ಮಡಿಕೇರಿ, ಅ. 24: ಮಕ್ಕಳ ಮೇಲೆ ಒತ್ತಡ ಹೇರುವ ಬದಲು ಅವರ ಆಸಕ್ತಿಯ ಶಿಕ್ಷಣ ಕ್ಷೇತ್ರವನ್ನು ಗುರುತಿಸಿ ಪ್ರೋತ್ಸಾಹಿಸುವದು ಸೂಕ್ತವೆಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಅಭಿಪ್ರಾಯಪಟ್ಟಿದ್ದಾರೆ.ಕೊಡಗು ಗೌಡ ವಿದ್ಯಾಸಂಘದ ವತಿಯಿಂದ ನಗರದ ಮೇಲಿನ ಗೌಡ ಸಮಾಜ ಸಭಾಂಗಣದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳನ್ನು ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣಕ್ಕೆ ಸೇರಿಸಬೇಕೆನ್ನುವ ನಿರೀಕ್ಷೆಯಂತೆ ಪೋಷಕರು ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರುವದು ಸಮಂಜಸವಲ್ಲ. ಇದಕ್ಕೆ ಬದಲಾಗಿ ಅವರ ಆಸಕ್ತಿಯ ವಿಷಯವನ್ನು ಅರಿತು ಪ್ರೋತ್ಸಾಹಿಸುವ ಮೂಲಕ ಬೆಳವಣಿಗೆಗೆ ಕಾರಣರಾಗಬೇಕೆಂದು ಕರೆ ನೀಡಿದರು.
ಶಿಕ್ಷಣ ಪಡೆದವರೆಲ್ಲರಿಗೂ ಸರ್ಕಾರಿ ಕೆಲಸ ದೊರಕಬೇಕೆನ್ನುವದು ಸರಿಯಲ್ಲ. ಇದಕ್ಕೆ ಬದಲಾಗಿ ವಿವಿಧ ಶಿಕ್ಷಣ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿರುವದು ಸ್ವಯಂ ಉದ್ಯೋಗಗಳ ಮೂಲಕ ಕೊಡಗಿನಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿದೆ. ಕೇಂದ್ರ ಸರ್ಕಾರದ ತಮ್ಮ ಬೆಳವಣಿಗೆಗೆ ಪೂರಕವಾಗಿ ಬಳಸಿ ಕೊಳ್ಳಬೇಕೆಂದು ಕರೆ ನೀಡಿದ ಅವರು ಸಮುದಾಯದ ಬಡವರ್ಗದ ಮಕ್ಕಳ ಶಿಕ್ಷಣಕ್ಕೆ ಅಗತ್ಯ
(ಮೊದಲ ಪುಟದಿಂದ) ನೆರವನ್ನು ಒದಗಿಸಬೇಕೆಂದರು. ಅಧ್ಯಕ್ಷತೆ ವಹಿಸಿದ್ದ ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಮಾತನಾಡಿ, ವಿದ್ಯಾಸಂಘದಿಂದ ಈ ಬಾರಿ 120ಕ್ಕೂ ಹೆಚ್ಚಿನ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸಿ ಪ್ರೋತ್ಸಾಹಿಸಲಾಗಿದೆ ಎಂದರು. ಈ ಕಾರ್ಯವನ್ನು 1981ರಿಂದ ನಡೆಸಿಕೊಂಡು ಬರಲಾಗುತ್ತಿದ್ದು, ವಿದ್ಯಾಸಂಘದ ನಿಧಿಯಲ್ಲಿ ಕೇವಲ 6.50 ಲಕ್ಷ ರೂ.ಗಳಷ್ಟೆ ಹಣವಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಸಮುದಾಯ ಬಾಂಧವರು ಉದಾರ ಮನಸ್ಸಿನಿಂದ ನೆರವನ್ನು ನೀಡಬೇಕೆಂದು ಮನವಿ ಮಾಡಿದರು. ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರನ್ನು ಮುಂದಕ್ಕೆ ತರುವದೇ ಸಂಘದ ಪ್ರಮುಖ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಉಳ್ಳವರು ನೆರವನ್ನು ಒದಗಿಸಿದರೆ, ಇಲ್ಲದವರ ಬೆಳವಣಿಗೆಯನ್ನು ಸಾಧ್ಯವಾಗಿಸಬಹುದು. ವಿದ್ಯಾಸಂW Àದಿಂದ ನೆರವು ಪಡೆದು ಉನ್ನತ ಹುದ್ದೆಗಳಲ್ಲಿ ಇರುವದು ಸಾಕಷ್ಟು ಮಂದಿ ಇದ್ದು, ಇಂತಹವದು ಸಮುದಾಯದ ಬಡ ವಿದ್ಯಾರ್ಥಿಗಳ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಮುಂದಾಗಬೇಕೆಂದು ಕರೆ ನೀಡಿದರು.
ಪ್ರತಿಭಾ ಪುರಸ್ಕಾರ
ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿಯಲ್ಲಿ ಶೇ. 85ಕ್ಕೂ ಹೆಚ್ಚಿನ ಅಂಕ ಪಡೆದ ಗ್ರಾಮೀಣ ಮತ್ತು ನಗರ ಪ್ರದೇಶಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಿಇಟಿಯಲ್ಲಿ ಸಾವಿರದ ಒಳಗೆ ರ್ಯಾಂಕ್ ಪಡೆದ ಪೊನ್ನಚ್ಚನ ಪ್ರತಿಭಾ, ಕುಯ್ಯಮುಡಿ ವೃಂದ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ದಾನಿಗಳಾದ ಪರ್ಲಕೋಟಿ ಗೋಪಾಲಕೃಷ್ಣ, ಕಾಫಿ ಬೆಳೆಗಾರರಾದ ಅಮೆ ದೇವಪ್ಪ ಮತ್ತು ತಳೂರು ಪಾಂಡುರಂಗ ಅವರು ಪುರಸ್ಕರಿಸಿ ಪ್ರೋತ್ಸಾಹಿಸಿದರು. ಇದೇ ಸಂದರ್ಭ ಸ್ವಾತಂತ್ರ್ಯೋತ್ಸವದ ಸಂದರ್ಭ ಆಯೋಜಿತ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ಗಳನ್ನು ವಿತರಿಸಲಾಯಿತು.
ವಾಣಿಜ್ಯ ವಿಷಯದ ಅಕೌಂಟೆನ್ಸಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದ ಗುಡ್ಡೆಮನೆ ಪುನಿತ್, ಯೋಗದಲ್ಲಿ ಉನ್ನತ ಸಾಧನೆ ಮಾಡುತ್ತಿರುವ ಚೆರಿಯಮನೆ ಸಂತೋಷ್, ಶಿಕ್ಷಣ ಕ್ಷೇತ್ರದ ಸಾಧಕಿ ಪುದಿಯನೆರವನ ರೇವತಿ ರಮೇಶ್ ಅವರನ್ನು ಇದೇ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ವಿದ್ಯಾಸಂಘದ ಖಜಾಂಚಿ ಪೊನ್ನಚ್ಚನ ಜಿ. ಸೋಮಣ್ಣ ಉಪಸ್ಥಿತರಿದ್ದರು. ಕೋಚನ ವಚನ ಪ್ರಾರ್ಥಿಸಿದರೆ, ಸಂಘದ ಕಾರ್ಯದರ್ಶಿ ಸೂದನ ಎಸ್. ಈರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಉಪಾಧ್ಯಕ್ಷ ಅಂಬೆಕಲ್ಲು ನವೀನ್ ಕುಶಾಲಪ್ಪ ವಂದಿಸಿದರು.