ಸೋಮವಾರಪೇಟೆ, ಜ. 27: ನರೇಂದ್ರ ಮೋದಿ ನೇತೃತ್ವದ ಸರ್ಕಾರ 500 ಹಾಗೂ 1000 ಮುಖಬೆಲೆಯ ನೋಟ್‍ಗಳನ್ನು ರದ್ದು ಮಾಡಿ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದರೂ ಸಹ ಅಡ್ಡದಾರಿಯಲ್ಲಿ ಹಣ ಬದಲಾವಣೆಗೆ ಮುಂದಾದ ಪಕ್ಷದ ಕಾರ್ಯಕರ್ತನ ಪರವಾಗಿ ಕಾಂಗ್ರೆಸ್ ಸೋಮವಾರಪೇಟೆಯಲ್ಲಿ ಹೋರಾಟ ಮಾಡಿರುವದು ಖಂಡನೀಯ ಎಂದು ಶಾಸಕ ರಂಜನ್ ಪ್ರತಿಕ್ರಿಯಿಸಿದ್ದಾರೆ.

ತಾ.ಪಂ. ಸಭಾಂಗಣದಲ್ಲಿ ಕಾಂಗ್ರೆಸ್ ಸದಸ್ಯನ ಮೇಲೆ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ನಡೆಸಿದ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿದ ಶಾಸಕರು, ಭ್ರಷ್ಟಾಚಾರದ ಪರವಾಗಿ ಕಾಂಗ್ರೆಸ್ ಹೋರಾಟ ಮಾಡಿದ್ದು ಸರಿಯಲ್ಲ ಎಂದರು.

ನೋಟ್ ರದ್ದು ಆದ ಕೆಲವೇ ದಿನಗಳಲ್ಲಿ 35 ಲಕ್ಷದಷ್ಟು ಬೃಹತ್ ಮೊತ್ತದ 2 ಸಾವಿರ ಮೌಲ್ಯದ ನೋಟುಗಳು ಕಾಂಗ್ರೆಸ್ ಸದಸ್ಯನಿಗೆ ಎಲ್ಲಿಂದ ಬಂತು? ಎಂಬ ಬಗ್ಗೆ ಸಮಗ್ರ ತನಿಖೆ ನಡೆಯಬೇಕಿದೆ. ಕಾಂಗ್ರೆಸ್ ಸದಸ್ಯ ಚುನಾವಣಾ ಆಯೋಗಕ್ಕೆ ವಾರ್ಷಿಕ 3.50 ಲಕ್ಷ ಆದಾಯ ತೋರಿಸಿದ್ದು, ರೆಸಾರ್ಟ್‍ನಲ್ಲಿ ಸಿಕ್ಕಿದ 35 ಲಕ್ಷದಷ್ಟು ದೊಡ್ಡ ಪ್ರಮಾಣದ ಹಣ ಯಾರದು? ಎಲ್ಲಿಂದ ಬಂತು? 3.50 ಲಕ್ಷ ಆದಾಯ ಇರುವವರು ಕೋಟ್ಯಾಧಿಪತಿ ಆಗಿದ್ದು ಹೇಗೆ? ಎಂಬ ಬಗ್ಗೆ ಸಮಗ್ರ ತನಿಖೆ ನಡೆಯಬೇಕಿದೆ ಎಂದರು.

ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಎಲ್ಲವೂ ತಿಳಿದಿದ್ದರೂ ಸಹ ಭ್ರಷ್ಟಾಚಾರವನ್ನು ಹತ್ತಿಕ್ಕಲು ಮುಂದಾಗದೇ ಇರುವದು ಶೋಚನೀಯ. ರಾಜಕೀಯ ವಲಯದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲೇಬೇಕು ಎಂಬ ಚಿಂತನೆ ಸಮಾಜದ ಎಲ್ಲಾ ವರ್ಗದವರಲ್ಲೂ ಇದ್ದು, ಕಾಂಗ್ರೆಸ್ ಮಾತ್ರ ವ್ಯತಿರಿಕ್ತವಾಗಿ ವರ್ತಿಸುವ ಮೂಲಕ ಭ್ರಷ್ಟಾಚಾರಿಗಳ ರಕ್ಷಣೆಗೆ ನಿಂತಿರುವದು ವಿಷಾದನೀಯ ಎಂದರು. ನಗರದಲ್ಲಿ ನಡೆದ ಪ್ರತಿಭಟನೆ ಜನವಿರೋಧಿ ಹೋರಾಟವಾಗಿದೆಯಷ್ಟೇ ಎಂದು ಟೀಕಿಸಿದರು.

ರಾಜ್ಯ ಸರ್ಕಾರದ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಇತರರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಧಾಳಿ ನಡೆಸಿದ ಸಂದರ್ಭ ಕೋಟ್ಯಾಂತರ ಮೌಲ್ಯದ ಆಸ್ತಿಪಾಸ್ತಿ, ನಗದು, ಚಿನ್ನ ಪತ್ತೆಯಾಗಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಸತ್ಯಾಂಶ ಹೊರಬರಬೇಕು ಎಂದರು.

ತಕ್ಷಣಕ್ಕೆ ಈ ಸಚಿವರನ್ನು ಸಂಪುಟದಿಂದ ಹೊರಹಾಕಬೇಕು. ವಿರೋಧ ಪಕ್ಷದವರು ರಾಜೀನಾಮೆಗೆ ಆಗ್ರಹಿಸುವ ಮೊದಲೇ ಸಿದ್ದರಾಮಯ್ಯ ಅವರು ಬದ್ಧತೆ ಪ್ರದರ್ಶಿಸಿ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು.