ಸೋಮವಾರಪೇಟೆ, ಸೆ. 22: ಮಕ್ಕಳು, ಬಾಣಂತಿಯರು ಮತ್ತು ಕಿಶೋರಿಯರಿಗೆ ಸ್ತ್ರೀಶಕ್ತಿ ಸಂಘದ ವತಿಯಿಂದ ಸರಬರಾಜು ಮಾಡುತ್ತಿರುವ ಆಹಾರ ಉತ್ಪನ್ನಗಳ ಗುಣಮಟ್ಟ ಕಳಪೆಯಾಗಿದೆ. ಇದರಿಂದ ಆರೋಗ್ಯದಲ್ಲೂ ಏರುಪೇರು ಉಂಟಾಗಿದೆ ಎಂಬ ಗಂಭೀರ ಆರೋಪ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕೇಳಿಬಂತು.

ತಾ.ಪಂ. ಅಧ್ಯಕ್ಷೆ ಪುಷ್ಪ ರಾಜೇಶ್ ಅಧ್ಯಕ್ಷತೆಯಲ್ಲಿ ತಾ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿದ ಸದಸ್ಯ ಬಿ.ಬಿ. ಸತೀಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಸ್ತ್ರೀ ಶಕ್ತಿ ಸಂಘಗಳ ಮೂಲಕ ವಿತರಿಸುತ್ತಿರುವ ಆಹಾರ ಕಳಪೆ ಗುಣಮಟ್ಟದ್ದಾಗಿದೆ ಎಂದು ಆರೋಪಿಸಿ, ಸಭೆಯಲ್ಲಿಯೇ ಆಹಾರ ಉತ್ಪನ್ನಗಳ ಪೊಟ್ಟಣವನ್ನು ಪ್ರದರ್ಶಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್, ಇಲಾಖೆಯ ವತಿಯಿಂದ ವಿತರಿಸ ಲಾಗುತ್ತಿರುವ ಉತ್ಪನ್ನಗಳನ್ನು ಪರಿಶೀಲಿಸಲು ಮೈಸೂರಿನಲ್ಲಿರುವ ಆಹಾರ ವಿಜ್ಞಾನ ಸಂಸ್ಥೆಗೆ ಕಳುಹಿಸ ಲಾಗುವದು. ಅಲ್ಲಿಂದ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವದು ಎಂದು ಸಭೆಗೆ ತಿಳಿಸಿದರು.

ತಾಲೂಕು ಪಂಚಾಯಿತಿ ಸಭೆಯಲ್ಲಿ ಕೈಗೊಳ್ಳುವ ನಿರ್ಣಯಗಳು ಯಾವದೂ ಕಾರ್ಯರೂಪಕ್ಕೆ ಬರುತ್ತಿಲ್ಲ. ಕಾಟಾಚಾರಕ್ಕೆ ಸಭೆ ನಡೆಸುವದರ ಔಚಿತ್ಯವೇನು? ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷರು ಸೇರಿದಂತೆ ಸರ್ವ ಸದಸ್ಯರು ಕಾರ್ಯ ನಿರ್ವಹಣಾಧಿಕಾರಿಯವರನ್ನು ತರಾಟೆಗೆ ತೆಗೆದುಕೊಂಡರು.

ಕಳೆದ ಹಲವು ಸಾಮಾನ್ಯ ಸಭೆಗಳಲ್ಲಿ ತೆಗೆದುಕೊಳ್ಳಲಾದ ನಿರ್ಣಯಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ಗೈರು ಹಾಜರಾಗುತ್ತಿರುವ ಅಧಿಕಾರಿಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಇಲ್ಲಸಲ್ಲದ ಸಬೂಬು ಹೇಳಿ ಸಭೆಯನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಕಾರ್ಯ ನಿರ್ವಹಣಾಧಿಕಾರಿಗಳು ಎಚ್ಚರಿಕೆ ವಹಿಸಬೇಕೆಂದು ಸರ್ವ ಸದಸ್ಯರು ಸಭೆಯಲ್ಲಿ ತಿಳಿಸಿದರು.

