ಮಡಿಕೇರಿ, ಡಿ. 24: ದೇಶದ ಹಾಕಿ ಇತಿಹಾಸದಲ್ಲಿ ಕೊಡಗು ಜಿಲ್ಲೆಯ ಹಾಕಿ ಆಟಗಾರರು ತಮ್ಮ ಸಾಧನೆ-ಪ್ರತಿಭೆಯ ಮೂಲಕ ಗಮನ ಸೆಳೆದಿದ್ದಾರೆ. ಭಾರತ ಹಾಕಿ ತಂಡವನ್ನು ಹಲವಾರು ಮಂದಿ ಪ್ರತಿನಿಧಿಸಿದ್ದು ಇವರ ಪೈಕಿ ಕೆಲವರು ತಂಡದ ನಾಯಕತ್ವವನ್ನು ನಿಭಾಯಿಸಿರುವದು ಪುಟ್ಟ ಕೊಡಗಿನ ಕ್ರೀಡಾ ಹಿರಿಮೆಗೆ ಹೆಮ್ಮೆಯ ವಿಚಾರ. ಪುರುಷರ ತಂಡವನ್ನು ಸಾಕಷ್ಟು ಮಂದಿ ಪ್ರತಿನಿಧಿಸಿದ್ದಾರೆ. ಇದೀಗ ತಾವೇನೂ ಕಡಿಮೆ ಇಲ್ಲ ಎಂಬಂತೆ ಮಹಿಳಾ ಆಟಗಾರ್ತಿಯರೂ ದೇಶವನ್ನು ಪ್ರತಿನಿಧಿಸುತ್ತಿರುವದು ಕೊಡಗಿನ ಆಶಾದಾಯಕ ಬೆಳವಣಿಗೆ.

ಒಂದೆರಡು ವರ್ಷದ ಹಿಂದೆ ಮಹಿಳಾ ಜೂನಿಯರ್ ವಿಶ್ವಕಪ್ ಹಾಕಿಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ್ದ ಕೊಡಗಿನ ಕುವರಿ ಮಲ್ಲಮಾಡ ಪೊನ್ನಮ್ಮ ಪದಕದ ಸಾಧನೆಯೊಂದಿಗೆ ಜಿಲ್ಲೆಗೆ ಕೀರ್ತಿ ತಂದಿದ್ದಳು. ಇದೀಗ ಹಿರಿಯಕ್ಕನ ಹಾದಿಯಲ್ಲಿ ಯುವ ಪ್ರತಿಭೆಯಾಗಿ ಮತ್ತೊಬ್ಬ ಯುವತಿ ಕೊಡಗಿನ ಹಾಕಿ ಇತಿಹಾಸವನ್ನು ನೆನಪಿಸುತ್ತಿದ್ದಾಳೆ.

