಧೆ, ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಹೊಡೆಯುವ ಸ್ಪರ್ಧೆ, ಸೀರೆಯ ನಿಖರ ಬೆಲೆ ಹೇಳುವದು ಸೇರಿದಂತೆ ವೈವಿಧ್ಯಮಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ಸಮಾರಂಭದ ಅಧ್ಯಕ್ಷೆ ವಹಿಸಿ ಮಹಿಳಾ ದಸರಾ ಸಂಭ್ರಮಕ್ಕೆ ಶುಭ ಕೋರಿದರು. ವೇದಿಕೆಯಲ್ಲಿ ನಗರಸಭಾ ಸದಸ್ಯರಾದ ಐ.ಜಿ. ಶಿವಕುಮಾರ್, ಲಕ್ಷ್ಮಿ ಕುಟ್ಟಪ್ಪ, ಸವಿತಾ ರಾಕೇಶ್, ವೀಣಾಕ್ಷಿ, ತಜುಸ್ಸುಂ ಹಾಗೂ ಇನ್ನಿತರರು ಇದ್ದರು. ನಗರಸಭಾ ಸದಸ್ಯೆ ಲೀಲಾ ಶೇಷಮ್ಮ ಪ್ರಾರ್ಥಿಸಿ, ಸದಸ್ಯೆ ಸಂಗೀತ ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರೆ, ನಗರಸಭಾ ಮಾಜಿ ಅಧ್ಯಕ್ಷೆ ಜುಲೇಕಾಬಿ ವಂದಿಸಿದರು.