ಮಡಿಕೇರಿ, ಅ. 8: ನಾಡಹಬ್ಬ ಮಡಿಕೇರಿ ದಸರಾ ಉತ್ಸವದ ಪ್ರಯುಕ್ತ ನಗರದ ಬಾಲಭವನದಲ್ಲಿಂದು ದಸರಾ ಬಹುಭಾಷಾ ಕವಿಗೋಷ್ಠಿ ನಡೆಯಿತು. ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಕವಿಗೋಷ್ಠಿ ಆಯೋಜಿಸಲ್ಪಟ್ಟಿತ್ತು.

ಸುಮಾರು 42 ಮಂದಿ ಕವಿಗಳು ಕವನ ವಾಚನ ಮಾಡಿದರು. ಕನ್ನಡ, ಕೊಡವ, ಅರೆಭಾಷೆ, ತುಳು, ತಮಿಳು, ಕೊಂಕಣಿ, ಹವ್ಯಕ, ಕುಂಬಾರ, ಮರಾಠಿ, ತೆಲುಗು, ಇಂಗ್ಲಿಷ್, ಹಿಂದಿ, ಬ್ಯಾರಿ ಭಾಷೆಗಳ ಕವನಗಳು ಕವಿಗೋಷ್ಠಿಯಲ್ಲಿ ಕೇಳಿ ಬಂದವು. ಮಕ್ಕಳಿಂದಲೂ ಕವನ ವಾಚನ ನಡೆಯಿತು.

ಸುನಿತಾ ಲೋಕೇಶ್, ಐತಿಚಂಡ ರಮೇಶ್ ಉತ್ತಪ್ಪ, ಕಡ್ಲೇರ ತುಳಸಿ ಮೋಹನ್ ಇವರು ಆಹ್ವಾನಿತ ಕವಿಗಳಾಗಿ ಆಗಮಿಸಿದ್ದರು.

ಜಿಲ್ಲಾಧಿಕಾರಿ ಚಾಲನೆ

ಕವಿಗೋಷ್ಠಿಗೆ ಕೊಡಗು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಕ್ರೀಡೆ, ಸೇನಾ ಕ್ಷೇತ್ರಕ್ಕೆ ಎಷ್ಟು ಪ್ರಾಶಸ್ತ್ಯವಿದೆಯೋ ಅಷ್ಟೇ ಪ್ರಾಶಸ್ತ್ಯವನ್ನು ಸಾಹಿತ್ಯ -ಸಂಸ್ಕøತಿಗೂ ನೀಡಲಾಗಿದೆ. ಇದರಿಂದಾಗಿ ಎರಡು ಅಕಾಡೆಮಿಗಳು ಕೊಡಗಿನಲ್ಲಿ ಕಾರ್ಯಾಚರಿಸುತ್ತಿವೆ ಎಂದರು.