ದಕ್ಷಿಣ ಕೊಡಗಿನ ಬೆಕ್ಕೆಸೊಡ್ಲೂರು ಗ್ರಾಮದವರಾದ ಪೊನ್ನಮ್ಮಳ ಕುಟುಂಬಕ್ಕೇ ಸೇರಿದ ಮಲ್ಲಮಾಡ ಲೀಲಾವತಿ ದೇಶಕ್ಕೆ ಕೊಡಗಿನ ಹೊಸ ಪ್ರತಿಭೆ... ಈಕೆ ಪ್ರಪ್ರಥಮ ಬಾರಿಗೆ ಭಾರತ ತಂಡದ ಕದ ತಟ್ಟಿದ್ದಾಳೆ. ತನ್ನ ಪ್ರೌಢಿಮೆಯಿಂದ 18ರ ವಯೋಮಿತಿಯೊಳಗಿನ ಭಾರತ ತಂಡದಲ್ಲಿ ಲೀಲಾವತಿ ಇತ್ತೀಚೆಗಷ್ಟೆ ಸ್ಥಾನ ಪಡೆದಿದ್ದಳು. ತಂಡಕ್ಕೆ ಆಯ್ಕೆಗೊಂಡ ಬಳಿಕ ಎದುರಾಗಿದ್ದು, 18ರ ವಯೋಮಿತಿಯೊಳಗಿನ ಏಷ್ಯಾ ಕಪ್ ಹಾಕಿ ಪಂದ್ಯಾಟ. ಎಂಟು ರಾಷ್ಟ್ರಗಳು ಪಾಲ್ಗೊಂಡಿದ್ದ ಈ ಏಷ್ಯಾ ಕಪ್ ಹಾಕಿ ಈಕೆಗೆ ಸ್ಮರಣೀಯ... ಮಾತ್ರವಲ್ಲದೆ ಭಾರತಕ್ಕೂ ಕಂಚಿನ ಪದಕ ಲಭ್ಯವಾಗಿದೆ. ಬ್ಯಾಂಕಾಕ್‍ನಲ್ಲಿ ಡಿ. 22 ರಂದು ಭಾರತದ ಯುವತಿಯರು ಕಂಚಿನ ಪದಕದ ಸಾಧನೆ ಮಾಡಿದ್ದಾರೆ. ಭಾರತ, ಜಪಾನ್, ಕೊರಿಯಾ, ಥೈಲ್ಯಾಂಡ್, ಮಲೇಷಿಯಾ, ಸಿಂಗಾಪುರ್, ಚೈನೀಸ್ ಥೈಪೆ ಹಾಗೂ ಚೈನಾ ಏಷ್ಯಾ ಕಪ್‍ನಲ್ಲಿ ಪಾಲ್ಗೊಂಡಿದ್ದವು.

ಕರ್ನಾಟಕ ರಾಜ್ಯದಿಂದ ಏಕೈಕ ಆಟಗಾರ್ತಿಯಾಗಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಲೀಲಾವತಿ ಮಡಿಕೇರಿಯ ಸಾಯಿ ಕ್ರೀಡಾ ವಸತಿ ನಿಲಯದ ಆಟಗಾರ್ತಿಯಾಗಿದ್ದು, ಫೀ.ಮಾ. ಕಾರ್ಯಪ್ಪ ಕಾಲೇಜಿನಲ್ಲಿ ಪ್ರಥಮ ಬಿ.ಕಾಂ. ಓದುತ್ತಿದ್ದಾಳೆ. ಚೊಚ್ಚಲ ಪಂದ್ಯದಲ್ಲಿ ಭಾರತ

4-0 ಗೋಲಿನಿಂದ ಜಯ ಸಾಧಿಸಿದ್ದು, ಇದರಲ್ಲಿ ಪ್ರಥಮ ಗೋಲು ದಾಖಲಿಸಿದ್ದು, ಮುನ್ನಡೆ ಆಟಗಾರ್ತಿಯಾದ ಕೊಡಗಿನ ಯುವತಿ.

ಲೀಗ್ ಹಂತದ ಎಲ್ಲಾ ಪಂದ್ಯದಲ್ಲಿ ಜಯಗಳಿಸಿದ್ದ ಭಾರತ ಸೆಮಿಪೈನಲ್‍ನಲ್ಲಿ ಕೊನೆಯ ಕ್ಷಣದಲ್ಲಿ ಎಡವಿ ಫೈನಲ್ ತಲುಪಲು ವಿಫಲವಾದರೂ ಕಂಚಿನ ಪದಕಕ್ಕೆ ನಡೆದ ಪಂದ್ಯದಲ್ಲಿ ಕೊರಿಯಾ ತಂಡವನ್ನು 3-0 ಗೋಲಿನಿಂದ ಮಣಿಸಿ ಕಂಚಿನ ಪದಕದ ಸಾಧನೆ ಮಾಡಿದೆ.

