ಮಡಿಕೇರಿ, ಅ.7 : ಮಡಿಕೇರಿ ದಸರಾ ಜನೋತ್ಸವ ಸಾಂಸ್ಕøತಿಕ ಸಮಿತಿಯಿಂದ ತಾ. 8 ರಂದು (ಇಂದು) ನಡೆಯುತ್ತಿರುವ ಯುವ ದಸರಾದಲ್ಲಿ 13 ಡ್ಯಾನ್ಸ್ ಟೀಮ್‍ಗಳ ನಡುವೆ ಡ್ಯಾನ್ಸ್ ವಾರ್ ಸ್ಪರ್ಧೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಮ್ ಯುವ ದಸರಾವನ್ನು ಉದ್ಘಾಟಿಸಲಿದ್ದು, ಸಂಸದ ಪ್ರತಾಪ್ ಸಿಂಹ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರುಗಳಾದ ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ, ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಜೇಂದ್ರ ಪ್ರಸಾದ್, ಶಕ್ತಿ ದಿನ ಪತ್ರಿಕೆಯ ಪ್ರಧಾನ ವ್ಯವಸ್ಥಾಪಕ ಜಿ. ಚಿದ್ವಿಲಾಸ್, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ, ಪ್ರಧಾನ ಕಾರ್ಯದರ್ಶಿ ಚುಮ್ಮಿ ದೇವಯ್ಯ, ಖಜಾಂಚಿ ಅನಿತಾ ಪೂವಯ್ಯ ಪಾಲ್ಗೊಳ್ಳಲಿದ್ದಾರೆ.

ಪಾಲ್ಗೊಳ್ಳುವ ನೃತ್ಯ ತಂಡಗಳು

ಡ್ಯಾನ್ಸ್ ವಾರ್ ಸ್ಪರ್ಧೆಯಲ್ಲಿ ಮಡಿಕೇರಿಯ ಡಿ ಕಂಪೆನಿ, ಕೂರ್ಗ್ ಫ್ರಿಕ್ಷನ್ಸ್, ರಿಫ್ಲೆಕ್ಷನ್ಸ್, ರಿ ಬಾರ್ನ್, ರೆಡ್ ವನ್, ಕುಶಾಲನಗರದ ಏಂಜಲ್ ವಿಂಗ್ಸ್, ಡ್ರೀಮ್ ಸ್ಟಾರ್ಸ್, ಸುಂಟಿಕೊಪ್ಪದ ನಾಟಿ ಬಾಯ್ಸ್, ಟೀಮ್ ಆ್ಯಟಿಟ್ಯೂಡ್, ಸೋಮವಾರಪೇಟೆಯ ಡ್ಯಾನ್ಸ್ ವಾರಿಯರ್ಸ್, ಬೆಂಗಳೂರಿನ ರಾಯಲ್ ಮಾಸ್, ಬೈರವ ಡಾನ್ಸ್ ಟೀಮ್, ಮಂಗಳೂರಿನ ಟೀಮ್ ಕುಡ್ಲ ಡ್ಯಾನ್ಸ್ ಟೀಮ್‍ಗಳು ಪಾಲ್ಗೊಳ್ಳುತ್ತಿವೆ. ಇದರೊಂದಿಗೆ ಡಿಜೆ ಕಾರ್ಯಕ್ರಮವೂ ಯುವ ಸಮೂಹವನ್ನು ಆಕರ್ಷಿಸಲಿದೆ. ಮಡಿಕೇರಿಯ ತಾಂಡವಂ, ಮಂಗಳೂರಿನ ಸಿಜ್ಲಿಂಗ್ ಗಯ್ಸ್ ಡಾನ್ಸ್ ಟೀಮ್, ಸುಂಟಿಕೊಪ್ಪದ ಸ್ವಸ್ಥ ವಿಶೇಷ ಶಾಲಾ ಮಕ್ಕಳಿಂದಲೂ ಯುವ ದಸರಾ ಸಂದರ್ಭ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ ಎಂದು ದಸರಾ ಸಾಂಸ್ಕøತಿಕ ಸಮಿತಿ ತಿಳಿಸಿದೆ.

ಸಂಜೆ 6 ಗಂಟೆಯಿಂದ ಮಧ್ಯರಾತ್ರಿಯವರೆಗೂ ಡ್ಯಾನ್ಸ್ ವಾರ್ ಮತ್ತು ಡಿಜೆ ನಡೆಯಲಿದ್ದು, ಎಲ್ಲಾ ಅಗತ್ಯ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಸಮಿತಿ ತಿಳಿಸಿದೆ. ಡ್ಯಾನ್ಸ್ ಸ್ಪರ್ಧೆಯ ವಿಜೇತ ತಂಡಕ್ಕೆ ಪ್ರಥಮ ಬಹುಮಾನವಾಗಿ ರೂ. 25 ಸಾವಿರ, ದ್ವಿತೀಯ ರೂ. 20 ಸಾವಿರ ಮತ್ತು ತೃತೀಯ ಬಹುಮಾನವಾಗಿ ರೂ. 15 ಸಾವಿರ ನಗದು ಹಾಗೂ ಟ್ರೋಫಿಯನ್ನು ನೀಡಲಾಗುತ್ತಿದೆ.