ಶ್ರೀಮಂಗಲ, ಆ. 31: ಟಿ. ಶೆಟ್ಟಿಗೇರಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಮಂಚಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಮೇಲಾಟ ಹಾಗೂ ಪಂದ್ಯಾಟಗಳಲ್ಲಿ 38 ಬಹುಮಾನಗಳನ್ನು ತಮ್ಮದಾಗಿಸಿಕೊಂಡು, ಸರಕಾರಿ ಶಾಲೆಯ ವಿದ್ಯಾರ್ಥಿಗಳು ಯಾವದೇ ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗೆ ಕಡಿಮೆ ಇಲ್ಲ ಎಂಬದನ್ನು ತೋರಿಸುವಂತೆ ಸಾಧನೆ ಮಾಡಿದ್ದಾರೆ.

ಗ್ರಾಮೀಣ ಭಾಗದ ಈ ಶಾಲೆಯ ಮಕ್ಕಳು ಬಾಲಕ ಹಾಗೂ ಬಾಲಕಿಯರ ಖೋ-ಖೋ ಪಂದ್ಯಾಟದಲ್ಲಿ ಪ್ರಥಮ, ರಿಲೇ, ಲಾಂಗ್‍ಜಂಪ್ ಮೇಲಾಟಗಳಲ್ಲಿ ಬಾಲಕ-ಬಾಕಿಯರ ವಿಭಾಗದಲ್ಲಿ ಪ್ರಥಮ, ಬಾಲಕ-ಬಾಲಕಿಯರ ವಿಭಾಗದ 200 ಮೀಟರ್ ಓಟದಲ್ಲಿ ಪ್ರಥಮ ಹಾಗೂ ದ್ವಿತೀಯ, ಬಾಲಕ-ಬಾಲಕಿಯರ 100 ಮೀಟರ್ ಓಟದಲ್ಲಿ ಪ್ರಥಮ, ಬಾಲಕ ಬಾಲಕಿಯರ ಹೈಜಂಪ್‍ನಲ್ಲಿ ದ್ವಿತೀಯ ಸ್ಥಾನಗಳು ಸೇರಿದಂತೆ ಒಟ್ಟು 34 ಚಿನ್ನ ಹಾಗೂ 4 ಬೆಳ್ಳಿಯ ಪದಕಗಳನ್ನು ಪಡೆದುಕೊಂಡು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿ ಶಾಲೆಗೆ ಕೀರ್ತಿ ತರುವದರೊಂದಿಗೆ ಸಾರ್ವಜನಿಕರು ಹಾಗೂ ಶಿಕ್ಷಕರ ಗೌರವಕ್ಕೆ ಪಾತ್ರರಾಗಿದ್ದಾರೆ. ಶಾಲೆಗೆ ಭೇಟಿ ನೀಡಿದ ಜಿಲ್ಲಾ ಯೋಜನಾಧಿಕಾರಿ ಭಾಗ್ಯಲಕ್ಷ್ಮಿ ಅವರು ಕ್ರೀಡಾ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಸಾಧನೆಗೆ ಮಾರ್ಗದರ್ಶನ ನೀಡಿದ ಶಾಲಾ ಮುಖ್ಯೋಪಾಧ್ಯಾಯ ಕೊಟ್ರಂಗಡ ಎಂ. ಸೋಮಯ್ಯ, ದೈಹಿಕ ಶಿಕ್ಷಕರು ಹಾಗೂ ಇತರ ಸಹ ಶಿಕ್ಷಕರುಗಳನ್ನು ಅಭಿನಂದಿಸಿದರು.