ಶನಿವಾರಸಂತೆ, ಅ. 10: ಪಟ್ಟಣ ಸುಪ್ರಜ ಗುರುಕುಲದಲ್ಲಿ ಮಕ್ಕಳ ಪ್ರಗತಿಪತ್ರ ವಿತರಣೆ ಹಾಗೂ ಮಕ್ಕಳ ಮಾರುಕಟ್ಟೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅರ್ಧ ವಾರ್ಷಿಕ ಪರೀಕ್ಷೆಗಳು ಮುಗಿದಿದ್ದು, ಪೋಷಕರ ಸಮ್ಮುಖದಲ್ಲಿ ಮಕ್ಕಳ ಪ್ರಗತಿಪತ್ರ ವಿತರಿಸಲಾಯಿತು.
ಬಳಿಕ 2ನೇ ತರಗತಿಯ ವಿದ್ಯಾರ್ಥಿಗಳಿಂದ ಮಕ್ಕಳ ಮಾರುಕಟ್ಟೆ ಕಾರ್ಯಕ್ರಮ ನಡೆಯಿತು. ಮಕ್ಕಳು ತಮ್ಮ ಮನೆಗಳಲ್ಲಿ ತಯಾರಿಸಿದ ತಿಂಡಿ - ತಿನಿಸುಗಳು, ಹಿತ್ತಲಲ್ಲಿ ಬೆಳೆದಿದ್ದ ತರತರದ ತರಕಾರಿ, ಹಣ್ಣು - ಹಂಪಲು ಮತ್ತು ಗುಡಿ ಕೈಗಾರಿಕಾ ವಸ್ತುಗಳನ್ನು ತಂದು ಮಾರಾಟ ಮಾಡಿದರು. ಪೋಷಕರು ಸಂತಸದಿಂದ ವ್ಯಾಪಾರ ಮಾಡಿ, ಮಕ್ಕಳ ವ್ಯಾವಹಾರಿಕ ಜಾಣ್ಮೆಗೆ ತಲೆದೂಗಿದರು. ಈ ಸಂದರ್ಭ ಗುರುಕುಲದ ಮುಖ್ಯ ಶಿಕ್ಷಕಿ ಸುಜಲಾ ದೇವಿ ಮಾತನಾಡಿ, ಮಕ್ಕಳಲ್ಲಿ ಪಾಠ - ಪ್ರವಚನ, ಕ್ರೀಡೆಯೊಂದಿಗೆ ವ್ಯವಹಾರ ಜ್ಞಾನದ ಅರಿವು ಮೂಡಿಸುವ ದೃಷ್ಟಿಯಿಂದ ಆಗಾಗ್ಗೆ ಒಂದೊಂದೇ ತರಗತಿಯ ವಿದ್ಯಾರ್ಥಿಗಳಿಗೆ ಮಕ್ಕಳ ಮಾರುಕಟ್ಟೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಪೋಷಕರೂ ತಪ್ಪದೆ ಹಾಜರಾಗುತ್ತಾರೆ ಎಂದರು. ಗುರುಕುಲದ ಕಾರ್ಯದರ್ಶಿ ಗುರುಪ್ರಸಾದ್ ಹಾಗೂ ಶಿಕ್ಷಕ ವೃಂದದವರು ಹಾಜರಿದ್ದರು.