ಒಲಂಪಿಕ್ಸ್ ನನ್ನ ಗುರಿ

ಬ್ಯಾಂಕಾಕ್‍ನಿಂದ ಇಂದಷ್ಟೆ ಮಡಿಕೇರಿಗೆ ತಲುಪಿದ ಲೀಲಾವತಿ ‘ಶಕ್ತಿ’ಯೊಂದಿಗೆ ಸಂತಸ ಹಂಚಿಕೊಂಡಳು. ಸೆಮಿಫೈನಲ್‍ನಲ್ಲಿ ಭಾರತ

1-0 ಗೋಲಿನ ಮುನ್ನಡೆಯಲ್ಲಿತ್ತಾದರೂ ಕೊನೆಯ ಕ್ಷಣದಲ್ಲಿ ಅಂತರ ಸಮವಾದ್ದರಿಂದ ಶೂಟ್‍ಔಟ್‍ನಲ್ಲಿ ಸೋಲು ಕಂಡಿದ್ದು, ಇದು ನಿರಾಶೆಯಾಗಿದೆ. ಆದರೂ ತಂಡಕ್ಕೆ ಕಂಚಿನ ಪದಕ ಬಂದಿರುವದು ಹಾಗೂ ಚೊಚ್ಚಲ ಪಂದ್ಯದಲ್ಲಿ ಭಾರತದ ಪರ ಪ್ರಥಮ ಗೋಲು ದಾಖಲಿಸಿರುವದು ತನ್ನ ಪಾಲಿಗೆ ಸ್ಮರಣೀಯ. ಭವಿಷ್ಯದಲ್ಲಿ ಭಾರತ ಸೀನಿಯರ್ ತಂಡದಲ್ಲಿ ಸ್ಥಾನ ಪಡೆಯುವದರೊಂದಿಗೆ ಒಲಂಪಿಕ್ಸ್ ಆಡುವದು ತನ್ನ ಗುರಿ ಎಂದು ಲೀಲಾವತಿ ಆಶಾಭಾವ ವ್ಯಕ್ತಪಡಿಸಿದಳು.

ತಮ್ಮ ಕುಟುಂಬದ ಅಕ್ಕಳೇ ಆದ ಪೊನ್ನಮ್ಮ ತನಗೆ ಸ್ಪೂರ್ತಿ... ಇದರೊಂದಿಗೆ ಬಾಲ್ಯದಲ್ಲಿ ಪೊನ್ನಂಪೇಟೆ ಸೆಂಟ್ ಆ್ಯಂಟನಿ ಶಾಲೆಯ ದೈಹಿಕ ಶಿಕ್ಷಕ ಅರುಣ್, ಸಾಯಿ ತರಬೇತುದಾರರಾದ ಮುತ್ತು ಕುಮಾರ್, ಸುರೇಶ್ ಎಡಿನಾ, ವಿವೇಕ್ ಚತುರ್ವೇದಿ, ಮಡಿಕೇರಿ ಜೂನಿಯರ್ ಕಾಲೇಜಿನ ಶ್ರೀನಿವಾಸ್, ತಂದೆ, ತಾಯಿ ಸೇರಿದಂತೆ ಉತ್ತೇಜನ ನೀಡಿದ ಎಲ್ಲರನ್ನೂ ಸ್ಮರಿಸಿಕೊಳ್ಳುವದಾಗಿ ಭವಿಷ್ಯದ ಆಟಗಾರ್ತಿಯಾಗುವ ಭರವಸೆ ಮೂಡಿಸಿರುವ ಲೀಲಾವತಿ ತನ್ನ ಮನದಾಳ ಹೇಳಿಕೊಂಡಳು.

ಬ್ಯಾಂಕಾಕ್‍ನಿಂದ ಮರಳಿದ ಭಾರತ ತಂಡವನ್ನು ಹಾಕಿ ಇಂಡಿಯಾ ನಿನ್ನೆ ದೆಹಲಿಯಲ್ಲಿ ಆತ್ಮೀಯ ಸ್ವಾಗತದೊಂದಿಗೆ ಬರಮಾಡಿಕೊಂಡಿದ್ದು, ತಂಡದ ಎಲ್ಲಾ ಆಟಗಾರರಿಗೂ ತಲಾ ರೂ 1 ಲಕ್ಷ ಬಹುಮಾನ ಪ್ರಕಟಿಸಿ ಉತ್ತೇಜಿಸಿದೆ. ಲೀಲಾವತಿ ಬೆಕ್ಕೆಸೊಡ್ಲೂರುವಿನ ಮಲ್ಲಮಾಡ ಜಯ ಹಾಗೂ ವಾಣಿ ದಂಪತಿಯ ಪುತ್ರಿ.

-ಶಶಿ ಸೋಮಯ್ಯ