ತಾಲೂಕಿನ ಸಜ್ಜಳ್ಳಿ ಗಿರಿಜನ ಹಾಡಿ ಹಾಗೂ ಬೆಂಡೆಬೆಟ್ಟ ಗಿರಿಜನ ಕಾಲೋನಿಯಲ್ಲಿ ಕಳೆದೆರಡು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ತಕ್ಷಣವೇ ಪರಿಹರಿಸಬೇಕೆಂದು ಸದಸ್ಯರಾದ ಸಬಿತಾ ಚನ್ನಕೇಶವ ಮತ್ತು ಜಯಣ್ಣ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಅಭಿಯಂತರ ವೀರೇಂದ್ರ ಮುಂದಿನ ಒಂದು ತಿಂಗಳೊಳಗಾಗಿ ಸಮಸ್ಯೆಯನ್ನು ಪರಿಹರಿಸುವದಾಗಿ ತಿಳಿಸಿದರು.

ತಾಲೂಕಿನಲ್ಲಿರುವ ಶೇಕಡ 90ರಷ್ಟು ಮಾಂಸ ಮಾರಾಟದ ಮಳಿಗೆಗಳು ಶುಚಿತ್ವವನ್ನು ಕಾಪಾಡುತ್ತಿಲ್ಲ. ಒಂದೆಡೆ ಸ್ವಚ್ಛ ಭಾರತದಲ್ಲಿ 11ನೇ ಸ್ಥಾನವನ್ನು ಕೊಡಗು ಜಿಲ್ಲೆ ಪಡೆದುಕೊಂಡಿದೆ. ಆದರೆ ಮಾಂಸದ ತ್ಯಾಜ್ಯಗಳನ್ನು ವರ್ತಕರು ಹೊಳೆಗೆ ಬಿಡುತ್ತಿದ್ದಾರೆ ಎಂದು ಸದಸ್ಯರಾದ ಅನಂತ ಕುಮಾರ್ ಸಭೆಯ ಗಮನ ಸೆಳೆದರು.

ಸೋಮವಾರಪೇಟೆ ಪಟ್ಟಣದ ವಿವೇಕಾನಂದ ವೃತ್ತದ ಬಳಿ ಇರುವ ಮಾಂಸದ ಮಳಿಗೆಯಿಂದ ತ್ಯಾಜ್ಯಗಳನ್ನು ಕಕ್ಕೆಹೊಳೆಗೆ ಬಿಡಲಾಗುತ್ತಿದೆ ಎಂದು ಉಪಾಧ್ಯಕ್ಷರಾದ ಅಭಿಮನ್ಯು ಕುಮಾರ್ ಹೇಳಿದರು. ಕುರಿ ಮಾಂಸ ಮಾರುವ ವರ್ತಕರು ಪಶುವೈದ್ಯ ಇಲಾಖೆಯ ವೈದ್ಯರಿಂದ ದೃಢೀಕರಣ ಪಡೆಯುತ್ತಿಲ್ಲ. ಕಳಪೆ ಗುಣಮಟ್ಟದ ಮತ್ತು ಹಳೆಯ ಮಾಂಸಗಳನ್ನು ಮಾರಾಟ ಮಾಡುತ್ತಿರುವ ದೂರುಗಳು ಕೇಳಿ ಬರುತ್ತಿವೆ ಎಂದು ಕೆಲ ಸದಸ್ಯರು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಸರ್ವ ಸದಸ್ಯರ ಅಭಿಪ್ರಾಯದಂತೆ ತಾಲೂಕಿನಾದ್ಯಂತ ಎಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮಾಂಸ ಮತ್ತು ಮೀನು ಮಾರಾಟಗಾರರು ಗಾಜಿನ ಪೆಟ್ಟಿಗೆಯೊಳಗೆ ಇರಿಸಿ ನೊಣಗಳು ಬಾರದಂತೆ ಎಚ್ಚರಿಕೆ ವಹಿಸಿ ಮಾರಾಟ ಮಾಡಬೇಕೆಂದು ಸೂಚಿಸಿದರು. ಈ ಸೂಚನೆಯನ್ನು ಸೆಪ್ಟೆಂಬರ್ 23ರಿಂದಲೇ ಕಡ್ಡಾಯವಾಗಿ ಪಾಲಿಸಬೇಕೆಂದು ಕಾರ್ಯನಿರ್ವಹಣಾಧಿಕಾರಿ ಪಂಚಾಯಿತಿಯ ಮುಖ್ಯಾಧಿಕಾರಿ ಹಾಗೂ ಗ್ರಾಮ ಪಂಚಾಯಿತಿಯ ಅಭಿವೃದ್ಧಿಯ ಅಧಿಕಾರಿಗಳಿಗೆ ತಿಳಿಸಿದರು. ಇದಕ್ಕೆ ಸಂಬಂಧಿಸಿದ ಸುತ್ತೋಲೆಯನ್ನು 40 ಗ್ರಾಮ ಪಂಚಾಯಿತಿಗಳಿಗೂ ನೀಡಲಾಗುವದು ಎಂದು ಸಭೆಗೆ ತಿಳಿಸಿದರು.

