ಮಡಿಕೇರಿ, ಜು. 21: ಕೊಡಗು ಜಿಲ್ಲೆಯ ಕೆಲ ಪ್ರದೇಶಗಳಿಗೆ ಎರಡು ವರ್ಷಗಳ ಹಿಂದೆ ಕಾಲಿರಿಸಿ ಭೀತಿ ಮೂಡಿಸಿದ ಆರೋಪ ಹೊತ್ತಿರುವ ನಕ್ಸಲ್ ಗುಂಪಿಗೆ ಸೇರಿದ ಶಂಕಿತ ವ್ಯಕ್ತಿ ಮಾವೋವಾದಿ ಗುಂಪಿನ ಪ್ರಮುಖ ನಾಯಕ ರೂಪೇಶ್ ಅಲಿಯಾಸ್ ಪ್ರವೀಣ್ ಅಲಿಯಾಸ್ ಪ್ರಕಾಶ್, ಅಲಿಯಾಸ್ ಪ್ರಶಾಂತ್‍ನನ್ನು ಇಂದು ಮಡಿಕೇರಿಯ ಸಿಜೆಎಂ ನ್ಯಾಯಾಲ ಯಕ್ಕೆ ಹಾಜರುಪಡಿಸಲಾಯಿತು.ಪೊಲೀಸ್ ಇಲಾಖೆಯ ವಾಹನದಲ್ಲಿ ಬಿಗಿ ಬಂದೋಬಸ್ತ್ ನೊಂದಿಗೆ ಕೋಯಂಬತ್ತೂರು ಕೇಂದ್ರ ಕಾರಾಗೃಹ ದಿಂದ ಇಂದು ಬೆಳಿಗ್ಗೆ 5.30 ಗಂಟೆಗೆ ಹೊರಟು ಮಧ್ಯಾಹ್ನ ಸುಮಾರು 12.45 ಗಂಟೆ ವೇಳೆಗೆ ಮಡಿಕೇರಿ ನ್ಯಾಯಾಲಯಕ್ಕೆ ರೂಪೇಶ್‍ನನ್ನು ಕರೆ ತರಲಾಯಿತು. ವಾಹನದಿಂದ ಇಳಿಯುತ್ತಿದ್ದಂತೆ ‘ನಕ್ಸಲ್ ಬಾರಿ ಜಿಂದಾಬಾದ್; ಮಾವೋಯಿಸ್ಟ್ ಜಿಂದಾಬಾದ್; ಮಾವೋಯಿಸ್ಟ್‍ಗಳು ದೇಶಭಕ್ತರು’ ಎಂಬ ಘೋಷಣೆ ಕೂಗುತ್ತಾ ಇಳಿದ ರೂಪೇಶ್‍ನನ್ನು ನ್ಯಾಯಾಲಯದೊಳಕ್ಕೆ ಬಂದೋಬಸ್ತ್‍ನಲ್ಲಿ ಕರೆದೊಯ್ಯ ಲಾಯಿತು.ನಂತರ ಅಲ್ಲಿ ರೂಪೇಶ್ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಯಿತು. ಬಳಿಕ ಸುದ್ದಿಗಾರ ರೊಂದಿಗೆ ರೂಪೇಶ್ ಪರ ವಕೀಲ ವಿದ್ಯಾಧರ್ ಅವರು ಮಾತನಾಡಿ, ಈಗಾಗಲೇ ಚಾರ್ಜ್ ಶೀಟ್ ಸಲ್ಲಿಸಲಾಗಿದ್ದು, ವಿಚಾರಣೆಗಾಗಿ ಸಿಜೆಎಂ ನ್ಯಾಯಾಲಯದಿಂದ ಸೆಷನ್ಸ್ ನ್ಯಾಯಾಲಯಕ್ಕೆ ‘ಕಮಿಟಲ್’ ಆದೇಶ ಬರಬೇಕಿದೆ. ಹದಿನೈದು ದಿನದೊಳಗೆ ಈ ಆದೇಶ ಬರಲಿದ್ದು, ಬಳಿಕ ಪ್ರಕರಣದ ವಿಚಾರಣೆ ಸೆಷನ್ಸ್ ನ್ಯಾಯಾಲಯದಲ್ಲಿ ಮುಂದುವರೆ ಯಲಿದೆ ಎಂದು ತಿಳಿಸಿದರು.

