ಸೋಮವಾರಪೇಟೆ, ಆ. 16: ಮಕ್ಕಳಿಗೆ ವಿದ್ಯಾಭ್ಯಾಸದೊಂದಿಗೆ ಉತ್ತಮ ಸಂಸ್ಕಾರಗಳನ್ನು ಕಲಿಸುವ ಮೂಲಕ ಸಮಾಜದ ಆಸ್ತಿಯನ್ನಾಗಿಸಿ, ಸಮಾಜಪರ ಸೇವೆಗಳಲ್ಲಿ ತೊಡಗಿಸಿ ಕೊಳ್ಳುವಂತೆ ಮಾಡಬೇಕೆಂದು ಬಿಲ್ಲವ ಸಮಾಜದ ಜಿಲ್ಲಾಧ್ಯಕ್ಷ ಆನಂದ ರಘು ಕರೆ ನೀಡಿದರು.
ತಾಲೂಕು ಶ್ರೀ ನಾರಾಯಣಗುರು ಸೇವಾ ಸಮಿತಿಯು ತುಳುನಾಡ ಸಿರಿ ಬಿಲ್ಲವ ಮಹಿಳಾ ಸಂಘದ ಸಹಯೋಗದೊಂದಿಗೆ ಇಲ್ಲಿನ ಜಾನಕಿ ಕನ್ವೆನ್ಷನ್ ಹಾಲ್ನಲ್ಲಿ ಆಯೋಜಿಸಿದ್ದ ಆಟಿ ಸಂಭ್ರಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ. ವಿಜಯ ಮಾತನಾಡಿ, ಸಮಾಜದ ನಿಂದನೆ, ತುಳಿತಕ್ಕೆ ಒಳಗಾಗಿದ್ದ ಹಿಂದುಳಿದ ವರ್ಗಕ್ಕೂ ಸಮಾನತೆಯನ್ನು ದೊರಕಿಸಿಕೊಟ್ಟ ಶ್ರೀ ನಾರಾಯಣ ಗುರುಗಳು ಬಡ ಹಾಗೂ ಕೆಳವರ್ಗ ದವರ ಆಶಾಕಿರಣವಾಗಿದ್ದಾರೆ. ಅವರ ತತ್ವಾದÀರ್ಶಗಳನ್ನು ಎಲ್ಲರೂ ಪಾಲಿಸುವಂತಾಗಬೇಕೆಂದರು.
ಜಾನಕಿ ಕನ್ವೆನ್ಷನ್ ಹಾಲ್ ಮಾಲೀಕರಾದ ಬಿ.ಎಸ್. ಸುಂದರ್ ಮಾತನಾಡಿ, ಇಲ್ಲಿನ ಸಂಘವು ನಡೆಸುವ ಕಾರ್ಯಕ್ರಮಗಳು ಸಮಾಜದ ಸಂಘಟನೆಗೆ ಏಳಿಗೆಗೆ ಪೂರಕವಾಗಿದೆ. ಸಂಘದ ಬೆಳವಣಿಗೆಗೆ ಸರ್ವರ ಸಹಕಾರ ಅಗತ್ಯ ಎಂದರು.
ಮತ್ತೋರ್ವ ಅತಿಥಿ ಬಿಲ್ಲವ ಸಮಾಜದ ಜಿಲ್ಲಾ ಖಜಾಂಚಿ ಮೋಹನ್ ಮಾತನಾಡಿ, ಜಿಲ್ಲಾ ಸಂಘದ ಅಧೀನದಲ್ಲಿ ಆಯೋಜಿಸುವ ವಾರ್ಷಿಕ ಕ್ರೀಡಾಕೂಟವು ಈ ಬಾರಿ ಬಿಲ್ಲವ ಸಮಾಜ, ಸುಂಟಿಕೊಪ್ಪದ ಹೋಬಳಿ ಘಟಕದ ಆತಿಥ್ಯದಲ್ಲಿ ನಡೆಯಲಿದೆ. ಕ್ರೀಡಾಕೂಟ ಸಮಾರಂಭದಲ್ಲಿ ಜಿಲ್ಲೆಯಲ್ಲಿ ನೆಲೆಸಿರುವ ಪ್ರತಿಯೊಬ್ಬ ಸಮಾಜ ಬಂಧುಗಳು ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಬೇಕಾಗಿ ಮನವಿ ಮಾಡಿದ ಅವರು, ಇದೊಂದು ಸಮಾಜದ ಸಮ್ಮೇಳನವಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸೋಮವಾರಪೇಟೆ ನಾರಾಯಣಗುರು ಸೇವಾ ಸಮಿತಿ ಅಧ್ಯಕ್ಷ ಎನ್.ಡಿ. ಕೃಷ್ಣಪ್ಪ, ಸುಂಟಿಕೊಪ್ಪ ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ. ಮಣಿ ಮುಖೇಶ್ ಮಾತನಾಡಿದರು. ವೇದಿಕೆಯಲ್ಲಿ ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜ ರವಿ, ನಾರಾಯಣಗುರು ಸೇವಾ ಸಮಿತಿಯ ಮಾಜಿ ಅಧ್ಯಕ್ಷ ಬಿ.ಆರ್. ಚಂದ್ರಹಾಸ್, ಮಹಿಳಾ ಘಟಕದ ಅಧ್ಯಕ್ಷೆ ಬೇಬಿ ಚಂದ್ರಹಾಸ್, ಮಾಜಿ ಅಧ್ಯಕ್ಷೆ ನೇತ್ರಾವತಿ ಸೋಮಪ್ಪ, ಪ್ರ. ಕಾರ್ಯದರ್ಶಿ ಇಂದಿರಾ ರಮೇಶ್ ಉಪಸ್ಥಿತರಿದ್ದರು.
ಸಂಭ್ರಮೋತ್ಸವದ ಅಂಗವಾಗಿ ಸಮಾಜ ಬಾಂಧವರಿಗೆ ಹಗ್ಗ ಜಗ್ಗಾಟ, ಕಪ್ಪೆ ಜಿಗಿತ, ಸಂಗೀತ ಕುರ್ಚಿ, ಕಾಳು ಹೆಕ್ಕುವದು, ಪಿನ್ ಜೋಡಣೆ, ಲೋಟಕ್ಕೆ ಬಾಲ್ ಹಾಕುವದು, ಬಲೂನ್ ಒಡೆಯುವದು, ಒಂಟಿ ಕಾಲಿನಲ್ಲಿ ಓಟ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತರುಗಳಿಗೆ ಬಹುಮಾನ ವಿತರಿಸಲಾಯಿತು. ಸಂಭ್ರಮದ ಅಂಗವಾಗಿ ಆಷಾಢ ಮಾಸದ ವಿಶೇಷ ಭಕ್ಷ್ಯ ಭೋಜನಗಳನ್ನು ತಯಾರಿಸಿ, ಉಣಬಡಿಸಲಾಯಿತು.
ಸಂಘದ ಮಾಜಿ ನಿರ್ದೇಶಕರುಗಳಾದ ಕೆ.ಎನ್. ನಾಗರಾಜ್ ಸ್ವಾಗತಿಸಿ, ಬಿ.ಜಿ. ಪ್ರಕಾಶ್ ವಂದಿಸಿದರು. ಸಂಘದ ಉಪಾಧ್ಯಕ್ಷ ಬಿ.ಎ. ಭಾಸ್ಕರ್ ನಿರೂಪಿಸಿದರು.