ತಾಲೂಕು ಪಂಚಾಯಿತಿ ಆವರಣದಲ್ಲಿರುವ ಸ್ತ್ರೀ ಶಕ್ತಿ ಭವನದ ಉದ್ಘಾಟನೆಗೆ ತಾಲೂಕು ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಆಹ್ವಾನಿಸಿಲ್ಲ. ಶಿಷ್ಟಾಚಾರವನ್ನು ಪಾಲಿಸಲಾಗಿಲ್ಲ. ತರಾತುರಿಯಲ್ಲಿ ಉದ್ಘಾಟಿಸುವ ಅವಶ್ಯಕತೆ ಏನಿತ್ತು? ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸರಳಾಮಣಿ ಅವರನ್ನು ಎಲ್ಲಾ ಸದಸ್ಯರು ತೀವ್ರ ತರಾಟೆಗೆ ತೆಗೆದುಕೊಂಡರು.

ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ವಸತಿ ನಿಲಯಗಳಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿದೆ. ಶನಿವಾರಸಂತೆಯ ವಸತಿ ನಿಲಯದಲ್ಲಿ 7 ವಿದ್ಯಾರ್ಥಿಗಳಿದ್ದರೂ 27 ವಿದ್ಯಾರ್ಥಿಗಳ ಲೆಕ್ಕ ತೋರಿಸುತ್ತಿದ್ದಾರೆ. ಮೇಲ್ವಿಚಾರಕರು ಮತ್ತು ಅಡುಗೆಯವರು ವಸತಿ ನಿಲಯದಲ್ಲಿ ಹಾಜರಿರುವದಿಲ್ಲ. ಶನಿವಾರಸಂತೆಯ ಮಸೀದಿಯೊಂದರಿಂದ ವಿದ್ಯಾರ್ಥಿಗಳನ್ನು ಕರೆತಂದು ಹಾಜರಾತಿ ಪುಸ್ತಕಕ್ಕೆ ಪ್ರತಿನಿತ್ಯ ಸಹಿ ಹಾಕಿಸಿಕೊಳ್ಳುತ್ತಿದ್ದಾರೆ ಎಂದು ಸದಸ್ಯರಾದ ಅನಂತಕುಮಾರ್, ಬಿ.ಬಿ. ಸತೀಶ್, ಕುಶಾಲಪ್ಪ, ಮಣಿ ಉತ್ತಪ್ಪ, ತಂಗಮ್ಮ ಆರೋಪಿಸಿದರು. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವದಾಗಿ ಇಲಾಖೆಯ ಸಹಾಯಕ ನಿರ್ದೇಶಕ ರಾಮೇಗೌಡ ಸಭೆಗೆ ತಿಳಿಸಿದರು.

ಅರಣ್ಯ ಇಲಾಖೆಯವರು ರಸ್ತೆ ಬದಿಯಲ್ಲಿ ನೆಡುತ್ತಿರುವ ಗಿಡಗಳನ್ನು ರಕ್ಷಣೆ ಮಾಡುತ್ತಿಲ್ಲ. ನಿರ್ವಹಣೆಗೆ ಸಾಕಷ್ಟು ಹಣವಿದ್ದರೂ ಅದನ್ನು ಬಳಸಲಾಗುತ್ತಿಲ್ಲ. ಪರಿಸರವನ್ನು ರಕ್ಷಿಸಬೇಕಾದ ಅರಣ್ಯ ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸುತ್ತಿಲ್ಲ ಎಂದು ಉಪಾಧ್ಯಕ್ಷರಾದ ಎಂ.ಬಿ. ಅಭಿಮನ್ಯು ಕುಮಾರ್ ಆರೋಪಿಸಿದರು. ವೇದಿಕೆಯಲ್ಲಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಧರ್ಮಪ್ಪ ಉಪಸ್ಥಿತರಿದ್ದರು.