ರಾಜಕೀಯ ಖೈದಿಯಾಗಿ ಪರಿಗಣಿಸಿ

ಈ ನಡುವೆ ರೂಪೇಶ್‍ನನ್ನು ‘ರಾಜಕೀಯ ಖೈದಿ’ ಎಂದು ಪರಿಗಣಿಸಲು ನ್ಯಾಯಾಧೀಶರೆದುರು ವಕೀಲರು ಮನವಿ ಮಾಡಿದರು. ಈ ಸಂದರ್ಭ ಸಿಜೆಎಂ ನ್ಯಾಯಾಧೀಶ ರಾದ ಶ್ರೀಕಾಂತ್ ಅವರು ರೂಪೇಶ್ ನನ್ನು ರಾಜಕೀಯ ಖೈದಿ ಎಂದು ಪರಿಗಣಿಸುವ ನಿಟ್ಟಿನಲ್ಲಿ ಸೆಷನ್ಸ್ ನ್ಯಾಯಾಲಯದಲ್ಲಿ ಮನವಿ ಮಾಡುವಂತೆ ಸೂಚಿಸಿರುವದಾಗಿ ವಿದ್ಯಾಧರ್ ಮಾಹಿತಿಯಿತ್ತರು. ‘ರಾಜಕೀಯ ಖೈದಿ’ ಎಂದು ರೂಪೇಶ್ ಒಂದುವೇಳೆ ನ್ಯಾಯಾಲಯದಿಂದ ಪರಿಗಣಿಸಲ್ಪಟ್ಟರೆ ಆತನಿಗೆ ಕೆಲ ಸವಲತ್ತುಗಳನ್ನು ಕಾರಾಗೃಹದಲ್ಲಿ ಒದಗಿಸಲಾಗುತ್ತದೆ.

ರೂಪೇಶ್ ಹೊತ್ತಿರುವ ಆರೋಪ

ಕೇರಳದ ಕೊಚ್ಚಿನ್‍ನ ರಾಮಚಂದ್ರ ಎಂಬವರ ಪುತ್ರನಾಗಿರುವ ರೂಪೇಶ್ 2013ರ ಮೇ ತಿಂಗಳಿನಲ್ಲಿ ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದ್ದ. ಅಲ್ಲಿ ಈತನ ವಿರುದ್ಧ ಸೆಕ್ಷನ್ 143, 144, 147, 342, 506, ಖ/ತಿ 149 ಐಪಿಸಿ ಸೆಕ್ಷನ್ 3 ಹಾಗೂ 25 ರಂತೆ ಭಾರತೀಯ ಬಂದೂಕು ಕಾಯ್ದೆ ಸೆಕ್ಷನ್ 20, 1967ರಂತೆ ಕಾನೂನು ಬಾಹಿರ ಚಟುವಟಿಕೆಯಂತೆ ಪ್ರಕರಣ ದಾಖಲಾಗಿದೆ.

ಚೇರಂಗಾಲದಲ್ಲಿ ವ್ಯಕ್ತಿಯೊಬ್ಬರ ಮನೆಗೆ ತೆರಳಿದ್ದ ರೂಪೇಶ್ ಮತ್ತು ತಂಡ ಊಟ ಪಡೆದು ತಿಂದು 50 ಕೆ.ಜಿ. ಅಕ್ಕಿ ನೀಡುವಂತೆ ಒತ್ತಾಯಿಸಿ ದ್ದರು. ವಿಷಯವನ್ನು ಯಾರಿಗೂ ಬಾಯಿ ಬಿಡದಂತೆ ಎಚ್ಚರಿಸಿ ಬಾಯಿಬಿಟ್ಟರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದರು. ಈ ಬಗ್ಗೆ ಪೊಲೀಸ್ ದೂರು ದಾಖಲಾಗಿತ್ತು. ಭಾಗಮಂಡಲ ಪ್ರಕರಣ ಮಾತ್ರವಲ್ಲದೆ ಶ್ರೀಮಂಗಲ, ಮಡಿಕೇರಿ ಗ್ರಾಮಾಂತರ, ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಸೇರಿದಂತೆ ಒಟ್ಟು ಐದು ಪ್ರಕರಣಗಳಿವೆ. ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಕರೀಂ ರಾವ್‍ತರ್, ನಕ್ಸಲ್ ನಿಗ್ರಹದಳದ ನಿರೀಕ್ಷಕ ಸಿದ್ದೇಗೌಡ ಸೇರಿದಂತೆ ಕೊಡಗು, ಕಾರ್ಕಳ ನಕ್ಸಲ್ ನಿಗ್ರಹದಳದ ಸಿಬ್ಬಂದಿ, ಕೊಡಗು ಪೊಲೀಸ್ ಸಿಬ್ಬಂದಿಗಳ ಬಂದೋ ಬಸ್ತ್‍ನೊಂದಿಗೆ ರೂಪೇಶ್‍ನನ್ನು ಕರೆ ತರಲಾಗಿತ್ತು.