ಮಡಿಕೇರಿ, ಆ. 18: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ಕೊಡಗು, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಅರಣ್ಯ ಪ್ರದೇಶದಲ್ಲಿ, ಅಭಯಾರಣ್ಯದಲ್ಲಿ ವಾಸಿಸುವ ಬುಡಕಟ್ಟು ಸಮುದಾಯದ ಪ್ರತಿ ಕುಟುಂಬಗಳಿಗೂ ಅರಣ್ಯ ಹಕ್ಕು ಕಾಯ್ದೆ 2006ರಂತೆ 4 ಹೆಕ್ಟೇರ್ ಭೂಮಿಗೆ ಹಕ್ಕು ಪತ್ರ ನೀಡಬೇಕು, ಅರಣ್ಯದಲ್ಲಿ ವಸತಿಯ ಹಕ್ಕನ್ನು ಮಾನ್ಯ ಮಾಡಬೇಕು, ನಮ್ಮ ಎಲ್ಲಾ ಹಾಡಿಗಳಿಗೆ ಪಾರಂಪರಿಕ ಹಕ್ಕು ಮತ್ತು ಜೀವನಾಧಾರದ ಹಕ್ಕನ್ನು ಒಳಗೊಂಡು ಅರಣ್ಯ ಹಕ್ಕು ಕಾಯ್ದೆ 2006ರಂತೆ ಸಮುದಾಯ ಹಕ್ಕು ಪತ್ರ ನೀಡಬೇಕು. ಅರಣ್ಯ ಪ್ರದೇಶದ ಹೊರಗಿರುವ ಬುಡಕಟ್ಟು ಕುಟುಂಬಗಳಿಗೆ ಪ್ರತೀ ಕುಟುಂಬಕ್ಕೆ 5 ಎಕರೆ ಪೈಸಾರಿ ಭೂಮಿ ನೀಡಬೇಕು, ಭೂಗಳ್ಳರು ಕಬಳಿಸಿರುವ ಭೂಮಿ ಮತ್ತು ಶ್ರೀಮಂತರು ಒತ್ತುವರಿ ಮಾಡಿರುವ ಜಮೀನನ್ನು ಸರ್ಕಾರ ವಶಪಡಿಸಿಕೊಂಡು ಬುಡಕಟ್ಟು ಸಮುದಾಯದವರಿಗೆ, ದಲಿತ ಸಮುದಾಯದವರಿಗೆ ಮತ್ತು ಬಡವರಿಗೆ ಹಂಚಬೇಕು.
ಭೂ ಮಿತಿ ಕಾಯ್ದೆಯನ್ನು ಪರಿಷ್ಕರಿಸಬೇಕು, ದೇವರ ಕಾಡುಗಳಲ್ಲಿ ವಾಸ ಮಾಡಿಕೊಂಡಿರುವ ಕುಟುಂಬಗಳ ಅರಣ್ಯ ಹಕ್ಕು ಮತ್ತು ವಾಸದ ಹಕ್ಕನ್ನು ಮಾನ್ಯ ಮಾಡಿ ಪ್ರತಿಯೊಂದು ಕುಟುಂಬಕ್ಕೂ ತಲಾ 4 ಹೆಕ್ಟರ್ ಭೂಮಿಗೆ ಹಕ್ಕು ಪತ್ರ ನೀಡಬೇಕು. ಹಾಗೆಯೇ ಸಮುದಾಯ ಹಕ್ಕು ಪತ್ರ ನೀಡಬೇಕು, ಕೊಡಗು ಜಿಲ್ಲೆಯ ಎಸ್ಟೇಟ್‍ಗಳ ಲೈನ್ ಮನೆಗಳಲ್ಲಿ ವಾಸಮಾಡಿಕೊಂಡಿರುವ ಬುಡಕಟ್ಟು ಕುಟುಂಬಗಳನ್ನು ಹೊರಗೆ ತಂದು ಅವರಿಗೆ ಪ್ರತೀ ಕುಟುಂಬಕ್ಕೂ ತಲಾ 5 ಎಕರೆ ಕೃಷಿ ಭೂಮಿ ನೀಡಿ ಪುನರ್ವಸತಿ ನೀಡಬೇಕು. ಎಂಬಿತ್ಯಾದಿ ಬೇಡಿಕೆಗಳನ್ನೊಳ ಗೊಂಡ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ಸತೀಶ್‍ಕುಮಾರ್ ಅವರಿಗೆ ಪ್ರತಿಭಟನಾಕಾರರು ಸಲ್ಲಿಸಿದರು.