ಸುಂಟಿಕೊಪ್ಪ, ನ. 8: ಇಲ್ಲಿನ ವಿಜಯ ಬ್ಯಾಂಕ್ ಶಾಖೆಯ ವತಿಯಿಂದ ಭ್ರಷ್ಟಾಚಾರ ನಿಗ್ರಹ ಜಾಗೃತಿ ಅರಿವು ಸಪ್ತಾಹ ನಡೆಯಿತು. ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸ ಲಾಗಿದ್ದ ಭ್ರಷ್ಟಾಚಾರ ನಿಗ್ರಹ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಖಾ ವ್ಯವಸ್ಥಾಪಕ ಸಂದೀಪ್ ಸಮಾಜದ ಸ್ವಾಸ್ಥ್ಯ ಕೆಡಿಸುವ ಭ್ರಷ್ಟಾಚಾರದಿಂದ ದೇಶದ ಪ್ರಗತಿ ಕುಂಠಿತವಾಗಿದೆ. ಲಂಚ ಕೊಡುವದು-ತೆಗೆದುಕೊಳ್ಳುವದು ಎರಡು ಅಪರಾಧವಾಗಿದೆ. ಭ್ರಷ್ಟಾಚಾರದ ಪೆಡುಂಭೂತ ಸಮಾಜದ ಎಲ್ಲೆಡೆ ಹರಡಿದ್ದು ಇದನ್ನು ಪ್ರಜ್ಞಾವಂತ ನಾಗರಿಕರು ಜನಾಂದೋಲನದ ಮೂಲಕ ಶಮನ ಮಾಡಲು ಶಕ್ತಿಮೀರಿ ಶ್ರಮಿಸಬೇಕೆಂದು ಹೇಳಿದರು.
ಸಹಾಯಕ ವ್ಯವಸ್ಥಾಪಕ ರಂಗನಾಥ ಮಾತನಾಡಿ, ಸರಕಾರಿ ಕಚೇರಿಗಳಲ್ಲಿ ಲಂಚವಿಲ್ಲದೆ ಕೆಲಸ ಕಾರ್ಯಗಳು ಸುಲಲಿತವಾಗಿ ನಡೆಯುತ್ತಿಲ್ಲ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಕಂದಾಯ ಕಚೇರಿಗಳಲ್ಲಿ ಲಂಚವಿಲ್ಲದೆ ಯಾವದೇ ಕೆಲಸ ಮುಂದೆ ಸಾಗುª Àದಿಲ್ಲ. ಸಿಸಿ ಕ್ಯಾಮೆರಾ ಅಳವಡಿಸಿದ್ದರೂ ಅದು ಚಾಲನೆಯಲ್ಲಿರುವದರಿಂದ ಸರಕಾರಿ ಕೆಲಸದ ಸಮಯ 5 ಗಂಟೆ ಕಳೆದ ನಂತರ ಎಲ್ಲಾ ಕಚೇರಿ ತೆರೆಯಲಾಗುತ್ತಿದ್ದು ಎಲ್ಲಾ ಕೆಲಸಗಳು ಲಂಚದಿಂದ ಸುಗಮವಾಗಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಜನರ ಹೋರಾಟ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ಸಭೆಗೆ ಆಗಮಿಸಿದ್ದ ಸಾರ್ವಜನಿಕರಿಗೆ ಲಂಚ ಕೊಡುವದಿಲ್ಲ ಮತ್ತು ತೆಗೆದುಕೊಳ್ಳುವದಿಲ್ಲ ಎಂಬ ಪ್ರತಿಜ್ಞಾ ವಿಧಿಯನ್ನು ವ್ಯವಸ್ಥಾಪಕ ಸಂದೀಪ್ ಬೋಧಿಸಿದರು.
ಸಭೆಯಲ್ಲಿ ಚೇಂಬರ್ ಆಫ್ ಕಾಮರ್ಸ್ನ ಸ್ಥಾನೀಯ ಸಮಿತಿ ನಿರ್ದೇಶಕ ಕೆ.ಪಿ. ಜಗನ್ನಾಥ್, ಕೊಡಗರಹಳ್ಳಿ ಶಾಂತಿನಿಕೇತನ ಶಾಲೆಯ ಕಾರ್ಯದರ್ಶಿ ಸಿ.ಎ. ಉತ್ತಯ್ಯ, ಸುಂಟಿಕೊಪ್ಪ ಕೊಡವ ಸಮಾಜದ ಉಪಾಧ್ಯಕ್ಷ ಎಂ.ಎ. ವಸಂತ, ವರ್ತಕರುಗಳಾದ ಮಂಜುನಾಥ್ ಶೇಟ್, ಅಶೋಕ್ ಶೇಟ್, ಮುರುಳೀಧರ ಕಾಮತ್, ವಿಜಯ ಬ್ಯಾಂಕ್ ಸಿಬ್ಬಂದಿಗಳಾದ ಗಂಗಾಧರ, ವಸಂತ್ ಕುಮಾರ್, ಸತೀಶ್ ಉಪಸ್ಥಿತರಿದ್ದರು.