ಕುಶಾಲನಗರ, ಅ. 16: ಪ್ರವಾಸಕ್ಕೆಂದು ಜಿಲ್ಲೆಗೆ ಆಗಮಿಸಿದ ಯುವಕರ ಕಾರೊಂದು ಅಪಘಾತಕ್ಕೊಳಗಾಗಿ 3 ಮಂದಿ ಮೃತಪಟ್ಟು ಮೂವರು ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಕುಶಾಲನಗರ ಸಮೀಪದ ಬಸವನಹಳ್ಳಿಯ ಬಳಿ ಆನೆಕಾಡು ಅರಣ್ಯ ವ್ಯಾಪ್ತಿಯ ಹೆದ್ದಾರಿಯಲ್ಲಿ ಭಾನುವಾರ ಬೆಳಗ್ಗಿನ ಜಾವ ನಡೆದಿದೆ.
ಮಡಿಕೇರಿಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಯುವಕರ ಕಾರು ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿಯಾಗಿ ಘಟನೆ ಸಂಭವಿಸಿದೆ. ಘಟನೆಯಲ್ಲಿ ಮೈಸೂರಿನ ಕೆ.ಜಿ. ಕೊಪ್ಪಲು ಮೂಲದ ನಂದೀಶ್ (19), ಚಂದ್ರು (18), ಚೇತನ್ (19) ಸ್ಥಳದಲ್ಲೆ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡ ಪ್ರತಾಪ್, ಶಿವಕುಮಾರ್ ಮತ್ತು ಸುಹಾಸ್‍ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಎಸ್. ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಓರ್ವನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಮಾರುತಿ ಬಲೇನೋ ಕಾರು (ಕೆ.ಎ 04 ಎಂಸಿ 7805) ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಗೋಡೆಗೆ ಅಪ್ಪಳಿಸಿ ಮಗುಚಿ ಬಿದ್ದ ಪರಿಣಾಮ ಈ ಘಟನೆ ನಡೆದಿದೆ ಎಂದು ಕುಶಾಲನಗರ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ. ಭಾನುವಾರ ಬೆಳಿಗ್ಗೆ 1 ಗಂಟೆಯ ಸುಮಾರಿಗೆ ಅಪಘಾತ ನಡೆದಿದೆ. ಸ್ಥಳೀಯರಿಂದ ಮಾಹಿತಿ ದೊರೆತ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಕೂಡಲೇ ಗಾಯಾಳುಗಳನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಮೈಸೂರಿನ ಕೆ.ಜಿ. ಕೊಪ್ಪಲಿನ ಯುವಕರು ಪ್ರವಾಸಕ್ಕೆಂದು ಮಡಿಕೇರಿಗೆ ಬಂದು ನಂತರ ತಡರಾತ್ರಿಯಲ್ಲಿ ಮೈಸೂರಿನ ಕಡೆ ಹಿಂದಿರುಗುತ್ತಿರುವ ಸಂದರ್ಭ ಈ ಘಟನೆ ನಡೆದಿದೆ ಎನ್ನಲಾಗಿದೆ. ಮೃತ ಯುವಕರಲ್ಲಿ ನಂದೀಶ್ ಮೈಸೂರಿನ ಕಾವೇರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ.
ತಡರಾತ್ರಿಯಲ್ಲಿ ಭಾರೀ ಪ್ರಮಾಣದ ಸದ್ದು ಕೇಳಿದ ಹಿನ್ನೆಲೆಯಲ್ಲಿ ರಸ್ತೆ ಬದಿಯ ನಿವಾಸಿ ಸೀತಾರಾಂ ಎಂಬವರು ಸ್ಥಳಕ್ಕೆ ಬಂದು ನೋಡಿದ ಸಂದರ್ಭ ಯುವಕರ ದೇಹ ರಸ್ತೆಯಲ್ಲಿ ಬಿದ್ದಿದ್ದ ದೃಶ್ಯ ಗೋಚರಿಸಿದೆ. ತಕ್ಷಣ ಪೊಲೀಸರಿಗೆ
(ಮೊದಲ ಪುಟದಿಂದ) ಮಾಹಿತಿ ನೀಡಿರುವದಾಗಿ ತಿಳಿಸಿದ ಸೀತಾರಾಂ ಸ್ಥಳೀಯರ ಸಹಕಾರದೊಂದಿಗೆ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಕ್ರಮ ಕೈಗೊಂಡಿರುವದಾಗಿ ತಿಳಿಸಿದ್ದಾರೆ. ಅತೀ ವೇಗದ ಚಾಲನೆಯ ಘಟನೆಗೆ ಕಾರಣ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಹೆದ್ದಾರಿ ಬದಿಯಲ್ಲಿ ಅಳವಡಿಸಿರುವ ಭಾರೀ ಗಾತ್ರದ ವಿಭಜಕಗಳಿಗೆ ಕಾರು ಡಿಕ್ಕಿಯಾಗಿದ್ದು, ಹತ್ತಕ್ಕೂ ಅಧಿಕ ವಿಭಜಕಗಳು ಕಾರಿನ ರಭಸಕ್ಕೆ ಕಿತ್ತುಹೋಗಿರುವ ದೃಶ್ಯ ಗೋಚರಿಸಿದೆ. ಹೆದ್ದಾರಿಯ ರಸ್ತೆಯಲ್ಲಿ ರಕ್ತದ ಓಕುಳಿ ಹರಿದ ದೃಶ್ಯ ಅಪಘಾತ ತೀವ್ರತೆಯನ್ನು ನೋಡುಗರ ಕಣ್ಣಿಗೆ ಬಿಂಬಿಸುತ್ತಿತ್ತು. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಜೆ.ಇ. ಮಹೇಶ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.